ಫೇಸ್‌ಬುಕ್ ಮಾತುಕತೆಗೆ ಮರಳಿದೆ: ಆಸ್ಟ್ರೇಲಿಯ ಪ್ರಧಾನಿ ಸ್ಕಾಟ್ ಮೊರಿಸನ್

Update: 2021-02-20 18:43 GMT

ಕ್ಯಾನ್‌ಬೆರ (ಆಸ್ಟ್ರೇಲಿಯ), ಫೆ. 20: ಫೇಸ್‌ಬುಕ್ ತನ್ನ ಆಸ್ಟ್ರೇಲಿಯ ಮಾಧ್ಯಮದಲ್ಲಿ ಸುದ್ದಿ ಹಂಚಿಕೆಯನ್ನು ತಡೆಹಿಡಿದ ಬಳಿಕ, ಈಗ ಮಾತುಕತೆಯ ಮೇಜಿಗೆ ಹಿಂದಿರುಗಿದೆ ಎಂದು ದೇಶದ ಪ್ರಧಾನಿ ಸ್ಕಾಟ್ ಮೊರಿಸನ್ ಶನಿವಾರ ಹೇಳಿದ್ದಾರೆ.

ಫೇಸ್‌ಬುಕ್ ಮತ್ತು ಗೂಗಲ್‌ನಲ್ಲಿ ಹಂಚಿಕೆಯಾಗುವ ಸುದ್ದಿಗಳಿಗೆ ಈ ಕಂಪೆನಿಗಳು ಸಂಬಂಧಪಟ್ಟ ಮಾಧ್ಯಮ ಸಂಸ್ಥೆಗಳಿಗೆ ಹಣ ಪಾವತಿಸಬೇಕು ಎಂದು ಹೆಳುವ ಆಸ್ಟ್ರೇಲಿಯದ ನೂತನ ಕಾನೂನನ್ನು ಪ್ರತಿಭಟಿಸಿ ಫೇಸ್‌ಬುಕ್ ಈ ಅಭೂತಪೂರ್ವ ಕ್ರಮವನ್ನು ತೆಗೆದುಕೊಂಡಿದೆ.

‘‘ಫೇಸ್‌ಬುಕ್ ಪ್ರಾಯೋಗಿಕವಾಗಿ ನಮ್ಮೊಂದಿಗೆ ಮತ್ತೆ ರಾಜಿ ಮಾಡಿಕೊಂಡಿದೆ’’ ಎಂದು ಸಿಡ್ನಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮೊರಿಸನ್ ಹೇಳಿದರು. ‘‘ಫೇಸ್‌ಬುಕ್ ಮಾತುಕತೆಯ ಮೇಜಿಗೆ ಮರಳಿರುವುದಕ್ಕೆ ನನಗೆ ಸಂತೋಷವಾಗಿದೆ’’ ಎಂದರು.

ಆದರೆ, ಪ್ರಸ್ತಾಪಿತ ಕಾನೂನಿಗೆ ತಾನು ಹೊಂದಿರುವ ವಿರೋಧದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂಬ ಸೂಚನೆಯನ್ನು ಫೇಸ್‌ಬುಕ್ ಸಾರ್ವಜನಿಕವಾಗಿಯೇ ನೀಡಿದೆ.

ಈ ಮಹತ್ವದ ಕಾನೂನಿನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂಬುದಾಗಿ ಆಸ್ಟ್ರೇಲಿಯ ಘೋಷಿಸಿದ ಬಳಿಕ, ಬಿಕ್ಕಟ್ಟು ಎದುರಾಗಿದೆ. ಆಸ್ಟ್ರೇಲಿಯದ ಕಾನೂನಿನ ಬಗ್ಗೆ ಕೆನಡ ಮುಂತಾದ ದೇಶಗಳು ಆಸಕ್ತಿ ವ್ಯಕ್ತಪಡಿಸಿದ್ದು, ಈ ಕಾನೂನು ಜಾಗತಿಕ ಮಟ್ಟದಲ್ಲಿ ಪೂರ್ವನಿದರ್ಶನವೊಂದನ್ನು ಸೃಷ್ಟಿಸಬಹುದು ಎಂದು ಭಾವಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News