ನೋಟಿಸ್ ಕೊಟ್ಟು ಬಾಯಿ ಮುಚ್ಚಿಸಲು ಸಾಧ್ಯವಿಲ್ಲ: ಸಿಎಂ ವಿರುದ್ಧ ಮತ್ತೆ ಶಾಸಕ ಯತ್ನಾಳ್ ವಾಗ್ದಾಳಿ

Update: 2021-02-21 15:23 GMT

ಬೆಂಗಳೂರು, ಫೆ. 21: ‘ನನಗೆ ನೋಟಿಸ್ ನೀಡಿ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ. ನೋಟಿಸ್‍ಗೆ ಅಂಜುವ ಮಗ ನಾನಲ್ಲ. ಆ ರೀತಿ ನೀವು ತಿಳಿದುಕೊಂಡಿದ್ದರೆ ಕುರ್ಚಿ ಖಾಲಿ ಮಾಡಬೇಕಾಗುತ್ತದೆ. ಮೀಸಲಾತಿಗಾಗಿ ಆಗ್ರಹಿಸಿ ಮನವಿಗಳನ್ನು ಕೊಟ್ಟು ಕೊಟ್ಟು ಸಾಕಾಗಿದೆ, ನಾವು ಮೀಸಲಾತಿ ಪಡೆದುಕೊಂಡೇ ಹಿಂದಿರಗುವವರು' ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇಂದಿಲ್ಲಿ ಗುಡುಗಿದ್ದಾರೆ.

ರವಿವಾರ ಇಲ್ಲಿನ ಅರಮನೆ ಮೈದಾನದಲ್ಲಿ ಏರ್ಪಡಸಿದ್ದ ಲಿಂಗಾಯತ ಪಂಚಮಸಾಲಿ ಸಮುದಾಯದ ಬೃಹತ್ ಸಮಾವೇಶವನ್ನು ಖಡ್ಗ ಝಳಪಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ‘ಇವರ ನಾಟಕ ಕಂಪೆನಿಯ ಬಗ್ಗೆ ನನಗೆ ಎಲ್ಲ ಗೊತ್ತಿದೆ. ಮೀಸಲಾತಿಗಾಗಿ ಇಪ್ಪತ್ತೈದು ಸಂಸದರನ್ನು ಕರೆದುಕೊಂಡು ದಿಲ್ಲಿಗೆ ಹೋಗಿ ಎಂದು ಹೇಳುತ್ತಾರೆ. ಆದರೆ, ನಾನೇಕೆ ದಿಲ್ಲಿಗೆ ಹೋಗಲಿ. ಬೀಗದ ಕೈ ನಿಮ್ಮ ಬಳಿ ಇಟ್ಟುಕೊಂಡು ನಮ್ಮನ್ನು ಬೇರೆಯವರ ಮನೆಗೆ ಹೋಗಿ ಎಂದು ಏಕೆ ಕೈ ತೋರಿಸುತ್ತೀರಿ' ಎಂದು ಬಿಎಸ್‍ವೈ ವಿರುದ್ಧ ವಾಗ್ದಾಳಿ ನಡೆಸಿದರು.

‘ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಹಿಂದುಳಿದ ವರ್ಗಗಳ ಪ್ರವರ್ಗ 2 ಎ ಅಡಿಯಲ್ಲಿ ಮೀಸಲಾತಿ ಕಲ್ಪಿಸಬೇಕು. ಯಾವುದೇ ಕಾರಣಕ್ಕೂ ನಮಗೆ ಸುಳ್ಳು ಆಶ್ವಾಸನೆ ನೀಡುವುದು ಬೇಡ, ಖಚಿತ ಭರವಸೆ ನೀಡಿ' ಎಂದು ಆಗ್ರಹಿಸಿದ ಯತ್ನಾಳ್, ‘ಸಮುದಾಯದ ಯಾರೂ ಅಂಜುವ ಅವಶ್ಯಕತೆ ಇಲ್ಲ. ನಾವು ಮೀಸಲಾತಿಯನ್ನು ಪಡೆದುಕೊಂಡು ಹೋಗಬೇಕು' ಎಂದು ಕರೆ ನೀಡಿದರು.

‘ನಾವೀಗ ರಾಜ್ಯದ ಆಡಳಿತದ ಶಕ್ತಿಕೇಂದ್ರ ವಿಧಾನಸೌಧದ 3ನೆ ಮಹಡಿಯಲ್ಲಿ ಕುಳಿತಿಲ್ಲ. ನಾವು ಹೊಲದಲ್ಲಿರುವ ರೈತ ಮಕ್ಕಳು. ನನ್ನ ಭಾಷಣಕ್ಕೆ ಅಡ್ಡಿ ಆಗುವುದು ಬೇಡ, ಮಳೆ ನಿಲ್ಲಿಸಿ ಎಂದು ಹನುಮಂತ ಮತ್ತು ವರುಣನನ್ನು ಬೇಡಿಕೊಂಡಿದ್ದೆ. ಹೀಗಾಗಿ ಸುರಿಯಲು ಆರಂಭಿಸಿದ್ದ ಮಳೆಯೂ ನಿಂತು ಹೋಯ್ತು' ಎಂದು ಬಸನಗೌಡ ಪಾಟೀಲ್ ಉಲ್ಲೇಖಿಸಿದರು.

‘ನಾವು ನಮ್ಮ ಮಕ್ಕಳು, ಮೊಮ್ಮಕ್ಕಳ ಸಲುವಾಗಿ ಹೋರಾಟ ಮಾಡುತ್ತಿಲ್ಲ. ನಾವು ಸಮಾಜದ ಮಕ್ಕಳು, ಮೊಮ್ಮಕ್ಕಳ ಪರವಾಗಿದ್ದೇವೆ. ಎಲ್ಲ ವೀರಶೈವ ಲಿಂಗಾಯತರು ಹೋರಾಟಕ್ಕೆ ಬಂದಿದ್ದಾರೆ. ನಾವು ಯಾರ ಬಗ್ಗೆಯೂ ಹಗುರವಾಗಿ ಮಾತಾಡುವುದು ಬೇಡ. ಕುರುಬ ಸಮುದಾಯಕ್ಕೆ ಪರಿಶಿಷ್ಟ ಪಂಗಡ(ಎಸ್ಟಿ)ದ ಮೀಸಲಾತಿ ನೀಡಬೇಕು. ಅವರು ಎಸ್ಟಿಗೆ ಹೋಗಲಿ, ನಾವು 2ಎಗೆ ಸೇರ್ಪಡೆ ಆಗಬೇಕು' ಎಂದು ಹೇಳಿದರು.

ವಿಧಾನಸೌಧದಲ್ಲಿ ಎದ್ದು ನಿಲ್ಲುತ್ತೇವೆ: ‘ಮೀಸಲಾತಿಗೆ ಆಗ್ರಹಿಸಿ ಮಾ.4ರ ವರೆಗೆ ಧರಣಿ ಸತ್ಯಾಗ್ರಹ ನಡೆಸಲಿದ್ದು, 4ರಿಂದ ಆರಂಭಗೊಳ್ಳಲಿರುವ ವಿಧಾನಸಭೆ ಅಧಿವೇಶದಲ್ಲಿ ಮತ್ತೆ ಎದ್ದು ನಿಲ್ಲುತ್ತೇವೆ. ಅಂದು ಮುಖ್ಯಮಂತ್ರಿ ಯಡಿಯೂರಪ್ಪ ಉತ್ತರ ನೀಡಲೇಬೇಕು. ಅಂದು ನಾಟಕ ಮಾಡಿದರೆ ಸಚಿವರಾದ ಸಿ.ಸಿ.ಪಾಟೀಲ್ ಮತ್ತು ಮುರುಗೇಶ್ ನಿರಾಣಿ ಹಾಗೂ ಸಮುದಾಯದ ಎಲ್ಲ ನಿಗಮ, ಮಂಡಳಿ ಅಧ್ಯಕ್ಷರು ರಾಜೀನಾಮೆ ನೀಡಬೇಕು' ಎಂದು ಸೂಚಿಸಿದರು.

‘ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡಬೇಕು. ಯಾವುದೇ ಸಮುದಾಯದ ವಿರುದ್ಧ ನಾವು ಇಲ್ಲ. ನೀವು(ಬಿಎಸ್‍ವೈ) ಯಾವುದೇ ಶಿಫಾರಸು ಮಾಡಬೇಕಾದ ಅಗತ್ಯವಿಲ್ಲ. ಎಲ್ಲ ನಿಮ್ಮ ಕೈಯಲ್ಲಿಯೇ ಇದೆ ಯಡಿಯೂರಪ್ಪನವರೇ. ಆದರೆ ನಿಮಗೆ ಮನಸ್ಸಿಲ್ಲ. ಕೂಡಲೇ ಮೀಸಲಾತಿ ಘೋಷಣೆ ಮಾಡಿ' ಎಂದು ಯತ್ನಾಳ್ ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News