ವಿಶ್ವಾಸಮತ ಸಾಬೀತುಪಡಿಸಲು ವಿಫಲ: ಪುದುಚ್ಚೇರಿ ಕಾಂಗ್ರೆಸ್ ಸರಕಾರ ಪತನ

Update: 2021-02-22 14:11 GMT

 ಪುದುಚೇರಿ,ಫೆ.22: ಮುಖ್ಯಮಂತ್ರಿ ವಿ.ನಾರಾಯಣ ಸ್ವಾಮಿ ನೇತೃತ್ವದ ಪುದುಚೇರಿಯ ಕಾಂಗ್ರೆಸ್ ಸರಕಾರವು ಸೋಮವಾರ ರಾಜ್ಯ ವಿಧಾನಸಭೆಯಲ್ಲಿ ತನ್ನ ಬಹುಮತವನ್ನು ಸಾಬೀತುಗೊಳಿಸುವಲ್ಲಿ ವಿಫಲಗೊಂಡಿದೆ. ಸರಕಾರವು ಬಹುಮತವನ್ನು ಕಳೆದುಕೊಂಡಿದೆ ಎಂದು ಘೋಷಿಸಿದ ವಿಧಾನಸಭಾ ಸ್ಪೀಕರ್ ವಿ.ಪಿ.ಶಿವಕೊಳಂದು ಅವರು ಅನಿರ್ದಿಷ್ಟಾವಧಿಗೆ ಸದನವನ್ನು ಮುಂದೂಡಿದರು.

 ಇದರ ಬೆನ್ನಲ್ಲೇ ತನ್ನ ಸಂಪುಟ ಸಹೋದ್ಯೋಗಿಗಳೊಂದಿಗೆ ಲೆ.ಗ.(ಹೆಚ್ಚುವರಿ ಹೊಣೆ) ತಮಿಳಿಸೈ ಸೌಂದರರಾಜನ್ ಅವರನ್ನು ಭೇಟಿಯಾದ ನಾರಾಯಣ ಸ್ವಾಮಿ ಅವರು ತನ್ನ ರಾಜೀನಾಮೆಯನ್ನು ಸಲ್ಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ತನ್ನ ಮತ್ತು ತನ್ನ ಸಂಪುಟ ಸಹೋದ್ಯೋಗಿಗಳು,ಕಾಂಗ್ರೆಸ್ ಮತ್ತು ಡಿಎಂಕೆ ಶಾಸಕರು ಹಾಗೂ ಓರ್ವ ಪಕ್ಷೇತರ ಶಾಸಕರ ರಾಜೀನಾಮೆಗಳನ್ನು ಲೆಫ್ಟಿನೆಂಟ್ ಗವರ್ನರ್‌ಗೆ ಸಲ್ಲಿಸಲಾಗಿದೆ. ರಾಜೀನಾಮೆಗಳನ್ನು ಸ್ವೀಕರಿಸುವಂತೆ ಅವರನ್ನು ಕೋರಲಾಗಿದೆ ಎಂದು ತಿಳಿಸಿದರು.

 ವಿಶ್ವಾಸ ಮತಕ್ಕೆ ಮುನ್ನ ಸದನವನ್ನು ಉದ್ದೇಶಿಸಿ ಮಾತನಾಡಿದ ನಾರಾಯಣ ಸ್ವಾಮಿ,ಕಾಂಗ್ರೆಸ್ ಸರಕಾರವನ್ನು ಪದಚ್ಯುತಗೊಳಿಸಲು ಪದೇ ಪದೇ ಪ್ರಯತ್ನಗಳಿಗಾಗಿ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ,ಪುದುಚೇರಿಯ ಮಾಜಿ ಲೆ.ಗ.ಕಿರಣ್ ಬೇಡಿ ಮತ್ತು ಪ್ರತಿಪಕ್ಷಗಳನ್ನು ಟೀಕಿಸಿದರು.

 ಬಿಜೆಪಿ ನೇತೃತ್ವದ ಕೇಂದ್ರವು ಹಲವಾರು ರಾಜ್ಯಗಳಲ್ಲಿಯ ಚುನಾಯಿತ ಸರಕಾರಗಳನ್ನು ಉರುಳಿಸಿದೆ. ಆದರೆ ಅವರ ಸಂಚು ರಾಜಸ್ಥಾನದಲ್ಲಿ ಯಶಸ್ವಿಯಾಗಲಿಲ್ಲ. ಅವರು ಪುದುಚೇರಿಯ ಚುನಾಯಿತ ಸರಕಾರವನ್ನು ಉರುಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು.

ತಮಿಳಿಸೈ ನಿರ್ದೇಶದ ಮೇರೆಗೆ ಬಹುಮತವನ್ನು ಸಾಬೀತುಗೊಳಿಸಲು ನಾರಾಯಣ ಸ್ವಾಮಿಯವರಿಗೆ ಅವಕಾಶ ಕಲ್ಪಿಸಲು ವಿಧಾನಸಭೆಯು ಬೆಳಿಗ್ಗೆ 10 ಗಂಟೆಗೆ ಅಧಿವೇಶನ ಆರಂಭಿಸಿತ್ತು. ಕಾಂಗ್ರೆಸ್ ಶಾಸಕರ ಸರಣಿ ರಾಜೀನಾಮೆಗಳ ಬಳಿಕ ಕಾಂಗ್ರೆಸ್ ಸರಕಾರವು ಬಹುಮತವನ್ನು ಕಳೆದುಕೊಂಡಿದೆ ಎಂದು ಪ್ರತಿಪಕ್ಷಗಳು ತಮಿಳಿಸೈ ಅವರಿಗೆ ಅಹವಾಲು ಸಲ್ಲಿಸಿದ್ದವು.

 ಕಳೆದ 30 ದಿನಗಳಲ್ಲಿ ಐವರು ಕಾಂಗ್ರೆಸ್ ಮತ್ತು ಓರ್ವ ಡಿಎಂಕೆ ಶಾಸಕರು ರಾಜೀನಾಮೆಗಳನ್ನು ಸಲ್ಲಿಸಿದ್ದು,ಇನ್ನೋರ್ವ ಕಾಂಗ್ರೆಸ್ ಶಾಸಕ ಎನ್.ದಾನವೇಲು ಅವರನ್ನು ಕಳೆದ ವರ್ಷ ಅನರ್ಹಗೊಳಿಸಲಾಗಿತ್ತು. ಆಡಳಿತ ಕಾಂಗ್ರೆಸ್‌ನ ಬಲ ಒಂಭತ್ತಕ್ಕೆ ಕುಸಿದಿದ್ದು,ಮಿತ್ರಪಕ್ಷ ಡಿಎಂಕೆಯ ಇಬ್ಬರು ಮತ್ತು ಓರ್ವ ಪಕ್ಷೇತರ ಶಾಸಕರು ಸರಕಾರವನ್ನು ಬೆಂಬಲಿಸಿದ್ದರು. ಪ್ರತಿಪಕ್ಷದ ಕಡೆ ಅಖಿಲ ಭಾರತ ಎನ್‌ಆರ್ ಕಾಂಗ್ರೆಸ್ (ಎಐಎನ್‌ಆರ್‌ಸಿ) ಏಳು ಮತ್ತು ಎಐಎಡಿಎಂಕೆ ನಾಲ್ವರು ಶಾಸಕರನ್ನು ಹೊಂದಿವೆ. ಮೂವರು ಬಿಜೆಪಿ ಪದಾಧಿಕಾರಿಗಳನ್ನು ಶಾಸಕರಾಗಿ ನಾಮಕರಣಗೊಳಿಸಲಾಗಿದೆ.

 ಆಡಳಿತ ಕಾಂಗ್ರೆಸ್ ಪಕ್ಷವು ಜನರ ಮತ್ತು ತನ್ನ ಶಾಸಕರ ವಿಶ್ವಾಸವನ್ನು ಕಳೆದುಕೊಂಡಿದೆ ಎಂದು ಎಐಎನ್‌ಆರ್‌ಸಿ ನಾಯಕ ಎನ್.ರಂಗಸ್ವಾಮಿ ಹೇಳಿದರೆ,ಮುಂದಿನ ಕ್ರಮದ ಬಗ್ಗೆ ನಿರ್ಧರಿಸಲು ಪುದುಚೇರಿ ಘಟಕವು ಪಕ್ಷದ ನಾಯಕತ್ವದೊಂದಿಗೆ ಸಮಾಲೋಚನೆ ನಡೆಸಲಿದೆ ಎಂದು ಎಐಎಡಿಎಂಕೆ ಶಾಸಕಾಂಗ ಪಕ್ಷದ ನಾಯಕ ಎ.ಅನ್ಬುಗನ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News