"ಗುರುನಾನಕ್‌ ಜನ್ಮಸ್ಥಳಕ್ಕೆ ಸಿಖ್ಖರ ಜಾಥಾ ತಡೆದ ಕೇಂದ್ರ ಸರಕಾರದ ಧೋರಣೆಯು ಬ್ರಿಟಿಷರಂತೆ ಇದೆ"

Update: 2021-02-22 10:39 GMT

ಅಮೃತಸರ್: ಸಿಖರ ಪರಮೋಚ್ಛ ಧಾರ್ಮಿಕ ನಾಯಕ ಗುರು ನಾನಕ್ ದೇವ್ ಅವರ ಜನ್ಮ ಸ್ಥಳವಾದ ಗುರುದ್ವಾರ ಶ್ರೀ ನಾನ್ಕಾನ ಸಾಹಿಬ್ ಅನ್ನು ಮಹಂತರಿಂದ ಬಿಡುಗಡೆಗೊಳಿಸುವ ಸಂದರ್ಭ ನಡೆದಿದ್ದ ಹತ್ಯಾಕಾಂಡದ ನೂರನೇ ವರ್ಷದ ಸಂದರ್ಭ ಪಾಕಿಸ್ತಾನದಲ್ಲಿರುವ ಆ ಸ್ಥಳಕ್ಕೆ  ಸಿಖ್‌ ಧರ್ಮೀಯರ ಜಾಥಾ ತೆರಳುವುದನ್ನು ತಡೆದಿರುವ ಕೇಂದ್ರ ಸರಕಾರದ ಕ್ರಮವನ್ನು ಸಮುದಾಯ ಮುಂದಿನ ನೂರು ವರ್ಷಗಳ ತನಕ ನೆನಪಿನಲ್ಲಿಡಲಿದೆ ಎಂದು ಅಕಾಲ್ ತಖ್ತ್ ಜತ್ತೇದಾರ್ ಗ್ಯಾನಿ ಹರ್‍ಪ್ರೀತ್ ಸಿಂಗ್ ಹೇಳಿದ್ದಾರೆ. 

ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿ ನೂರು ವರ್ಷಗಳ ಹಿಂದೆ ನಡೆದ ಈ ದುರಂತದ ಸ್ಮರಣಾರ್ಥ ರವಿವಾರ ಗುರುದಾಸ್‍ಪುರ್ ಜಿಲ್ಲೆಯ ಗೋಧಾರ್ಪುರ್ ಗ್ರಾಮದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ  ಸಿಂಗ್ ಕೂಡ ಭಾಗವಹಿಸಿದ್ದರು. ಇದೇ ಜಿಲ್ಲೆಯವರಾಗಿದ್ದ ಶಹೀದ್ ಭಾಯಿ ಲಚ್ಮನ್ ಸಿಂಗ್ ಧಾರೋವಾಲಿ ಅವರು ನೂರು ವರ್ಷಗಳ ಹಿಂದೆ ನಾನ್ಕನ ಸಾಹಿಬ್‍ಗೆ ತೆರಳಿದ್ದ ಸಿಖ್ಖರ ನೇತೃತ್ವ ವಹಿಸಿದ್ದರು.

ಆದರೆ ಈ ವರ್ಷ ಅಕಾಲ್‍ ತಖ್ತ್ ಜತ್ತೇದಾರ್ ಅವರ ನೇತೃತ್ವದಲ್ಲಿ ಸಿಖ್ ಸಮುದಾಯದ ಜನರು ನಾನ್ಕನ ಸಾಹಿಬ್‍ಗೆ ತೆರಳಲು ಬಯಸಿದ್ದರೂ ಗೃಹ ಸಚಿವರು ಕೊನೇ ಕ್ಷಣದಲ್ಲಿ ಅನುಮತಿ ನಿರಾಕರಿಸಿದ್ದ ನಂತರ ಪರ್ಯಾಯ  ಕಾರ್ಯಕ್ರಮ ಆಯೋಜಿಸಲಾಗಿತ್ತು. ನೂರು ವರ್ಷಗಳ ಹಿಂದೆ ನಡೆದಿದ್ದ ಹತ್ಯಾಕಾಂಡದಲ್ಲಿ ತಮ್ಮವರನ್ನು ಕಳೆದುಕೊಂಡಿದ್ದ 32 ಕುಟುಂಬಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವು.

ಕೇಂದ್ರ ಸರಕಾರ ಸಿಖ್ಖರ ಕುರಿತು ತಳೆದಿರುವ ಧೋರಣೆಯನ್ನು ಟೀಕಿಸಿದ ಜತ್ತೇದಾರ್ ಗ್ಯಾನಿ ಹರ್‌ ಪ್ರೀತ್ ಸಿಂಗ್, ಸರಕಾರ ಅಲ್ಪಸಂಖ್ಯಾತರ ಕುರಿತ ತನ್ನ ಧೋರಣೆಯನ್ನು ಬದಲಾಯಿಸಬೇಕೆಂದು ಹೇಳಿದರು.

"ಈ ಬಾರಿ ಸರಕಾರ ನಮಗೆ ನಾನ್ಕನ ಸಾಹಿಬ್‍ಗೆ ತೆರಳಲು ಅನುಮತಿ ನಿರಾಕರಿಸಿ ಮತ್ತೆ ನಮಗೆ ಹಿಂದಿನ ನೋವನ್ನು ನೆನಪಿಸಿದೆ. ಈ ಸರಕಾರದ ಧೋರಣೆ ಬ್ರಿಟಿಷರ ಧೋರಣೆಯಂತೆಯೇ ಇದೆ. ಸಿಖ್ಖರು ರೈತರ ಆಂದೋಲನದಲ್ಲಿ  ಪೂರ್ಣಪ್ರಮಾಣದಲ್ಲಿ ಭಾಗಿಯಾಗಿರುವುದರಿಂದ ಸರಕಾರ ಅನುಮತಿ ನಿರಾಕರಿಸಿದೆ.  ನಾವು ಆಂದೋಲನದಿಂದ ಹಿಂದೆ ಸರಿಯುತ್ತೇವೆ ಎಂಬ ಭ್ರಮೆಯನ್ನು ಸರಕಾರ ಹೊಂದಿತ್ತು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News