ಆಸ್ಟೇಲಿಯವನ್ನು ಮಣಿಸಿದ ನ್ಯೂಝಿಲ್ಯಾಂಡ್

Update: 2021-02-23 04:44 GMT

ಕ್ರೈಸ್ಟ್‌ಚರ್ಚ್: ಕ್ರೈಸ್ಟ್‌ಚರ್ಚ್ ನಲ್ಲಿ ಸೋಮವಾರ ನಡೆದ ಮೊದಲಟ್ವೆಂಟಿ -20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ನ್ಯೂಝಿಲ್ಯಾಂಡ್ ತಂಡ ಡೆವೊನ್ ಕಾನ್ವೇ ಆಕರ್ಷಕ ಬ್ಯಾಟಿಂಗ್ ನೆರವಿನಲ್ಲಿ ಆಸ್ಟ್ರೇಲಿಯ ವಿರುದ್ಧ 53 ರನ್‌ಗಳ ಗೆಲುವು ಸಾಧಿಸಿದೆ.

 ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ನ್ಯೂಝಿಲ್ಯಾಂಡ್ ತಂಡ ಐದು ವಿಕೆಟ್ ನಷ್ಟದಲ್ಲಿ 184 ರನ್ ಗಳಿಸಿತು. ಕಾನ್ವೇ 59 ಎಸೆತಗಳಲ್ಲಿ 10 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಲ್ಲಿ ಅಜೇಯ 99 ರನ್ ಗಳಿಸಿ ನ್ಯೂಝಿಲ್ಯಾಂಡ್‌ತಂಡಕ್ಕೆ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾದರು.

ಇದಕ್ಕೆ ಉತ್ತರಿಸಿದ ಆಸ್ಟ್ರೇಲಿಯ 17.3 ಓವರ್‌ಗಳಲ್ಲಿ 131 ರನ್‌ಗಳಿಗೆ ಆಲೌಟ್ ಆಗಿದೆ. ನ್ಯೂಝಿಲ್ಯಾಂಡ್‌ನ ಸ್ಪಿನ್ನರ್ ಐಶ್ ಸೋಧಿ 28ಕ್ಕೆ 4 ವಿಕೆಟ್, ಟ್ರೆಂಟ್ ಬೌಲ್ಟ್ ಮತ್ತು ಟಿಮ್ ಸೌಥಿ ತಲಾ 2 ವಿಕೆಟ್ ಉಡಾಯಿಸಿ ಆಸ್ಟ್ರೇಲಿಯ ತಂಡವನ್ನು ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕಿದರು.

 ನಾಯಕ ವಿಲಿಯಮ್ಸನ್ ಔಟಾಗುವು ದರೊಂದಿಗೆ ನ್ಯೂಝಿಲ್ಯಾಂಡ್ 19ಕ್ಕೆ 3 ವಿಕೆಟ್‌ಗಳನ್ನು ಕಳೆದುಕೊಂಡಿತು.

  ಈ ಹಂತದಲ್ಲಿ ಕಾನ್ವೇ ಮತ್ತು ಗ್ಲೆನ್ ಫಿಲಿಪ್ಸ್ ಮೂರನೇ ವಿಕೆಟ್‌ಗೆ 74 ರನ್ ಜಮೆ ಮಾಡಿದರು. ಫಿಲಿಪ್ಸ್ 30 ರನ್(20ಎ, 3ಸಿ) ಜಮೆ ಮಾಡಿದರು. ಇದರೊಂದಿಗೆ ನ್ಯೂಝಿಲ್ಯಾಂಡ್ 12.2 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 93 ರನ್ ಗಳಿಸಿತ್ತು. ಐದನೇ ವಿಕೆಟ್‌ಗೆ ನಿಶಮ್ ಮತ್ತು ಕಾನ್ವೇ 47 ರನ್ ಜಮೆ ಮಾಡಿದರು. ನಿಶಮ್ 26 ರನ್ ಗಳಿಸಿ ಔಟಾದರು. ಆಸ್ಟ್ರೇಲಿಯ ತಂಡದ ಮಿಚೆಲ್ ಮಾರ್ಷ್ (45 ) ಅಗ್ರ ಸ್ಕೋರರ್ ಎನಿಸಿಕೊಂಡರು ಮತ್ತು ಆ್ಯಶ್ಟನ್ ಅಗರ್ 23 ರನ್ ಗಳಿಸಿದರು. ಆಸ್ಟ್ರೇಲಿಯ ಆಟಗಾರರ ಬ್ಯಾಟಿಂಗ್ ವೈಫಲ್ಯದಿಂದಾಗಿ ನ್ಯೂಝಿಲ್ಯಾಂಡ್ ತಂಡ ಸುಲಭದ ಜಯ ದಾಖಲಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News