ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಶಿಕ್ಷಣ ವ್ಯವಸ್ಥೆಗೆ ಮಾರಕ: ಸುಪ್ರೀಂಕೋರ್ಟ್

Update: 2021-02-23 16:11 GMT

ಹೊಸದಿಲ್ಲಿ, ಫೆ.23: ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಭಾರತದ ಶಿಕ್ಷಣ ವ್ಯವಸ್ಥೆ ಹಾಳಾಗುತ್ತಿದೆ. ಮಧ್ಯಪ್ರದೇಶದಲ್ಲಿ ನಡೆದ ವ್ಯಾಪಮ್‌ನಂತಹ ಪ್ರಕರಣಗಳು ಶಿಕ್ಷಣ ವ್ಯವಸ್ಥೆಯನ್ನು ವಿಕೃತಗೊಳಿಸುತ್ತವೆ ಎಂದು ಸುಪ್ರೀಂಕೋರ್ಟ್ ಹೇಳಿದೆ.

2016ರಲ್ಲಿ ಕರ್ನಾಟಕದಲ್ಲಿ ನಡೆದ ಪಿಯುಸಿ ಪರೀಕ್ಷೆಯ ರಸಾಯನ ಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಪ್ರಮುಖ ಆರೋಪಿ ಶಿವಕುಮಾರಯ್ಯಗೆ ನೀಡಿರುವ ಜಾಮೀನನ್ನು ರದ್ದುಗೊಳಿಸಬೇಕೆಂದು ಕೋರಿ ಕರ್ನಾಟಕ ಸರಕಾರ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ಸಂದರ್ಭ ಸುಪ್ರೀಂಕೋರ್ಟ್, ಜಾಮೀನನ್ನು ಯಾಕೆ ರದ್ದುಗೊಳಿಸಬಾರದು ಎಂದು ಪ್ರಶ್ನಿಸಿ ಶಿವಕುಮಾರಯ್ಯಗೆ ನೋಟಿಸ್ ಜಾರಿಗೊಳಿಸಿದೆ.

ಪಿಯುಸಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ಪ್ರಮುಖ ಆರೋಪಿ ಶಿವಕುಮಾರಯ್ಯಗೆ ಜಾಮೀನು ಮಂಜೂರು ಮಾಡಿದ್ದರೆ, ಸಹ ಆರೋಪಿ ಓಬಳರಾಜುನನ್ನು ಖುಲಾಸೆಗೊಳಿಸಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಸರಕಾರ ಸುಪ್ರೀಂ ಮೆಟ್ಟಿಲೇರಿತ್ತು. ನಾವು ಇಂತವರಿಗೆ (ಪ್ರಶ್ನೆಪತ್ರಿಕೆ ಸೋರಿಕೆ ಮಾಡುವವರಿಗೆ) ಒಂದು ಕಠಿಣ ಸಂದೇಶ ರವಾನಿಸಬೇಕಿದೆ. ಇಂತವವರು ದೇಶದ ಶಿಕ್ಷಣ ವ್ಯವಸ್ಥೆಯನ್ನು ಹಾಳು ಮಾಡುತ್ತಿದ್ದಾರೆ. ಮಧ್ಯಪ್ರದೇಶದ ವ್ಯಾಪಮ್ ಹಗರಣದಲ್ಲಿ ಏನಾಗಿದೆ ಎಂಬುದು ನಮಗೆಲ್ಲಾ ತಿಳಿದಿದೆ ಎಂದು ಹೇಳಿದ ಮೂವರು ಸದಸ್ಯರ ನ್ಯಾಯಪೀಠ, ಸಹ ಆರೋಪಿಯನ್ನು ಖುಲಾಸೆಗೊಳಿಸಿದ ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡಿದೆ ಮತ್ತು ಮುಖ್ಯ ಆರೋಪಿ ಶಿವಕುಮಾರಯ್ಯಗೆ ನೋಟಿಸ್ ಜಾರಿಗೊಳಿಸಿದೆ.

ಮಧ್ಯಪ್ರದೇಶದಲ್ಲಿ ವೃತ್ತಿಪರ ಕೋರ್ಸ್‌ಗಳಿಗೆ ಮತ್ತು ಸರಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಮಧ್ಯಪ್ರದೇಶ ಪರೀಕ್ಷಾ ಮಂಡಳಿ(ವ್ಯಾಪಮ್) ನಡೆಸುವ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿತ್ತು. ಈ ಪ್ರಕರಣದ ತನಿಖೆಯನ್ನು ಸುಪ್ರೀಂಕೋರ್ಟ್ 2016ರಲ್ಲಿ ಸಿಬಿಐಗೆ ವಹಿಸಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News