ಪ್ರಾಚೀನ ಭಾರತದ ಶ್ರೀಮಂತ ಮೌಲ್ಯಗಳ ಮೇಲೆ ಮಧ್ಯಯುಗದ ದುಷ್ಟ ಛಾಯೆ ಆವರಿಸಿದೆ: ಹೈಕೋರ್ಟ್

Update: 2021-02-23 16:52 GMT

ಹೊಸದಿಲ್ಲಿ, ಫೆ.23: ಅಂತರ್ ‌ಜಾತೀಯ ವಿವಾಹ, ಪತಿ ಅಥವಾ ಪತ್ನಿಯನ್ನು ಆಯ್ಕೆ ಮಾಡುವ ಹಕ್ಕನ್ನು ಪ್ರಾಚೀನ ಕಾಲದಿಂದಲೂ ಭಾರತದ ಸಮಾಜದಲ್ಲಿ ಮಾನ್ಯ ಮಾಡಲಾಗಿದೆ. ಆದರೆ ಪ್ರಾಚೀನ ಭಾರತದ ಶ್ರೀಮಂತ ಮೌಲ್ಯಗಳ ಮೇಲೆ ಮಧ್ಯಯುಗದ ಕೆಡುಕಿನ ಛಾಯೆ ಆವರಿಸಿದೆ ಎಂದು ಅಂತರ್ ‌ಜಾತೀಯ ವಿವಾಹವಾದ ದಂಪತಿಯ ಪರ ತೀರ್ಪು ನೀಡಿದ ಸಂದರ್ಭ ಹಿಮಾಚಲ ಪ್ರದೇಶ ಹೈಕೋರ್ಟ್ ಹೇಳಿದೆ.

ಹಿಮಾಚಲ ಪ್ರದೇಶದ ಹಾಮಿರ್‌ಪುರ ಗ್ರಾಮದ ಪರಿಶಿಷ್ಟ ಜಾತಿಯ ಯುವಕ ಸಂಜೀವ್ ಕುಮಾರ್ ಹಾಗೂ ರಜಪೂತ್ ಸಮುದಾಯದ ಕೋಮಲ್ ಪರ್ಮಾರ್ ಎಂಬ ಯುವತಿ ಪರಸ್ಪರ ಪ್ರೀತಿಸುತ್ತಿದ್ದು ಮದುವೆಯಾಗಲು ಬಯಸಿ ಫೆಬ್ರವರಿ 1ರಂದು ವಿಶೇಷ ವಿವಾಹ ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದರು. ಈ ವಿವಾಹಕ್ಕೆ ಯುವತಿಯ ಮನೆಯವರ ವಿರೋಧವಿತ್ತು. ಈ ಮಧ್ಯೆ, ತನ್ನೊಂದಿಗಿದ್ದ ಕೋಮಲ್‌ಳನ್ನು ಆಕೆಯ ಹೆತ್ತವರು ಅಪಹರಿಸಿದ್ದಾರೆ.

ಆಕೆಯನ್ನು ಹುಡುಕಿ ಕೊಡಬೇಕು ಎಂದು ಕೋರಿ ಸಂಜೀವ್ ಕುಮಾರ್ ಫೆಬ್ರವರಿ 19ರಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ. ಕೋಮಲ್ ಪರ್ಮಾರ್ ಮಾನಸಿಕವಾಗಿ ಅಸ್ವಸ್ಥಳಾಗಿದ್ದಾಳೆ ಎಂದು ಹೆತ್ತವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ನ್ಯಾಯಾಲಯದ ಆದೇಶದಂತೆ ನ್ಯಾಯಾಲಯದಲ್ಲಿ ಹಾಜರಾದ ಕೋಮಲ್, ಈ ಹೇಳಿಕೆಯನ್ನು ನಿರಾಕರಿಸಿದಳು. ಸಂಜೀವ್ ಕುಮಾರ್ ಹಾಗೂ ತನ್ನ ಜಾತಿ ಬೇರೆಯಾಗಿರುವುದರಿಂದ ಈ ಮದುವೆಗೆ ಹೆತ್ತವರು ವಿರೋಧಿಸುತ್ತಿದ್ದಾರೆ ಎಂದು ಕೋಮಲ್ ಹೇಳಿಕೆ ನೀಡಿದಳು. ಇದನ್ನು ಪರಿಗಣಿಸಿದ ಹೈಕೋರ್ಟ್, ಜಾತಿಯ ಆಧಾರದಲ್ಲಿ ಭೇದಭಾವ ಮಾಡುವುದು ಮತ್ತು ಸಂಗಾತಿಯ ಆಯ್ಕೆಯ ಅವಕಾಶವನ್ನು ನಿರಾಕರಿಸುವುದು ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ತೀರ್ಪು ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News