ಮಾಜಿ ಕೇಂದ್ರ ಸಚಿವ ಸ್ವಾಮಿ ಚಿನ್ಮಯಾನಂದರ ಕಾಲೇಜಿನ ವಿದ್ಯಾರ್ಥಿನಿ ಸುಟ್ಟಗಾಯಗಳೊಂದಿಗೆ ಹೆದ್ದಾರಿಯಲ್ಲಿ ಪತ್ತೆ

Update: 2021-02-24 15:31 GMT

ಲಕ್ನೊ, ಫೆ.24: ಉತ್ತರಪ್ರದೇಶದ ಶಹಜಹಾನ್‌ಪುರದಲ್ಲಿ ಕಾಲೇಜು ವಿದ್ಯಾರ್ಥಿನಿಯೊಬ್ಬಳು ತೀವ್ರ ಸುಟ್ಟಗಾಯಗಳೊಂದಿಗೆ ವಿವಸ್ತ್ರ ಸ್ಥಿತಿಯಲ್ಲಿ ಹೆದ್ದಾರಿ ಬಳಿ ಪತ್ತೆಯಾಗಿದ್ದು, ಸಾಮೂಹಿಕ ಅತ್ಯಾಚಾರದ ಪ್ರಯತ್ನಕ್ಕೆ ವಿರೋಧಿಸಿದ್ದರಿಂದ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಸೋಮವಾರ ರಾಯ್ ಖೇಡಾ ಗ್ರಾಮದ ಬಳಿಯ ಹೊಲದಲ್ಲಿ ಮೂವರು ತನ್ನ ಮೇಲೆ ಅತ್ಯಾಚಾರ ನಡೆಸಲು ಮುಂದಾಗಿದ್ದು ಇದನ್ನು ವಿರೋಧಿಸಿದ್ದರಿಂದ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ಗಾಯಾಳು ಯುವತಿ ಹೇಳಿಕೆ ನೀಡಿರುವುದಾಗಿ ಪೊಲೀಸ್ ಅಧೀಕ್ಷಕ ಎಸ್ ಆನಂದ್ ಹೇಳಿದ್ದಾರೆ. ತೀವ್ರ ಸುಟ್ಟಗಾಯಕ್ಕೆ ಒಳಗಾದ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಯುವತಿ ತನ್ನ ಹೇಳಿಕೆಯನ್ನು ಆಗಿಂದಾಗ್ಗೆ ಬದಲಾಯಿಸುತ್ತಿದ್ದು, ಕಾಲೇಜಿನ ಮೂರನೇ ಮಹಡಿಯಲ್ಲಿದ್ದ ತಾನು ಆಸ್ಪತ್ರೆಗೆ ಹೇಗೆ ತಲುಪಿದೆ ಎಂಬುದು ನೆನಪಿಗೆ ಬರುತ್ತಿಲ್ಲ ಎಂದೂ ಹೇಳಿದ್ದಾಳೆ. ಸಂತ್ರಸ್ತ ಯುವತಿ ಮಾಜಿ ಕೇಂದ್ರ ಸಚಿವ ಸ್ವಾಮಿ ಚಿನ್ಮಯಾನಂದ್ ಮಾಲಕತ್ವದ ಕಾಲೇಜಿನ ದ್ವಿತೀಯ ವರ್ಷದ ಬಿಎ ವಿದ್ಯಾರ್ಥಿನಿಯಾಗಿದ್ದಾಳೆ.

 ಕಾಲೇಜಿನ ಸಿಸಿಟಿವಿ ದೃಶ್ಯವನ್ನು ಗಮನಿಸಿದಾಗ, ಕಾಲೇಜಿಗೆ ಬಂದ ಸುಮಾರು 20 ನಿಮಿಷದ ಬಳಿಕ ಯುವತಿ ಕಾಲೇಜು ಕ್ಯಾಂಪಸ್‌ನ ಹಿಂಬದಿಯ ಗೋಡೆಯ ಮೂಲಕ ಹೊರಗೆ ಹೋಗಿರುವುದು ಮತ್ತು ರಸ್ತೆಯಲ್ಲಿ ಒಬ್ಬಂಟಿಯಾಗಿ ನಡೆದುಕೊಂಡು ಹೋಗಿರುವುದು ಪತ್ತೆಯಾಗಿದೆ. ಇದಕ್ಕೂ ಈಕೆ ತರಗತಿಯ ಹೊರಗೆ ನಿಂತುಕೊಂಡು ಸ್ನೇಹಿತೆಯರೊಂದಿಗೆ ಮಾತನಾಡುತ್ತಿದ್ದಳು ಹಾಗೂ ಬಳಿಕ ಲೈಬ್ರೆರಿಗೆ ಹೋಗಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News