ಮೂರನೇ ಟೆಸ್ಟ್: ಇಂಗ್ಲೆಂಡ್ 112 ರನ್ ಗೆ ಆಲೌಟ್

Update: 2021-02-24 13:05 GMT

ಅಹ್ಮದಾಬಾದ್: ಭಾರತದ ಸ್ಪಿನ್ನರ್ ಗಳಾದ ಅಕ್ಷರ್ ಪಟೇಲ್ ಹಾಗೂ ಆರ್. ಅಶ್ವಿನ್ ಸ್ಪಿನ್ ಮೋಡಿಗೆ ಸಿಲುಕಿದ  ಇಂಗ್ಲೆಂಡ್ ತಂಡ ಬುಧವಾರ ಇಲ್ಲಿ ಆರಂಭವಾದ ಮೂರನೇ ಟೆಸ್ಟ್ ಪಂದ್ಯದಲ್ಲಿ ಆರಂಭಿಕ ಆಘಾತದಿಂದ ಚೇತರಿಸಿಕೊಳ್ಳಲು ವಿಫಲವಾಗಿ 48.4 ಓವರ್ ಗಳಲ್ಲಿ ಕೇವಲ 112 ರನ್ ಗೆ ಆಲೌಟಾಗಿದೆ.

ಅಕ್ಷರ್ ಪಟೇಲ್ (6-38) ಹಾಗೂ ಆರ್. ಅಶ್ವಿನ್ (3-26) ಇಂಗ್ಲೆಂಡ್ ಬ್ಯಾಟ್ಸ್ ಮನ್ ಗಳನ್ನು ಇನ್ನಿಲ್ಲದಂತೆ ಕಾಡಿದರು. ಲೋಕಲ್ ಹೀರೊ ಅಕ್ಷರ್ ಪಟೇಲ್ ಆರಂಭದಿಂದ ಕೊನೆಯ ತನಕ ಇಂಗ್ಲೆಂಡ್ ಬ್ಯಾಟ್ಸ್ ಮನ್ ಗಳನ್ನು ಬೆನ್ನು ಬಿಡದೆ ಕಾಡಿದರು. ಪಟೇಲ್ ಸ್ಪಿನ್ ಮೋಡಿಗೆ ಆರು ವಿಕೆಟ್ ಪತನವಾದವು. ಅಕ್ಷರ್ ಗೆ ಅಶ್ವಿನ್ ಸಾಥ್ ನೀಡಿದರು. ಆರಂಭಿಕ ಬ್ಯಾಟ್ಸ್ ಮನ್ ಝಾಕ್ ಕ್ರಾವ್ಲೆ (53, 84 ಎಸೆತ, 10 ಬೌಂಡರಿ)ಸರ್ವಾಧಿಕ ಸ್ಕೋರ್ ಗಳಿಸಿದರು.

ವಿಶ್ವದ ಅತ್ಯಂತ ದೊಡ್ಡ ಸ್ಟೇಡಿಯಂ ಮೊಟೆರಾದಲ್ಲಿ ಬುಧವಾರ ಆರಂಭವಾದ ಹಗಲು-ರಾತ್ರಿ ಪಂದ್ಯದಲ್ಲಿ ಟಾಸ್ ಜಯಿಸಿದ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. 3ನೇ ಓವರ್ ನಲ್ಲಿ 2 ರನ್ ಸೇರಿಸುವಷ್ಟರಲ್ಲಿ ಇಂಗ್ಲೆಂಡ್ ನ ಮೊದಲ ವಿಕೆಟ್ ಪತನವಾಯಿತು. ಆರಂಭಿಕ ಬ್ಯಾಟ್ಸ್ ಮನ್ ಡಾಮ್ ಸಿಬ್ಲಿ(0)ಖಾತೆ ತೆರೆಯುವ ಮೊದಲೇ ವಿಕೆಟ್ ಒಪ್ಪಿಸಿದರು. ಜಾನಿ ಬೈರ್ ಸ್ಟೋವ್ ಕೂಡ ಶೂನ್ಯಕ್ಕೆ ಔಟಾದರು.

ನಾಯಕ ಜೋ ರೂಟ್ 17 ರನ್, ಜೋಫ್ರಾ ಅರ್ಚರ್ (11), ಬೆನ್ ಫೋಕ್ಸ್ 12 ರನ್ ಗಳಿಸಿ ಔಟಾದರು. ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿದ್ದ ಝಾಕ್ ಕ್ರಾವ್ಲೆ ಸ್ಪಿನ್ನರ್ ಅಕ್ಷರ್ ಪಟೇಲ್ ಪೆವಿಲಿಯನ್ ಹಾದಿ ತೋರಿಸಿದರು. ಒಲ್ಲಿ ಪೋಪ್ (1), ಬೆನ್ ಸ್ಟೋಕ್ಸ್ (6), ಬ್ರಾಡ್ (3) ಹಾಗೂ ಜಾಕ್ ಲೀಚ್ (3)ಒಂದಂಕಿಯ ಸ್ಕೋರ್ ಗಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News