ಜವಹರಲಾಲ್‌ ನೆಹರೂ ತಮಗೆ ತಾವೇ 'ಭಾರತ ರತ್ನ' ಪ್ರಶಸ್ತಿ ನೀಡಿದ್ದರೇ?

Update: 2021-02-24 15:42 GMT

ಹೊಸದಿಲ್ಲಿ: ಸರ್ದಾರ್‌ ಪಟೇಲ್‌ ರ ಹೆಸರಿದ್ದ ಅಹ್ಮದಾಬಾದ್‌ ನ ಮೊಟೇರಾ ಕ್ರೀಡಾಂಗಣಕ್ಕೆ  ಪ್ರಧಾನಿ ನರೇಂದ್ರ ಮೋದಿಯವರ ಹೆಸರನ್ನು ಮರುನಾಮಕರಣ ಮಾಡಿದ ಕುರಿತಾದಂತೆ ಹಲವಾರು ಕಡೆಗಳಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಈ ನಡುವೆ ಸಾಮಾಜಿಕ ತಾಣದಾದ್ಯಂತ ʼಜವಹರ್‌ ಲಾಲ್‌ ನೆಹರೂ ತಮಗೆ ತಾವೇ ಭಾರತ ರತ್ನ ಪ್ರಶಸ್ತಿ ನೀಡಿದ್ದರುʼ ಎಂಬ ಹೇಳಿಕೆಗಳೂ ಟ್ರೆಂಡಿಂಗ್‌ ಆಗುತ್ತಿದೆ. ಈ ಕುರಿತಾದಂತೆ thewire.in ಪ್ರಕಟಿಸಿದ ಸತ್ಯಾನ್ವೇಷಣಾ ವರದಿ ಇಲ್ಲಿದೆ.

ಪ್ರಶಸ್ತಿಯ ನಾಮನಿರ್ದೇಶನ ಪ್ರಕ್ರಿಯೆಯೇ ವಿವಾದದ ಮೂಲ ಅಂಶವಾಗಿದೆ. ಭಾರತ ರತ್ನವನ್ನು ನೀಡುವ ಪದ್ಧತಿಯು ಸರಳವಾಗಿದೆ. ಪ್ರಧಾನ ಮಂತ್ರಿಯು ರಾಷ್ಟ್ರಪತಿಗೆ ಹೆಸರುಗಳನ್ನು ಶಿಫಾರಸು ಮಾಡುತ್ತಾರೆ. ಬಳಿಕ ಅವರು ಅಂತಹಾ ನಾಮಪತ್ರಗಳನ್ನು ಸ್ವೀಕರಿಸುತ್ತಾರೆ. ಆದರೆ ಈ ಪ್ರಕ್ರಿಯೆಯು ಭಾರತ ರತ್ನ ಸ್ಥಾಪಿಸಿದ ಜನವರಿ2, 1954ರ ಭಾರತದ ಅಧಿಕೃತ ಗೆಝೆಟ್‌ ಸೂಚನೆಯಲ್ಲಿ ಉಲ್ಲೇಖಿಸಿಲ್ಲ. ಇನ್ನು ಮರಣೋತ್ತರ ಗೌರವವನ್ನು ನೀಡಲು ಜನವರಿ 15, 1955ರಂದು ಹೊರಡಿಸಲಾದ ಹೆಚ್ಚುವರಿ ಅಧಿಸೂಚನೆಯಲ್ಲೂ ಅದರ ಕಾರ್ಯ ವಿಧಾನವನ್ನು ಉಲ್ಲೇಖಿಸಿಲ್ಲ. ಆದ್ದರಿಂದ ಪ್ರಧಾನಿ ಅಥವಾ ಕ್ಯಾಬಿನೆಟ್‌ ಅಧ್ಯಕ್ಷರು ಹೆಸರನ್ನು ನಾಮಕರಣ ಮಾಡುವ ಪ್ರಕ್ರಿಯೆಯು ಒಂದು ಕಾರ್ಯ ವಿಧಾನವೇ ಹೊರತು ಕಾನೂನು ಅಲ್ಲ ಎಂದು thewire.in ತನ್ನ ವರದಿಯಲ್ಲಿ ತಿಳಿಸಿದೆ.

ಜುಲೈ 1955ರಲ್ಲಿ ನೆಹರೂ ಭಾರತ ರತ್ನ ಸ್ವೀಕರಿಸುವ ಮುಂಚೆ ಎರಡು ಪ್ರಮುಖ ಸಂದರ್ಭಗಳಲ್ಲಿ ಮಾತ್ರ ಭಾರತ ರತ್ನ ನೀಡಲಾಗುತ್ತಿತ್ತು. 1954ರ ಸ್ವಾತಂತ್ರ್ಯ ದಿನಾಚರಣೆಯಂದು ಮತ್ತು 1955ರ ಗಣರಾಜ್ಯೋತ್ಸವದಂದು ಪ್ರಶಸ್ತಿ ನೀಡಲಾಗಿತ್ತು. ವಿಶ್ವೇಶ್ವರಯ್ಯ, ಸಿ.ವಿ ರಾಮನ್‌ ಸೇರಿದಂತೆ ಕೆಲವರಿಗೆ ಮಾತ್ರ ಭಾರತ ರತ್ನ ನೀಡಲಾಗಿತ್ತು.

ಜುಲೈ 13, 1955ರಂದು ನೆಹರೂ ನೆಹರು ಯುರೋಪಿಯನ್ ರಾಷ್ಟ್ರಗಳು ಮತ್ತು ಸೋವಿಯತ್ ಒಕ್ಕೂಟದ ಯಶಸ್ವಿ ಪ್ರವಾಸದಿಂದ ಮರಳಿದ್ದರು, ವಿಶ್ವದಾದ್ಯಂತ ಶೀತಲ ಸಮರವು ವೇಗವಾಗಿ ಉಲ್ಬಣಗೊಳ್ಳುತ್ತಿದ್ದಂತೆ ಶಾಂತಿಯನ್ನು ಉತ್ತೇಜಿಸುವ ಸಲುವಾಗಿ ನೆಹರೂ ತೆರಳಿದ್ದರು. ಮಾತ್ರವಲ್ಲದೇ, ಭಾರತವನ್ನು ವಿಶ್ವದ ಮಟ್ಟಿಗೆ ನಿರ್ಣಾಯಕ ರಾಷ್ಟ್ರವನ್ನಾಗಿಸುವ ಅವರ ಪ್ರಯತ್ನವು ಯಶಸ್ಸು ಕಂಡಿತ್ತು.  ಹಾಗಾಗಿ ವಿದೇಶದಲ್ಲಿ ಮತ್ತು ಭಾರತದಲ್ಲಿ ಅವರು ಭರಪೂರ ಬೆಂಬಲ ಗಳಿಸಿದರು ಮತ್ತು ಜನಪ್ರಿಯತೆಯೂ ಹೆಚ್ಚಾಯಿತು.

ತಮ್ಮ ಯಶಸ್ವಿ ಪ್ರವಾಸದಿಂದ ಭಾರತಕ್ಕೆ ನೆಹರೂ ಮರಳಿದ ವೇಳೆ ಪ್ರೋಟೊಕಾಲ್‌ ಅನ್ನು ಲೆಕ್ಕಿಸದೇ ಭಾರತದ ರಾಷ್ಟ್ರಪತಿಯಾಗಿದ್ದ ರಾಜೇಂದ್ರ ಪ್ರಸಾದ್‌ ವಿಮಾನ ನಿಲ್ದಾಣಕ್ಕೆ ತೆರಳಿ ನೆಹರೂವನ್ನು ಬರ ಮಾಡಿಕೊಂಡರು. ನೆಹರೂ ಆಗಮನವನ್ನು ಕಾದು ಹಲವಾರು ಜನರು ಕಿಕ್ಕಿರಿದಿದ್ದರು. ಜನರ ಈ ಆಸಕ್ತಿಯನ್ನು ಕಂಡು ನೆಹರೂ ಅಲ್ಲೇ ಭಾಷಣವನ್ನೂ ನೆರವೇರಿಸಿದರು.

ಬಳಿಕ ಜುಲೈ 15, 1955ರಂದು ರಾಷ್ಟ್ರಪತಿ ಭವನದಲ್ಲಿ ವಿಶೇಷ  ಔತಣಕೂಟವನ್ನು ರಾಜೇಂದ್ರ ಪ್ರಸಾದ್ ಆಯೋಜಿಸಿದರು. ಈ ಸಮಾರಂಭದಲ್ಲಿಯೇ ಪ್ರಸಾದ್ ಜವಾಹರಲಾಲ್ ನೆಹರೂ ಅವರಿಗೆ ಭಾರತೀಯ ರತ್ನವನ್ನು ಪ್ರದಾನ ಮಾಡುವುದಾಗಿ ಘೋಷಿಸಿದರು.‌ ಈ ಘೋಷಣೆಯು ನೆಹರೂರವರಿಗೂ ತಿಳಿಯದಂತೆ ʼನಿಕಟವಾಗಿ ಕಾಪಾಡಲಾಗಿದೆʼ ಎಂದು ಜುಲೈ 16, 1955ರ ಟೈಮ್ಸ್‌ ಆಫ್‌ ಇಂಡಿಯಾ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿತ್ತು. ಈ ಕಾರ್ಯಕ್ರಮದಲ್ಲಿ ನೆಹರೂವನ್ನು ರಾಜೇಂದ್ರ ಪ್ರಸಾದ್‌ ʼನಮ್ಮ ಕಾಲದ ಶಾಂತಿಯ ಮಹಾನ್‌ ವಾಸ್ತುಶಿಲ್ಪಿʼ ಎಂದು ಬಣ್ಣಿಸಿದ್ದರು.

"ಪ್ರಧಾನ ಮಂತ್ರಿಯ ಯಾವುದೇ ಆದೇಶ ಅಥವಾ ಶಿಫಾರಸ್ಸು ಇಲ್ಲದೇ ನೆಹರೂರನ್ನು ಭಾರತರತ್ನಕ್ಕೆ ಆಯ್ಕೆ ಮಾಡಿದ್ದ ಕುರಿತು ರಾಜೇಂದ್ರ ಪ್ರಸಾದ್‌ ಬಳಿಕ ಕ್ಷಮೆಯನ್ನೂ ಯಾಚಿಸಿದ್ದರು" ಎಂದು ಅದೇ ಪತ್ರಿಕೆಯ ವರದಿಯು ಉಲ್ಲೇಖಿಸಿದೆ. ನೆಹರೂರವರಿಗೆ ನೀಡಿದ ಭಾರತ ರತ್ನದ ಕುರಿತಾದಂತೆ ಎದ್ದಿರುವ ವಿವಾದಗಳಿಗೆಲ್ಲಾ ಈ ಉತ್ತರವೇ ಸಾಕು ಎಂದು ವರದಿ ತಿಳಿಸಿದೆ.

ರಾಜಕೀಯದಲ್ಲಿ ಧರ್ಮವನ್ನು ತುರುಕುವ ಕುರಿತಾದಂತೆ ನೆಹರೂ ಮತ್ತು ರಾಜೇಂದ್ರ ಪ್ರಸಾದ್‌ ರಿಗೆ ಭಿನ್ನಾಭಿಪ್ರಾಯವಿತ್ತು.  ಪ್ರಸಾದ್ ಮತ್ತು ನೆಹರೂ ನಡುವಿನ ಈ ತೀವ್ರವಾದ ಘರ್ಷಣೆಗಳು ಪರಸ್ಪರರು ಅಗೌರವ ಹೊಂದಿದ್ದರು ಎಂದು ಅರ್ಥವಲ್ಲ. ಅವರು ರಾಜಕೀಯ ವಿರೋಧವನ್ನು ವೈಯಕ್ತಿಕ ವೈರತ್ವವೆಂದು ಅರ್ಥಮಾಡಿಕೊಳ್ಳುವ ಷಡ್ಯಂತ್ರಕ್ಕೆ ಬೀಳಲಿಲ್ಲ, ಅಥವಾ ರಾಜಕೀಯ ಮತ್ತು ರಾಷ್ಟ್ರೀಯ ಕಾರಣಕ್ಕಾಗಿ ಪರಸ್ಪರರ ಬದ್ಧತೆಯನ್ನು ಪಣಕ್ಕಿಟ್ಟು ಅವರು ಸ್ಪರ್ಧಿಸಲಿಲ್ಲ. ಇದು ಪ್ರಸಾದ್ ಅವರು ನೆಹರೂರಿಗೆ ಭಾರತ ರತ್ನವನ್ನು ನೀಡಿರುವುದರಲ್ಲಿ ಸ್ಪಷ್ಟವಾಗಿದೆ. ಸೈದ್ಧಾಂತಿಕ ಭಿನ್ನತೆಗಳು ವೈಯಕ್ತಿಕ ಸಂಬಂಧಗಳನ್ನು ಮರು ವ್ಯಾಖ್ಯಾನಿಸುವಾಗ ಮತ್ತು ಭಾರತದಲ್ಲಿ ದ್ವೇಷದ ಬೀಜಗಳನ್ನು ಬಿತ್ತುವಾಗ ಇದು ನೆನಪಿಡಲೇಬೇಕಾದ ಪ್ರಮುಖ ಪಾಠವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News