ಕೇರಳ: ಶಬರಿಮಲೆ ಚಳುವಳಿ, ಸಿಎಎ ಪ್ರತಿಭಟನೆ ಸಂದರ್ಭದ ಪ್ರಕರಣ ಹಿಂಪಡೆಯಲು ನಿರ್ಧಾರ

Update: 2021-02-24 17:18 GMT

ತಿರುವನಂತಪುರಂ, ಫೆ.24: ರಾಜ್ಯದಲ್ಲಿ ಶಬರಿಮಲೆ ಚಳುವಳಿ ಹಾಗೂ ಪೌರತ್ವ ಕಾಯ್ದೆ (ಸಿಎಎ) ವಿರೋಧಿಸಿ ನಡೆದ ಪ್ರತಿಭಟನೆ ಸಂದರ್ಭ ದಾಖಲಿಸಿದ ಪ್ರಕರಣಗಳನ್ನು (ಕ್ರಿಮಿನಲ್ ಪ್ರಕರಣ ಹೊರತುಪಡಿಸಿ) ಹಿಂಪಡೆಯಲು ನಿರ್ಧರಿಸಿರುವುದಾಗಿ ಕೇರಳ ಸರಕಾರ ಬುಧವಾರ ಹೇಳಿದೆ. ತಿರುವನಂತಪುರಂನಲ್ಲಿ ಬುಧವಾರ ನಡೆದ ಸಂಪುಟ ಸಭೆಯಲ್ಲಿ ಈ ಕುರಿತ ನಿರ್ಧಾರಕ್ಕೆ ಬರಲಾಗಿದೆ ಎಂದು ವರದಿಯಾಗಿದೆ.

ಸರಕಾರದ ನಿರ್ಧಾರವನ್ನು ಬಿಜೆಪಿ ಸ್ವಾಗತಿಸಿದ್ದರೂ, ಮುಂಬರುವ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೈಗೊಂಡ ನಿರ್ಧಾರ ಇದಾಗಿದೆ ಎಂದು ಟೀಕಿಸಿದೆ. ಕೇರಳದಲ್ಲಿ ಪೌರತ್ವ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದ ಇಂಡಿಯನ್ ಮುಸ್ಲಿಮ್ ಲೀಗ್ ‘ಚುನಾವಣೆ ಹತ್ತಿರವಾಗುತ್ತಿರುವುದರಿಂದ ಆಡಳಿತಾರೂಢ ಎಲ್‌ಡಿಎಫ್ ಸರಕಾರಕ್ಕೆ ಪ್ರಕರಣ ಹಿಂಪಡೆಯದೆ ಬೇರೆ ಆಯ್ಕೆಯೇ ಇರಲಿಲ್ಲ’ ಎಂದು ಪ್ರತಿಕ್ರಿಯಿಸಿದೆ. ಸರಕಾರಕ್ಕೆ ವಿಳಂಬವಾಗಿ ಜ್ಞಾನೋದಯವಾಗಿದೆ ಎಂದು ಕೇರಳ ವಿಧಾನಸಭೆಯ ವಿಪಕ್ಷ ನಾಯಕ, ಕಾಂಗ್ರೆಸ್ ಮುಖಂಡ ರಮೇಶ್ ಚೆನ್ನಿತ್ತಲ ಪ್ರತಿಕ್ರಿಯಿಸಿದ್ದಾರೆ. ಶಬರಿಮಲೆ ಚಳವಳಿಯ ಸಂದರ್ಭ ಅಯ್ಯಪ್ಪ ಭಕ್ತರೂ ಸೇರಿದಂತೆ ಅಮಾಯಕ ಜನರ ಮೇಲೆ ಸರಕಾರ ಪ್ರಕರಣ ದಾಖಲಿಸಿದೆ. ಯುಡಿಎಫ್ ಅಧಿಕಾರಕ್ಕೆ ಬಂದರೆ ಎಲ್ಲಾ ಪ್ರಕರಣಗಳನ್ನೂ ಹಿಂಪಡೆಯಲಾಗುವುದು ಎಂದು ಕಾಂಗ್ರೆಸ್ ಈ ಹಿಂದೆ ಹೇಳಿಕೆ ನೀಡಿತ್ತು.

ಶಬರಿಮಲೆ ದೇವಸ್ಥಾನಕ್ಕೆ ಎಲ್ಲಾ ವಯೋಮಾನದ ಮಹಿಳೆಯರೂ ಭೇಟಿ ನೀಡಬಹುದು ಎಂದು 2018ರಲ್ಲಿ ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ಇದನ್ನು ವಿರೋಧಿಸಿ ನಡೆದ ಪ್ರತಿಭಟನೆ ಹಾಗೂ ಬಂದ್ ಸಂದರ್ಭ ವ್ಯಾಪಕ ಹಿಂಸಾಚಾರದ ಹಿನ್ನೆಲೆಯಲ್ಲಿ 50,000ಕ್ಕೂ ಅಧಿಕ ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ಹಲವು ಮಹಿಳೆಯರು ದೇವಸ್ಥಾನ ಪ್ರವೇಶಿಸಲು ವಿಫಲ ಪ್ರಯತ್ನ ನಡೆಸಿದ್ದರು. ಅಂತಿಮವಾಗಿ 2019ರ ಜನವರಿ 2ರಂದು ಸರಕಾರಿ ಉದ್ಯೋಗಿ ಕನಕದುರ್ಗ ಮತ್ತು ಉಪನ್ಯಾಸಕಿ ಬಿಂದು ಅಮ್ಮಿಣಿ ದೇವಸ್ಥಾನ ಪ್ರವೇಶಿಸಿ ಪ್ರಾರ್ಥನೆ ಸಲ್ಲಿಸಲು ಯಶಸ್ವಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News