ಕೇಂದ್ರದಿಂದ 45 ಚೀನಿ ಸಂಸ್ಥೆಗಳಿಗೆ ಕೆಂಪು ಹಾಸಿನ ಸ್ವಾಗತ: ಶಿವಸೇನೆ

Update: 2021-02-25 14:25 GMT

ಪುಣೆ,ಫೆ.25: ಕೇಂದ್ರ ಸರಕಾರವನ್ನು ಗುರುವಾರ ತರಾಟೆಗೆತ್ತಿಕೊಂಡಿರುವ ಶಿವಸೇನೆ, ಒಂದೆಡೆ ಗಡಿ ಬಿಕ್ಕಟ್ಟಿನ ಬಳಿಕ ಅದು ಚೀನಿ ಉತ್ಪನ್ನಗಳ ಬಹಿಷ್ಕಾರಕ್ಕೆ ಕರೆ ನೀಡಿದೆ ಮತ್ತು ಆ ದೇಶದ ಕೆಲವು ಆ್ಯಪ್‌ಗಳನ್ನು ನಿಷೇಧಿಸಿದೆ,ಇನ್ನೊಂದೆಡೆ 2020ರಲ್ಲಿ ಚೀನಾ ಭಾರತದ ಉನ್ನತ ವ್ಯಾಪಾರ ಪಾಲುದಾರ ದೇಶವಾಗಿ ಹೊರಹೊಮ್ಮಿದೆ ಎಂದು ಹೇಳಿದೆ.

ಸರಕಾರವು ಮತ್ತೊಮ್ಮೆ ಚೀನಿ ಸಂಸ್ಥೆಗಳಿಗೆ ಕೆಂಪು ಹಾಸಿನ ಸ್ವಾಗತವನ್ನು ಕೋರುತ್ತಿದೆ,ಆದರೆ ಚೀನಾ ನಂಬಿಕಸ್ಥ ನೆರೆರಾಷ್ಟ್ರವಲ್ಲ ಎನ್ನುವುದನ್ನು ಅದು ಮರೆಯಬಾರದು ಎಂದು ಶಿವಸೇನೆ ತನ್ನ ಮುಖವಾಣಿ ‘ಸಾಮ್ನಾ’ದ ಸಂಪಾದಕೀಯ ಲೇಖನದಲ್ಲಿ ಕಿವಿಮಾತನ್ನೂ ಹೇಳಿದೆ.

ಭಾರತ-ಚೀನಾ ನಡುವಿನ ಗಡಿ ಉದ್ವಿಗ್ನತೆ ಕಳೆದ ವಾರ ಶಮನಗೊಂಡಿದೆ. ಉಭಯ ದೇಶಗಳ ನಡುವಿನ ವ್ಯಾಪಾರ ಸಂಬಂಧಗಳಲ್ಲಿಯ ಉದ್ವಿಗ್ನತೆಯೂ ಕಡಿಮೆಯಾಗಿರುವಂತೆ ಕಂಡು ಬರುತ್ತಿದೆ. ಭಾರತದಲ್ಲಿ ಕಾರ್ಯಾಚರಿಸಲು 45 ಚೀನಿ ಕಂಪನಿಗಳಿಗೆ ಅನುಮತಿ ನೀಡುವ ಸಾಧ್ಯತೆಯಿದೆ. ಕೋವಿಡ್-19 ಸಾಂಕ್ರಾಮಿಕ ಶುರುವಾದ ಬಳಿಕ ಚೀನಾದ ಕಂಪನಿಗಳು ಮತ್ತು ಅವುಗಳ ಹೂಡಿಕೆಗಳ ಬಗ್ಗೆ ಮೋದಿ ಸರಕಾರವು ತಳೆದಿದ್ದ ಕಠಿಣ ನಿಲುವು ಸಡಿಲಗೊಳ್ಳುತ್ತಿರುವಂತಿದೆ ಎಂದು ಅದು ಹೇಳಿದೆ. ಸಂದರ್ಭಗಳಿಗೆ ಅನುಗುಣವಾಗಿ ಇತರ ದೇಶಗಳೊಂದಿಗಿನ ರಾಜಕೀಯ ಮತ್ತು ರಾಜತಾಂತ್ರಿಕ ಸಂಬಂಧಗಳು ಬದಲಾಗುತ್ತಿರುತ್ತವೆ. ಆದರೆ ಗಡಿಯಲ್ಲಿ ಉದ್ವಿಗ್ನತೆ ಶಮನಗೊಂಡ ಬೆನ್ನಲ್ಲೇ ಕೇಂದ್ರವು ಚೀನಾದೊಂದಿಗೆ ವ್ಯಾಪಾರದ ಕುರಿತು ತನ್ನ ನಿಲುವನ್ನು ಮೃದುಗೊಳಿಸಿರುವುದು ಕೇವಲ ಕಾಕತಾಳಿಯವೇ ಎಂದು ಪ್ರಶ್ನಿಸಿರುವ ಶಿವಸೇನೆ,ಚೀನಾ ನಂಬಿಕೆ ಮತ್ತು ವಿಶ್ವಾಸಕ್ಕೆ ಎಳ್ಳಷ್ಟೂ ಪಾತ್ರವಲ್ಲದ ನೆರೆರಾಷ್ಟ್ರವಾಗಿದೆ. ತನ್ನ ವ್ಯಾಪಾರ ಹಿತಾಸಕ್ತಿಗಳಿಗಾಗಿ ಅದು ಗಡಿ ಕುರಿತು ಮೃದು ನಿಲುವನ್ನು ತಳೆದಿದೆಯಾದರೂ ತನ್ನ ಉದ್ದೇಶ ಸಾಧನೆಯ ಬಳಿಕ ಅದು ಗಡಿಯಲ್ಲಿ ಮತ್ತೆ ತೊಂದರೆಗಳನ್ನು ಸೃಷ್ಟಿಸಬಲ್ಲದು ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News