ತೈಲ ಬೆಲೆಯೇರಿಕೆ, ಜಿಎಸ್‌ಟಿ ವಿರೋಧಿಸಿ ಶುಕ್ರವಾರ ಭಾರತ ಬಂದ್‌ಗೆ ಕರೆ

Update: 2021-02-26 07:03 GMT
ಸಾಂದರ್ಭಿಕ ಚಿತ್ರ 

ಹೊಸದಿಲ್ಲಿ, ಫೆ.25: ತೈಲ ಬೆಲೆಯೇರಿಕೆಯನ್ನು ಖಂಡಿಸಿ ಮತ್ತು ಜಿಎಸ್‌ಟಿ ವ್ಯವಸ್ಥೆಯ ಮರುಪರಿಶೀಲನೆಗೆ ಆಗ್ರಹಿಸಿ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ(ಸಿಎಐಟಿ)ದ ನೇತೃತ್ವದಲ್ಲಿ ಫೆ.26ರಂದು (ಶುಕ್ರವಾರ) ನಡೆಯಲಿರುವ ಭಾರತ್ ಬಂದ್ ಪ್ರತಿಭಟನೆಗೆ ದೇಶದಾದ್ಯಂತದ ಸುಮಾರು 40,000ಕ್ಕೂ ಅಧಿಕ ವ್ಯಾಪಾರಿಗಳ ಸಂಘಟನೆ ಬೆಂಬಲ ಸೂಚಿಸಿವೆ ಎಂದು ಸಿಎಐಟಿ ಮೂಲಗಳು ಹೇಳಿವೆ.

ಭಾರತ್ ಬಂದ್‌ಗೆ ಅಖಿಲ ಭಾರತ ಸಾರಿಗೆ ಸಂಸ್ಥೆಗಳ ಹಿತರಕ್ಷಣಾ ಸಂಘ(ಎಐಟಿಡಬ್ಲ್ಯೂಎ) ವೂ ಬೆಂಬಲ ಘೋಷಿಸಿರುವ ಹಿನ್ನೆಲೆಯಲ್ಲಿ ಲಕ್ಷಾಂತರ ಲಾರಿಗಳು ರಸ್ತೆಗಿಳಿಯುವ ಸಾಧ್ಯತೆಯಿಲ್ಲ. ಡೀಸೆಲ್ ಬೆಲೆ ಇಳಿಸಬೇಕು ಮತ್ತು ಇ-ವೇ ನಿಯಮದ ಬದಲು ಇ-ಚಲನ್ ವ್ಯವಸ್ಥೆ ಜಾರಿಗೊಳಿಸಬೇಕು ಎಂಬುದು ಎಐಟಿಡಬ್ಲ್ಯೂಎ ಆಗ್ರಹವಾಗಿದೆ. ಶುಕ್ರವಾರ ಎಲ್ಲಾ ಸಾರಿಗೆ ಸಂಸ್ಥೆಗಳು ತಮ್ಮ ವಾಹನವನ್ನು ರಸ್ತೆಗಿಳಿಸದೆ ಮತ್ತು ಸಾರಿಗೆ ಗೋದಾಮುಗಳಲ್ಲಿ ಪ್ರತಿಭಟನೆಯ ಬ್ಯಾನರ್ ಪ್ರದರ್ಶಿಸಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಬೇಕು . ಶುಕ್ರವಾರ ಯಾವುದೇ ಸರಕು ಸಾಗಿಸಲು ಸಾರಿಗೆ ಸಂಸ್ಥೆಗಳನ್ನು ಸಂಪರ್ಕಿಸಬಾರದು ಎಂದು ಗ್ರಾಹಕರನ್ನು ವಿನಂತಿಸಲಾಗಿದೆ ಎಂದು ಎಐಟಿಡಬ್ಲ್ಯೂಎ ರಾಷ್ಟ್ರೀಯ ಅಧ್ಯಕ್ಷ ಮಹೇಂದ್ರ ಆರ್ಯ ಹೇಳಿದ್ದಾರೆ. ಹೊಸ ಇ-ವೇ ನಿಯಮವನ್ನು ರದ್ದುಗೊಳಿಸಬೇಕು ಅಥವಾ ಅದರ ಕೆಲವು ಅಂಶಗಳನ್ನು ಕೈಬಿಡಬೇಕು ಎಂಬುದು ಸಾರಿಗೆ ಸಂಸ್ಥೆಗಳ ಆಗ್ರಹವಾಗಿದೆ. ಜೊತೆಗೆ, ತೈಲ ಬೆಲೆಗಳ ಮೇಲಿನ ತೆರಿಗೆಯನ್ನು ಕಡಿತಗೊಳಿಸಿ ಬೆಲೆಯನ್ನು ಇಳಿಸಬೇಕು ಎಂದೂ ಆಗ್ರಹಿಸುತ್ತಿವೆ. ಸರಕುಗಳ ಅಂತರ್‌ರಾಜ್ಯ ರವಾನೆಗೆ ಎಪ್ರಿಲ್ 1, 2018ರಿಂದ ಜಾರಿಗೆ ಬರುವಂತೆ ಹೊಸ ಇ-ವೇ ನಿಯಮವನ್ನು ಸರಕಾರ ಜಾರಿಗೊಳಿಸಿದೆ.

ಜಿಎಸ್‌ಟಿ ಅತ್ಯಂತ ಸಂಕೀರ್ಣ ತೆರಿಗೆ ವ್ಯವಸ್ಥೆಯಾಗಿದ್ದು ಇದನ್ನು ಮರುಪರಿಶೀಲಿಸಬೇಕು ಮತ್ತು ತೆರಿಗೆ ಶ್ರೇಣಿಯನ್ನು ಸರಳೀಕೃತಗೊಳಿಸಬೇಕು. ಈ ಬಗ್ಗೆ ಸಾರಿಗೆ ಒಕ್ಕೂಟ ಹಲವು ಬಾರಿ ಮಾಡಿಕೊಂಡ ಮನವಿಗೆ ಜಿಎಸ್‌ಟಿ ಸಮಿತಿ ಪ್ರತಿಕ್ರಿಯಿಸದೆ ನಿರ್ಲಕ್ಷ್ಯ ತೋರಿದೆ ಎಂದು ಮಹೇಂದ್ರ ಆರ್ಯ ಹೇಳಿದ್ದಾರೆ. ಮಹಾರಾಷ್ಟ್ರ ಮತ್ತು ಹರ್ಯಾಣದ ಸಾರಿಗೆ ಸಂಸ್ಥೆಗಳು, ಆಲ್ ಇಂಡಿಯಾ ಎಫ್‌ಎಂಸಿಜಿ ಡಿಸ್ಟ್ರಿಬ್ಯೂಟರ್ಸ್ ಅಸೋಸಿಯೇಷನ್, ಅಲ್ಯುಮೀನಿಯಂ ವಸ್ತುಗಳ ಉತ್ಪಾದಕರ ಸಂಘದ ಒಕ್ಕೂಟ, ನಾರ್ದರ್ನ್ ಇಂಡಿಯಾ ಸ್ಪೈಸಸ್ ಟ್ರೇಡರ್ಸ್ ಅಸೋಸಿಯೇಷನ್, ಆಲ್ ಇಂಡಿಯಾ ಕಾಸ್ಮೆಟಿಕ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್, ಅಖಿಲ ಭಾರತ ಮಹಿಳಾ ಉದ್ಯಮಿಗಳ ಸಂಘಟನೆ, ಅಖಿಲ ಭಾರತ ಕಂಪ್ಯೂಟರ್ ವ್ಯಾಪಾರಿಗಳ ಸಂಘವೂ ಬೆಂಬಲ ಸೂಚಿಸಿದೆ. ದೇಶದಾದ್ಯಂತ ವಾಣಿಜ್ಯ ಮಾರುಕಟ್ಟೆಗಳು ಮುಚ್ಚಲಿವೆ. ದೇಶದ್ಯಾಂತದ ಸುಮಾರು 1,500 ಪ್ರದೇಶಗಳಲ್ಲಿ ಧರಣಿ ಮುಷ್ಕರ ನಡೆಯಲಿದೆ. ಸಾಂಕೇತಿಕ ಪ್ರತಿಭಟನೆಯಾಗಿ ಯಾವುದೇ ವ್ಯಾಪಾರಿಗಳು ಜಿಎಸ್‌ಟಿ ಪೋರ್ಟಲ್‌ನಲ್ಲಿ ಲಾಗ್‌ಇನ್ ಮಾಡಿಕೊಳ್ಳದಿರಲು ನಿರ್ಧರಿಸಲಾಗಿದೆ. ಚಾರ್ಟರ್ಡ್ ಅಕೌಂಟೆಂಟ್‌ಗಳ ಸಂಘ ಮತ್ತು ತೆರಿಗೆ ಸಲಹೆಗಾರರ ಸಂಘವೂ ಭಾರತ್ ಬಂದ್‌ಗೆ ಬೆಂಬಲ ಸೂಚಿಸಿವೆ ಎಂದು ಸಿಎಐಟಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News