ಧೋನಿ ದಾಖಲೆ ಮುರಿದ ವಿರಾಟ್ ಕೊಹ್ಲಿ
ಅಹ್ಮದಾಬಾದ್: ವಿರಾಟ್ ಕೊಹ್ಲಿ ಅವರು ತವರು ನೆಲದಲ್ಲಿ ಭಾರತದ ಅತ್ಯಂತ ಯಶಸ್ವಿ ನಾಯಕನೆಂಬ ದಾಖಲೆಗೆ ಭಾಜನರಾಗಿದ್ದಾರೆ.
ಅಹ್ಮದಾಬಾದ್ ನಲ್ಲಿ ಗುರುವಾರ ಕೊನೆಗೊಂಡ 3ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ದ ಭಾರತವು 10 ವಿಕೆಟ್ ಗಳಿಂದ ಜಯ ಸಾಧಿಸಿದ ಬಳಿಕ ಕೊಹ್ಲಿ ದಾಖಲೆ ಪುಟ ಸೇರಿದರು.
ಈ ಸರಣಿಗೂ ಮೊದಲು ಧೋನಿ ದಾಖಲೆ ಮುರಿಯಲು ಕೊಹ್ಲಿಗೆ ಎರಡು ಗೆಲುವಿನ ಅಗತ್ಯವಿತ್ತು. ಚೆನ್ನೈನಲ್ಲಿ ನಡೆದ 2ನೇ ಟೆಸ್ಟ್ ನಲ್ಲಿ ಭಾರತ ಜಯ ದಾಖಲಿಸುವುದರೊಂದಿಗೆ ಧೋನಿ ದಾಖಲೆಯನ್ನು ಕೊಹ್ಲಿ ಸರಿಗಟ್ಟಿದ್ದರು. ಇದೀಗ ಅಹ್ಮದಾಬಾದ್ ನಲ್ಲಿ ಗೆಲುವಿನ ನಗೆ ಬೀರುವುದರೊಂದಿಗೆ ಧೋನಿ ದಾಖಲೆಯನ್ನು ಮುರಿದಿದ್ದಾರೆ.
ತವರು ನೆಲದಲ್ಲಿ ಭಾರತ ತಂಡವನ್ನು 29 ಟೆಸ್ಟ್ ಪಂದ್ಯಗಳಲ್ಲಿ ಮುನ್ನಡೆಸಿರುವ ವಿರಾಟ್ ಕೊಹ್ಲಿ ದಾಖಲೆಯ 22 ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದಾರೆ. ಉಳಿದಿರುವ 5 ಪಂದ್ಯಗಳಲ್ಲಿ ಡ್ರಾ ಹಾಗೂ 2ರಲ್ಲಿ ಸೋಲು ಕಂಡಿದ್ದರು. ಮತ್ತೊಂದೆಡೆ, ಮಾಜಿ ನಾಯಕ ಧೋನಿ ತವರಿನಲ್ಲಿ ಮುನ್ನಡೆಸಿದ 30 ಪಂದ್ಯಗಳಲ್ಲಿ ಭಾರತವು 21ರಲ್ಲಿ ಗೆಲುವು ದಾಖಲಿಸಿತ್ತು.
ಮಾಜಿ ನಾಯಕರುಗಳಾದ ಮುಹಮ್ಮದ್ ಅಝರುದ್ದೀನ್(13 ಗೆಲುವು), ಸೌರವ್ ಗಂಗುಲಿ(10)ಹಾಗೂ ಸುನೀಲ್ ಗವಾಸ್ಕರ್ (7)ಕ್ರಮವಾಗಿ 3ನೇ, 4ನೇ ಹಾಗೂ 5ನೇ ಸ್ಥಾನದಲ್ಲಿದ್ದಾರೆ.