ದೇಶದಲ್ಲಿ 24 ಗಂಟೆಯಲ್ಲಿ ಕೊರೋನ ಸೋಂಕಿನ 16,448 ಹೊಸ ಪ್ರಕರಣಗಳು ದಾಖಲು

Update: 2021-02-27 16:47 GMT

ಹೊಸದಿಲ್ಲಿ, ಫೆ. 27: ಭಾರತದಲ್ಲಿ ಸತತ ಮೂರನೇ ದಿನವಾದ ಶನಿವಾರ ಕೂಡ 16,000ಕ್ಕಿಂತಲೂ ಅಧಿಕ ಹೊಸ ಕೊರೋನ ಸೋಂಕಿನ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ದೇಶದ ಒಟ್ಟು ಕೊರೋನ ಸೋಂಕಿನ ಪ್ರಕರಣಗಳ ಸಂಖ್ಯೆ 1,10,79,979ಕ್ಕೆ ಏರಿಕೆಯಾಗಿದೆ.

ಗುಣಮುಖರಾದವರ ಸಂಖ್ಯೆ 1,07,63,451ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ದತ್ತಾಂಶ ತಿಳಿಸಿದೆ. ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಕೊರೋನ ಸೋಂಕಿನ 16,448 ಹೊಸ ಪ್ರಕರಣಗಳು ದಾಖಲಾಗಿವೆ.

113 ಮಂದಿ ಸಾವನ್ನಪ್ಪುವುದರೊಂದಿಗೆ ದೇಶದಲ್ಲಿ ಕೊರೋನ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 1,56,938ಕ್ಕೆ ಏರಿಕೆಯಾಗಿದೆ ಎಂದು ಶನಿವಾರ ಬೆಳಗ್ಗೆ 8 ಗಂಟೆಗೆ ಪರಿಷ್ಕೃತವಾದ ದತ್ತಾಂಶ ಹೇಳಿದೆ. ಕೊರೋನ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 1,59,590ಕ್ಕೆ ಏರಿಕೆಯಾಗಿದೆ. ಇದು ಒಟ್ಟು ಸೋಂಕಿನ ಶೇ. 1.44 ಆಗಿದೆ. ಕೊರೋನ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 1,07,63,451ಕ್ಕೆ ಏರಿಕೆಯಾಗಿದೆ. ಇದರೊಂದಿಗೆ ಗುಣಮುಖರಾಗುತ್ತಿರುವ ಪ್ರಮಾಣ ಶೇ. 97.14ಕ್ಕೆ ಏರಿಕೆಯಾಗಿದೆ. ಮರಣ ಪ್ರಮಾಣ ಶೇ. 1.47 ದಾಖಲಾಗಿದೆ ಎಂದು ಅದು ಹೇಳಿದೆ.

ಭಾರತದಲ್ಲಿ ಶುಕ್ರವಾರ ಕೊರೋನ ಸೋಂಕಿನ ಒಟ್ಟು 16,577 ಪ್ರಕರಣಗಳು, ಗುರುವಾರ ಒಟ್ಟು 16,738 ಪ್ರಕರಣಗಳು ದಾಖಲಾಗಿವೆ. ಒಟ್ಟು 113 ಸಾವಿನ ಪ್ರಕರಣಗಳಲ್ಲಿ ಮಹಾರಾಷ್ಟ್ರದಲ್ಲಿ 48, ಪಂಜಾಬ್‌ನಲ್ಲಿ 15 ಹಾಗೂ ಕೇರಳದಲ್ಲಿ 14 ವರದಿಯಾಗಿದೆ. ಕೊರೋನ ಸೋಂಕಿನಿಂದಾಗಿ ಮೊದಲ ಬಾರಿಗೆ ಲಕ್ಷದ್ವೀಪದಲ್ಲಿ ಸಾವು ಸಂಭವಿಸಿರುವುದು ವರದಿಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News