ಪ್ರಧಾನಿಗೆ ಚೀನಾ ಭಯ: ರಾಹುಲ್ ಗಾಂಧಿ

Update: 2021-02-27 17:25 GMT

ತೂತುಕುಡಿ, ಫೆ. 27: ಚೀನಾ-ಭಾರತ ಗಡಿ ಸಂಘರ್ಷಕ್ಕೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪೂರ್ವ ನೆರೆಯ ದೇಶಕ್ಕೆ ಮೋದಿ ಅವರು ಹೆದರಿದ್ದಾರೆ ಎಂದಿದ್ದಾರೆ.

ಪ್ಯಾಂಗೊಂಗ್ ಸರೋವರದ ಉತ್ತರ ಹಾಗೂ ದಕ್ಷಿಣ ದಂಡೆಯಿಂದ ಸೇನಾ ಪಡೆಗಳು, ಶಸ್ತ್ರಾಸ್ತ್ರಗಳು ಹಾಗೂ ಇತರ ಸೇನಾ ಯಂತ್ರೋಪಕರಣಗಳನ್ನು ಹಿಂದೆ ಪಡೆದುಕೊಳ್ಳುವ ಪ್ರಕ್ರಿಯೆ ಪೂರ್ಣಗೊಳಿಸುವ ಮೂಲಕ ಪೂರ್ವ ಲಡಾಖ್ ‌ನಲ್ಲಿ ಗಡಿ ಸಂಘರ್ಷ ನಿಷ್ಕ್ರಿಯಗೊಳಿಸುವ ಮೊದಲು ಚೀನಿಯರು ಅತಿಕ್ರಮಣ ಆಲೋಚನೆಯನ್ನು ಡೋಖಾಲದಲ್ಲಿ ಪರೀಕ್ಷೆಗೆ ಒಳಪಡಿಸಿದ್ದರು ಎಂದು ಅವರು ಹೇಳಿದ್ದಾರೆ. ಚೀನಿಯರು ನಮ್ಮ ದೇಶದ ಪ್ರಮುಖ ಕಾರ್ಯತಂತ್ರದ ಪ್ರದೇಶಗಳನ್ನು ಅತಿಕ್ರಮಿಸಿಕೊಂಡಿದ್ದಾರೆ. ಭಾರತದ ಪ್ರತಿಕ್ರಿಯೆಯನ್ನು ಗಮನಿಸಲು ತಮ್ಮ ಅತಿಕ್ರಮಣ ಆಲೋಚನೆಯನ್ನು ಅವರು ಡೋಖಾಲದಲ್ಲಿ ಮೊದಲು ಪರೀಕ್ಷೆ ನಡೆಸಿದರು ಎಂದರು.

ತಮ್ಮ ಅತಿಕ್ರಮಣದ ಆಲೋಚನೆಗೆ ಭಾರತ ಹೇಗೆ ಪ್ರತಿಕ್ರಿಯಿಸುತ್ತದೆ ಎಂದು ಪರೀಕ್ಷಿಸಿದರು. ಆದರೆ, ಭಾರತ ಪ್ರತಿಕ್ರಿಯಿಸುತ್ತಿಲ್ಲ ಎಂಬುದನ್ನು ಅವರು ಗಮನಿಸಿದರು. ಅನಂತರ ಈ ಅತಿಕ್ರಮಣದ ಆಲೋಚನೆಯನ್ನು ಲಡಾಖ್‌ನಲ್ಲಿ ಮತ್ತೊಮ್ಮೆ ಪರೀಕ್ಷಿಸಿದ್ದಾರೆ. ಅವರು ಈ ಪರೀಕ್ಷೆಯನ್ನು ಅರುಣಾಚಲಪ್ರದೇಶದಲ್ಲಿ ಕೂಡ ನಡೆಸಲಿದ್ದಾರೆ ಎಂದು ಅವರು ಹೇಳಿದರು. ಎಪ್ರಿಲ್ 6ರಂದು ನಡೆಯಲಿರುವ ವಿಧಾನ ಸಭೆ ಚುನಾವಣೆ ಹಿನ್ನೆಲೆಯಲ್ಲಿ ತಮಿಳುನಾಡಿಗೆ ಮೂರು ದಿನಗಳ ಪ್ರವಾಸಕ್ಕೆ ಇಲ್ಲಿ ಚಾಲನೆ ನೀಡಿದ ಬಳಿಕ ರಾಹುಲ್ ಗಾಂಧಿ ನ್ಯಾಯವಾದಿಗಳೊಂದಿಗೆ ಸಂವಾದ ನಡೆಸಿದರು.

ಗಡಿ ಸಂಘರ್ಷದ ಬಗ್ಗೆ ವಿವರವಾಗಿ ಮಾತನಾಡಿದ ರಾಹುಲ್ ಗಾಂಧಿ, ಚೀನಾ ಒಳನುಸುಳುವಿಕೆ ಬಗ್ಗೆ ಮೋದಿ ಅವರ ಮೊದಲ ಪ್ರತಿಕ್ರಿಯೆ, ‘ಯಾರೊಬ್ಬರೂ ಭಾರತಕ್ಕೆ ಬಂದಿಲ್ಲ’ ಎಂಬುದಾಗಿತ್ತು. ಇದರಿಂದ ಭಾರತದ ಪ್ರಧಾನಿ ತಮಗೆ ಹೆದರಿದ್ದಾರೆ ಎಂಬ ಸೂಚನೆ ಚೀನಿಯರಿಗೆ ಸಿಕ್ಕಿತು. ಭಾರತದ ಪ್ರಧಾನಿ ನಮ್ಮ ಎದುರು ನಿಂತುಕೊಳ್ಳಲು ಹೆದರುತ್ತಾರೆ ಎಂದು ಅವರು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಅದೇ ಆಧಾರದಲ್ಲಿ ಚೀನಾದವರು ಈಗ ಮಾತುಕತೆ ನಡೆಸಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News