"ಕುಟುಂಬ ಯೋಜನೆಯ ಪರಿಕಲ್ಪನೆಯನ್ನು ಮೊದಲು ಪರಿಚಯಿಸಿದ್ದೇ ಇಸ್ಲಾಂ": ಮಾಜಿ ಚುನಾವಣಾ ಆಯುಕ್ತ ಎಸ್.ವೈ ಖುರೈಷಿ

Update: 2021-02-28 11:49 GMT

ಭಾರತದ ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್.ವೈ.ಖುರೈಷಿ ಅವರು ತನ್ನ ಇತ್ತೀಚಿನ ಕೃತಿ ‘ದಿ ಪಾಪ್ಯುಲೇಷನ್ ಮಿಥ್:ಇಸ್ಲಾಂ,ಫ್ಯಾಮಿಲಿ ಪ್ಲಾನಿಂಗ್ ಆ್ಯಂಡ್ ಪಾಲಿಟಿಕ್ಸ್ ಇನ್ ಇಂಡಿಯಾ ’ದಲ್ಲಿ ಮುಸ್ಲಿಂ ಜನಸಂಖ್ಯೆ ಶೀಘ್ರವೇ ಹಿಂದುಗಳನ್ನು ಮೀರಿಸಲಿದೆ ಎಂಬ ಮಿಥ್ಯೆಯನ್ನು ವ್ಯವಸ್ಥಿತವಾಗಿ ಬಯಲಿಗೆಳೆದಿದ್ದಾರೆ. ತಮ್ಮ ಜನಸಂಖ್ಯೆ ಕಡಿಮೆಯಾಗಬಹುದು ಎಂಬ ಬಹುಸಂಖ್ಯಾತರ ಭೀತಿಗೆ ಹೇಗೆ ಯಾವುದೇ ಆಧಾರಗಳಿಲ್ಲ ಎನ್ನುವುದರ ಬಗ್ಗೆ timesofindia.com ನ ಹಿಮಾಂಶು ಧವನ್ ಅವರಿಗೆ ನೀಡಿರುವ ಸಂದರ್ಶನದಲ್ಲಿ ಖುರೈಷಿ ಮಾತನಾಡಿದ್ದಾರೆ. ಸಂದರ್ಶನದ ಸಾರಾಂಶ ಇಲ್ಲಿದೆ

 ಜನಸಂಖ್ಯಾ ಮಿಥ್ಯೆಯ ಬಗ್ಗೆ ಬರೆಯುವ ಅಗತ್ಯವಿದೆ ಎಂದು ನಿಮಗೆ ಅನಿಸಿದ್ದು ಹೇಗೆ?
 -ಈ ಕೃತಿ ಆಕಸ್ಮಿಕವಾಗಿ ರಚನೆಯಾಗಿದೆ. 1995ರಲ್ಲಿ ಯುನೈಟೆಡ್ ನೇಷನ್ಸ್ ಪಾಪ್ಯುಲೇಷನ್ ಫಂಡ್ (ಯುಎನ್ಎಫ್ಪಿಎ)ನ ನಿರ್ದೇಶಕ (ಭಾರತ)ರು ಭಾರತದಲ್ಲಿ ಮುಸ್ಲಿಮರಲ್ಲಿ ಕುಟುಂಬ ಯೋಜನೆಗಾಗಿ ದಿಕ್ಸೂಚಿ ಲೇಖನವನ್ನು ಬರೆಯುವಂತೆ ನನಗೆ ಸೂಚಿಸಿದ್ದರು. ಆ ಸಂದರ್ಭದಲ್ಲಿ ಇತರ ಹಲವಾರು ಜನರಂತೆ ನಾನೂ ಇಸ್ಲಾಂ ಧರ್ಮವು ಕುಟುಂಬ ಯೋಜನೆಗೆ ವಿರುದ್ಧವಾಗಿದೆ ಮತ್ತು ಮುಸ್ಲಿಮರು ಕುಟುಂಬ ಯೋಜನೆಯನ್ನು ವಿರೋಧಿಸುವಾಗ ಅವರು ತಮ್ಮ ಧಾರ್ಮಿಕ ನಂಬಿಕೆಗಳನ್ನು ಪಾಲಿಸುತ್ತಿದ್ದಾರೆ ಎಂದು ನಂಬಿದ್ದೆ. ಒಂದು ಸಮುದಾಯವಾಗಿ ನಾವು ಅತಿಯಾಗಿ ಮಕ್ಕಳನ್ನು ಹೆರುತ್ತಿದ್ದೇವೆ ಎಂಬ ತಪ್ಪುಕಲ್ಪನೆಯನ್ನೂ ನಾನು ಹಂಚಿಕೊಂಡಿದ್ದೆ. ಆದರೆ ಈ ವಿಷಯದಲ್ಲಿ ಅಧ್ಯಯನ ನನ್ನ ಕಣ್ಣನ್ನು ತೆರೆಸಿತ್ತು ಮತ್ತು ಈ ಬಗ್ಗೆ ಕೃತಿಯೊಂದನ್ನು ರಚಿಸುವ ಆಲೋಚನೆ ನನ್ನಲ್ಲಿ ಹುಟ್ಟಿಕೊಂಡಿತ್ತು. ಇದು ಕಾರ್ಯರೂಪಕ್ಕೆ ಬರಲು ಸುಮಾರು 20-25 ವರ್ಷಗಳನ್ನು ತೆಗೆದುಕೊಂಡಿತ್ತು.
 
ನೀವು ಬಯಲಿಗೆಳೆಯಲು ಬಯಸಿದ ಮೂರು ಮಿಥ್ಯೆಗಳನ್ನು ನೀವು ಹೇಗೆ ಕಂಡುಕೊಂಡಿದ್ದೀರಿ?
  
ಹೌದು,ಮುಸ್ಲಿಮರಲ್ಲಿ ಫಲವತ್ತತೆ ದರ ಅತ್ಯಂತ ಹೆಚ್ಚಿನ ಮಟ್ಟದಲ್ಲಿದೆ ಮತ್ತು ಅವರಲ್ಲಿ ಕುಟುಂಬ ಯೋಜನೆಯ ಸ್ವೀಕೃತಿ ಕನಿಷ್ಠ ಪ್ರಮಾಣ (ಶೇ.45.3)ದಲ್ಲಿದೆ ಎನ್ನುವ ಮಾತುಗಳಿಂದ ನಾನು ನನ್ನ ಕೃತಿಯನ್ನು ಆರಂಭಿಸಿದ್ದೇನೆ. ಆದರೆ ಹಿಂದುಗಳಲ್ಲಿ ಕುಟುಂಬ ಯೋಜನೆಯ ಸ್ವೀಕೃತಿ ಎರಡನೇ ಕನಿಷ್ಠ ಪ್ರಮಾಣ (ಶೇ.54.4)ದಲ್ಲಿದೆ. ಹೀಗಾಗಿ ಮಕ್ಕಳನ್ನು ಹುಟ್ಟಿಸುವುದು ದೇಶಭಕ್ತಿಯಿಲ್ಲದ ಕೃತ್ಯವಾಗಿದ್ದರೆ ಮುಸ್ಲಿಮರು ಮತ್ತು ಹಿಂದುಗಳು ಇಬ್ಬರಲ್ಲಿಯೂ ದೇಶಭಕ್ತಿಯಲ್ಲ ಎನ್ನಬೇಕಾಗುತ್ತದೆ. ಇಸ್ಲಾಂ ಕುಟುಂಬ ಯೋಜನೆಗೆ ವಿರುದ್ಧ ಎನ್ನುವುದು ನಾನು ಕಂಡುಕೊಂಡ ಮೊದಲ ಮಿಥ್ಯೆಯಾಗಿದೆ. ವಾಸ್ತವದಲ್ಲಿ ಇಸ್ಲಾಂ ಕುಟುಂಬ ಯೋಜನೆಯ ಪರಿಕಲ್ಪನೆಯ ಆದ್ಯ ಪ್ರವರ್ತಕನಾಗಿದೆ. ಭಾರತದಲ್ಲಿ ಬಹುಪತ್ನಿತ್ವದ ಹಾವಳಿ ಅತಿಯಾಗಿದೆ ಎನ್ನುವುದು ನಾನು ಕಂಡುಕೊಂಡ ಎರಡನೇ ಮಿಥ್ಯೆಯಾಗಿದೆ.1975ರಲ್ಲಿ ಬಹುಪತ್ನಿತ್ವ ಪದ್ಧತಿಯ ಬಗ್ಗೆ ಸರಕಾರವು ನಡೆಸಿದ್ದ ಏಕೈಕ ಅಧ್ಯಯನವು ಭಾರತದಲ್ಲಿ ಎಲ್ಲ ಸಮುದಾಯಗಳಲ್ಲಿ ಬಹು ಲೈಂಗಿಕ ಸಂಬಂಧಗಳಿವೆ ಮತ್ತು ಮುಸ್ಲಿಮರಲ್ಲಿ ಬಹುಪತ್ನಿತ್ವವು ಕನಿಷ್ಠ ಪ್ರಮಾಣದಲ್ಲಿದೆ ಎನ್ನುವುದನ್ನು ತೋರಿಸಿದೆ. 

ಮಹಿಳೆಯು ಅನಾಥಳಾಗಿರಬೇಕು ಮತ್ತು ತನ್ನ ಜೀವನವನ್ನು ನಿರ್ವಹಿಸುವ ಶಕ್ತಿ ಆಕೆಗಿಲ್ಲ ಹಾಗೂ ಆಕೆಗೆ ಮೊದಲ ಪತ್ನಿಯ ಸ್ಥಾನವನ್ನು ನೀಡಬೇಕು ಎಂಬ ಷರತ್ತುಗಳೊಂದಿಗೆ ಮಾತ್ರ ಇಸ್ಲಾಂ ಬಹುಪತ್ನಿತ್ವಕ್ಕೆ ಅನುಮತಿ ನೀಡುತ್ತದೆ. ಜನರು ಈ ಅನುಮತಿಯ ಸ್ವರೂಪವನ್ನು ತಿರುಚಿದ್ದಾರೆ. ನಮ್ಮ ಲಿಂಗಾನುಪಾತವನ್ನು ಪರಿಗಣಿಸಿದರೆ ಭಾರತದಲ್ಲಿ ಬಹುಪತ್ನಿತ್ವ ಪದ್ಧತಿಯನ್ನು ಅನುಸರಿಸುವುದು ಸಾಧ್ಯವಿಲ್ಲ ಎಂದು ಓರ್ವ ಜನಸಂಖ್ಯಾ ಶಾಸ್ತ್ರಜ್ಞನಾಗಿ ನಾನು ಹೇಳಬಲ್ಲೆ. ಓರ್ವ ವ್ಯಕ್ತಿ ಎರಡು ಮದುವೆಗಳನ್ನು ಮಾಡಿಕೊಂಡರೆ ಇತರ ಯಾವುದೋ ವ್ಯಕ್ತಿ ಮದುವೆಯಾಗಲು ಹೆಣ್ಣು ಸಿಗದೆ ಒಂಟಿ ಬದುಕನ್ನು ಸವೆಸಬೇಕಾಗುತ್ತದೆ.

ಹಿಂದು ಜನಸಂಖ್ಯೆಯನ್ನು ಮೀರಿಸಲು ಹೆಚ್ಚು ಮಕ್ಕಳನ್ನು ಹೆರಲು ಮುಸ್ಲಿಮರು ಸಂಘಟಿತ ಷಡ್ಯಂತ್ರವನ್ನು ಹೊಂದಿದ್ದಾರೆ ಎನ್ನುವುದು ಮೂರನೇ ಮಿಥ್ಯೆಯಾಗಿದೆ. ಹಿಂದುಗಳು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಹೆರಬೇಕು ಎಂದು ಹಲವಾರು ಬಲಪಂಥೀಯ ರಾಜಕಾರಣಿಗಳು ಬಹಿರಂಗ ಭಾಷಣಗಳಲ್ಲಿ ಕರೆಗಳನ್ನು ನೀಡಿದ್ದಾರಾದರೂ ಮುಸ್ಲಿಮರಲ್ಲಿ ಯಾವುದೇ ಸಂಘಟಿತ ಷಡ್ಯಂತ್ರವು ನನಗೆ ಕಂಡುಬಂದಿಲ್ಲ. ಹೀಗಾಗಿ ಸಂಘಟಿತ ಷಡ್ಯಂತ್ರವೇನಾದರೂ ಇದ್ದರೆ ಅದು ಬಲಪಂಥೀಯ ಹಿಂದುಗಳಲ್ಲೇ ಎನ್ನಬೇಕಾಗುತ್ತದೆ. ಹಿಂದುಗಳ ಜನಸಂಖ್ಯೆಯನ್ನು ಮೀರಿಸಲು ಹೇಗೆ ಸಂಖ್ಯಾಶಾಸ್ತ್ರೀಯವಾಗಿ ಮುಸ್ಲಿಮರಿಗೆ ಅಸಾಧ್ಯ ಎನ್ನುವುದರ ಕುರಿತು ನಾನು ಬರೆದಿದ್ದೇನೆ. ಮುಸ್ಲಿಮರಲ್ಲಿ ಜನನ ದರ ಹೆಚ್ಚು ನಿಜ,ಆದರೆ ಹಿಂದುಗಳಲ್ಲಿಯೂ ಅದು ಕಡಿಮೆಯಿಲ್ಲ.

1951ರಲ್ಲಿ ದೇಶದ ಜನಸಂಖ್ಯೆಯಲ್ಲಿ ಶೇ.89ರಷ್ಟು ಹಿಂದುಗಳಿದ್ದರು,ಈಗ ಅದು ಶೇ.79.8ಕ್ಕೆ ಇಳಿದಿದೆ. ಇದೇ ವೇಳೆ ಮುಸ್ಲಿಮರ ಜನಸಂಖ್ಯೆ ಶೇ.9.8ರಿಂದ ಶೇ.14.2ಕ್ಕೆ ಏರಿದೆ. ಆದರೆ ಮುಸ್ಲಿಮರಲ್ಲಿ ಕುಟುಂಬ ಯೋಜನೆಯ ಸ್ವೀಕೃತಿ ದರವು ಹಿಂದುಗಳಿಗಿಂತ ಹೆಚ್ಚು ಮತ್ತು ವೇಗವಾಗಿದೆ. 50 ವರ್ಷಗಳ ಹಿಂದೆ ಹಿಂದುಗಳಿಗೆ ಒಂದು ಮಗುವಿದ್ದರೆ ಮುಸ್ಲಿಮರಿಗೆ 2.1 ಮಕ್ಕಳಿದ್ದರು,ಈ ವ್ಯತ್ಯಾಸವೀಗ 0.5ಕ್ಕಿಳಿದಿದೆ. 1951ರಲ್ಲಿ ಹಿಂದುಗಳ ಸಂಖ್ಯೆ ಮುಸ್ಲಿಮರಿಗಿಂತ 30 ಕೋಟಿಗಳಷ್ಟು ಹೆಚ್ಚಿತ್ತು ಮತ್ತು ಈ ವ್ಯತ್ಯಾಸವೀಗ 80 ಕೋಟಿಗಳಿಗೆ ಹೆಚ್ಚಿದೆ. 80 ವರ್ಷಗಳಲ್ಲಿ ಹಿಂದುಗಳ ಸಂಖ್ಯೆ ಮುಸ್ಲಿಮರಿಗಿಂತ 100 ಕೋಟಿಗಳಷ್ಟು ಹೆಚ್ಚಾಗಲಿದೆ. ಹೀಗಿರುವಾಗಿ ಮುಸ್ಲಿಮರು ಈ ದೇಶವನ್ನು ವಶಪಡಿಸಿಕೊಳ್ಳಲು ಹೇಗೆ ಸಾಧ್ಯ?

ಜನಸಂಖ್ಯೆಯ ಬೆಳವಣಿಗೆಯಲ್ಲಿ ಧರ್ಮವು ಒಂದು ಅಂಶವೇ ಅಲ್ಲ ಎಂದು ನೀವು ಹೇಳುತ್ತೀರಿ. ಹಾಗಿದ್ದರೆ ಆ ಅಂಶವು ಯಾವುದು?
-ಸಾಕ್ಷರತೆ ನಿರ್ದಿಷ್ಟವಾಗಿ ಹೆಣ್ಣುಮಕ್ಕಳಲ್ಲಿ ಸಾಕ್ಷರತೆ, ಆದಾಯ ಮತ್ತು ಆರೋಗ್ಯ ಸೇವೆಗಳ ಉತ್ತಮ ಲಭ್ಯತೆ ಇವು ಮುಖ್ಯ ನಿರ್ಣಾಯಕ ಅಂಶಗಳಾಗಿವೆಯೇ ಹೊರತು ಧರ್ಮವಲ್ಲ. ಸಾಕ್ಷರತೆಯಲ್ಲಿ ಮುಸ್ಲಿಮರು ಯಾವ ಸ್ಥಾನದಲ್ಲಿದ್ದಾರೆ? ಅವರು ಅತ್ಯಂತ ಅಶಿಕ್ಷಿತರಾಗಿದ್ದಾರೆ. ಮುಸ್ಲಿಮರು ಕಡುಬಡವರಾಗಿದ್ದಾರೆ,ಆದರೆ ಆರ್ಥಿಕ ರಂಗದಲ್ಲಿ ಬಲಪಂಥೀಯ ಹಿಂದುಗಳಿಂದ ನಿರಂತರ ದಾಳಿಗೊಳಗಾಗುತ್ತಿದ್ದಾರೆ. ಈ ಬಲಪಂಥೀಯ ಹಿಂದುಗಳು ಮುಸ್ಲಿಮರು ಮಾರಾಟ ಮಾಡುವ ಸರಕುಗಳನ್ನು ಮತ್ತು ಒದಗಿಸುವ ಸೇವೆಗಳನ್ನು ಬಹಿಷ್ಕರಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಮೂರನೆಯದಾಗಿ ಮುಸ್ಲಿಮರಿಗೆ ಆರೋಗ್ಯ ಸೇವೆಗಳ ಲಭ್ಯತೆಯ ಕೊರತೆಯಿದೆ,ಏಕೆಂದರೆ ಕೊಳಗೇರಿಗಳಲ್ಲಿ ವಾಸವಿರಲು ಅವರ ಮೇಲಿನ ಒತ್ತಡ ಹೆಚ್ಚುತ್ತಿದೆ ಮತ್ತು ಇಂತಹ ಪ್ರದೇಶಗಳಲ್ಲಿ ಕೆಲಸ ಮಾಡಲು ವೈದ್ಯರು ಮತ್ತು ನರ್ಸ್ಗಳು ಬಯಸುವುದಿಲ್ಲ. ಅವರು ಇಂತಹ ಕೊಳಗೇರಿಗಳನ್ನು ‘ಮಿನಿ ಪಾಕಿಸ್ತಾನ ’ಎಂದು ಬಣ್ಣಿಸುತ್ತಾರೆ. ಮುಸ್ಲಿಮರು ಕುಟುಂಬ ಯೋಜನೆಯನ್ನು ಪಾಲಿಸಬೇಕು ಎಂದು ಅಧಿಕಾರಿಗಳು ಬಯಸುತ್ತಾರೆ,ಆದರೆ ಅವರು ಕುಟುಂಬ ಯೋಜನೆಗಾಗಿ ಪೂರಕ ವಾತಾವರಣವನ್ನು ಸೃಷ್ಟಿಸುವುದಿಲ್ಲ. ಇದು ಬೂಟಾಟಿಕೆಯಾಗಿದೆ.

ತುರ್ತು ಸ್ಥಿತಿ ನಂತರದ ತಾರತಮ್ಯವನ್ನು ನೀವು ಈಗಲೂ ಎದುರಿಸುತ್ತಿದ್ದೀರಾ?
ತುರ್ತು ಸ್ಥಿತಿಯಿಂದ ನಾವಿನ್ನೂ ಚೇತರಿಸಿಕೊಂಡಿಲ್ಲ ಮತ್ತು ಕುಟುಂಬ ಯೋಜನೆಯು ನಿಷೇಧಿತ ವಿಷಯವಾಗಿದೆ. ನನ್ನ ನೇತೃತ್ವದಲ್ಲಿ ಅರೋಗ್ಯ ಸಚಿವಾಲಯದ ಸಮಿತಿಯೊಂದನ್ನು ರಚಿಸಲಾಗಿತ್ತು. ಸಂಸತ್ತಿನಲ್ಲಿ ಕೇಳಲಾಗಿದ್ದ ಪ್ರಶ್ನೆಗಳನ್ನು ಗಮನಿಸಿ ಕುಟುಂಬ ಯೋಜನೆಯ ಬಗ್ಗೆ ರಾಜಕಾರಣಿಗಳ ನಿಲುವು ಏನು ಎನ್ನುವುದನ್ನು ನಾವು ವಿಶ್ಲೇಷಿಸಿದ್ದೆವು. ಸಂಸತ್ತಿನಲ್ಲಿ ಕೇಳಲಾಗಿದ್ದ ಎಲ್ಲ ಪ್ರಶ್ನೆಗಳಲ್ಲಿ ಕೇವಲ ಶೇ.15ರಷ್ಟು ಜನಸಂಖ್ಯೆ ಮತ್ತು ಕುಟುಂಬ ಯೋಜನೆಗೆ ಸಂಬಂಧಿಸಿದ್ದವು.

ನಿಮ್ಮ ಅಭಿಪ್ರಾಯದಲ್ಲಿ ಇಸ್ಲಾಮಿಕ ರಾಷ್ಟ್ರಗಳ ಪೈಕಿ ಯಾವುದು ನಾವು ಅನುಸರಿಸಲು ಆದರ್ಶಪ್ರಾಯವಾಗಿದೆ?

ಬಾಂಗ್ಲಾದೇಶದಲ್ಲಿ ನಮಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಸಂಪ್ರದಾಯವಾದಿ ಮುಸ್ಲಿಮರಿದ್ದಾರೆ,ಆದರೂ ಕುಟುಂಬ ಯೋಜನೆಯಲ್ಲಿ ಅವರು ನಮ್ಮನ್ನು ಮೀರಿಸಿದ್ದಾರೆ. ನಾವು ಇಂಡೋನೇಷ್ಯಾದತ್ತಲೂ ಗಮನ ಹರಿಸಬೇಕು. ಅದು ಇಮಾಮ್ಗಳನ್ನು ಈ ಕಾರ್ಯಕ್ಕಾಗಿ ಮನವೊಲಿಸಿದೆ ಮತ್ತು ಪ್ರತಿಯೊಂದು ಮಸೀದಿಯನ್ನೂ ಕುಟುಂಬ ಯೋಜನೆಯ ಕುರಿತು ತಿಳುವಳಿಕೆ ಮೂಡಿಸುವ ಕೇಂದ್ರವನ್ನಾಗಿ ಬಳಸಲಾಗುತ್ತಿದೆ. ಇನ್ನೊಂದು ಸಂಪ್ರದಾಯವಾದಿ ಇಸ್ಲಾಮಿಕ್ ರಾಷ್ಟ್ರವಾಗಿರುವ ಇರಾನ್ನಲ್ಲಿಯೂ ಶೇ.74ರಷ್ಟು ಜನರು ಕುಟುಂಬ ಯೋಜನೆ ಪದ್ಧತಿಗಳನ್ನು ಪಾಲಿಸುತ್ತಿದ್ದಾರೆ.

ಕೃಪೆ: timesofindia.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News