ಕರ್ನಾಟಕ ಕ್ವಾರ್ಟರ್ ಫೆನಲ್‌ಗೆ

Update: 2021-03-01 04:57 GMT

  ಬೆಂಗಳೂರು: ಕರ್ನಾಟಕದ ಯುವ ಆಟಗಾರ ದೇವದತ್ತ ಪಡಿಕ್ಕಲ್ ದಾಖಲಿಸಿದ ಸತತ ಮೂರನೇ ಶತಕದ ನೆರವಿನಲ್ಲಿ ಹಾಲಿ ಚಾಂಪಿಯನ್ ಕರ್ನಾಟಕ ತಂಡ ರವಿವಾರ ವಿಜಯ್ ಹಝಾರೆ ಟ್ರೋಫಿ ಟೂರ್ನಿಯ ‘ಸಿ’ ಗ್ರೂಪ್ ಪಂದ್ಯದಲ್ಲಿ ರೈಲ್ವೆ ವಿರುದ್ಧ 10 ವಿಕೆಟ್‌ಗಳ ಭರ್ಜರಿ ಜಯ ಗಳಿಸಿದ್ದು, ಕ್ವಾರ್ಟರ್ ಫೈನಲ್‌ನಲ್ಲಿ ಅವಕಾಶ ದೃಢಪಡಿಸಿದೆ.

ಇಲ್ಲಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗೆಲುವಿಗೆ 285 ರನ್‌ಗಳ ಸವಾಲನ್ನು ಪಡೆದ ಕರ್ನಾಟಕ ತಂಡ ದೇವದತ್ತ ಪಡಿಕ್ಕಲ್ ಮತ್ತು ನಾಯಕ ರವಿಕುಮಾರ್ ಸಮರ್ಥ್ ಅವರು ಮುರಿಯದ ಜೊತೆಯಾಟದಲ್ಲಿ 40.3 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ಅಗತ್ಯದ ರನ್ ಸೇರಿಸಿ ತಂಡವನ್ನು ಗೆಲುವಿನ ದಡ ತಲುಪಿಸಿದರು.

  

  

ಪಡಿಕ್ಕಲ್ 125 ಎಸೆತಗಳಲ್ಲಿ 9 ಬೌಂಡರಿ ಮತ್ತು 9 ಸಿಕ್ಸರ್ ನೆರವಿನಲ್ಲಿ 145 ರನ್ ಗಳಿಸಿದರು. ಆರ್‌ಸಿಬಿ ತಂಡದ ಓಪನರ್ ಪಡಿಕ್ಕಲ್ ಒಡಿಶಾ ವಿರುದ್ಧ ವೃತ್ತಿಜೀವನದ ಅತ್ಯುತ್ತಮ 152 ರನ್ ಗಳಿಸಿದ್ದರು. ಕೇರಳ ವಿರುದ್ಧ ಔಟಾಗದೆ 126 ರನ್ ಗಳಿಸಿದರು. 20ರ ಹರೆಯದ ಎಡಗೈ ಆಟಗಾರ ಪಡಿಕ್ಕಲ್ ಮತ್ತು ನಾಯಕ ರವಿಕುಮಾರ್ ಸಮರ್ಥ್ ಶತಕ ದಾಖಲಿಸಿದರು. ಸಮರ್ಥ್ ಔಟಾಗದೆ 118 ಎಸೆತಗಳಲ್ಲಿ 17 ಬೌಂಡರಿಗಳ ಸಹಾಯದಿಂದ 130 ರನ್ ಗಳಿಸಿದರು. ಎರಡು ಅರ್ಧಶತಕಗಳನ್ನು ದಾಖಲಿಸಿರುವ ಪಡಿಕ್ಕಲ್ ಈ ಋತುವಿನ ಐದು ಪಂದ್ಯಗಳಿಂದ 190.66ರ ಸರಾಸರಿಯೊಂದಿಗೆ 572 ರನ್ ಜಮೆ ಮಾಡಿದ್ದಾರೆ. ರೈಲ್ವೆ ಬೌಲರ್‌ಗಳು 29.5 ಓವರ್‌ಗಳಲ್ಲಿ 200 ರನ್ ಗಳಿಸಿದ ಕರ್ನಾಟಕ ಆರಂಭಿಕ ಜೋಡಿ ಯನ್ನು ಬೇರ್ಪಡಿಸಲು ಹರ ಸಾಹಸ ನಡೆಸಿದರೂ ಫಲಕಾರಿಯಾಗಲಿಲ್ಲ.

   ಪಡಿಕ್ಕಲ್ ಮೊದಲು ಅರ್ಧಶತಕ ದಾಖಲಿಸಲು 60 ಎಸೆತಗಳನ್ನು ತೆಗೆದುಕೊಂಡರು. ಮುಂದಿನ 34 ಎಸೆತಗಳಲ್ಲಿ ಇನ್ನೂ 50 ರನ್ ಸೇರಿಸಿ ಲಿಸ್ಟ್ ‘ಎ’ ಕ್ರಿಕೆಟ್‌ನಲ್ಲಿ ಐದನೇ ಶತಕ ದಾಖಲಿಸಿದರು. ಈ ಮೊದಲು ರೈಲ್ವೆ ಓಪನರ್ ಪ್ರಥಮ್ ಸಿಂಗ್ ಶತಕ (129) ಸಹಾಯದಿಂದ 9 ವಿಕೆಟ್ ನಷ್ಟದಲ್ಲಿ 284 ರನ್ ಗಳಿಸಿತ್ತು. ಸಿಂಗ್ 138 ಎಸೆತಗಳಲ್ಲಿ 12 ಬೌಂಡರಿ ಮತ್ತು ಮೂರು ಸಿಕ್ಸರ್‌ಗಳನ್ನು ಬಾರಿಸಿದರು.

    ಕರ್ನಾಟಕ ರೈಲ್ವೆ ವಿರುದ್ಧ ಗೆಲುವಿನೊಂದಿಗೆ ‘ಸಿ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದಿದೆ. ಜಸ್ಟ್ ಕ್ರಿಕೆಟ್ ಅಕಾಡಮಿಯಲ್ಲಿ ನಡೆದ ಇನ್ನೊಂದು ಪಂದ್ಯದಲ್ಲಿ ಒಡಿಶಾ ವಿರುದ್ಧ ಆರು ವಿಕೆಟ್‌ಗಳ ಅಂತರದಲ್ಲಿ ಜಯಗಳಿಸಿದ ಉತ್ತರ ಪ್ರದೇಶ ಎರಡನೇ ಸ್ಥಾನದಲ್ಲಿದೆ.

ಆಲೂರಿನಲ್ಲಿ ಕೆಎಸ್‌ಸಿಎ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬಿಹಾರವನ್ನು ಕೇರಳ ತಂಡ 9 ವಿಕೆಟ್ ಅಂತರದಲ್ಲಿ ಸೋಲಿಸಿದೆ.

ಸಂಕ್ಷಿಪ್ತ ಸ್ಕೋರ್

   ರೈಲ್ವೆ 50 ಓವರ್‌ಗಳಲ್ಲಿ 284/9(ಪ್ರಥಮ್ ಸಿಂಗ್ 129; ಶ್ರೇಯಸ್ ಗೋಪಾಲ್ 41ಕ್ಕೆ 3, ಜೆ.ಸುಚಿತ್ 72ಕ್ಕೆ 2), ಕರ್ನಾಟಕ 40.3 ಓವರ್‌ಗಳಲ್ಲಿ 285/0(ದೇವದತ್ತ ಪಡಿಕ್ಕಲ್ ನಾಟೌಟ್ 145, ರವಿಕುಮಾರ್ ಸಮರ್ಥ್ ನಾಟೌಟ್ 130)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News