ನಟ ದಿಲೀಪ್ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ: ವಿಚಾರಣೆ ಪೂರ್ಣಗೊಳಿಸಲು 6 ತಿಂಗಳು ಕಾಲಾವಕಾಶ ನೀಡಿದ ಸುಪ್ರೀಂ

Update: 2021-03-01 16:57 GMT

ಹೊಸದಿಲ್ಲಿ, ಮಾ. 1: ಮಲೆಯಾಳಂ ಚಿತ್ರ ನಟ ದಿಲೀಪ್ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣದ ವಿಚಾರಣೆ ಪೂರ್ಣಗೊಳಿಸುವ ಕೊನೆಯ ಅವಕಾಶವಾಗಿ 6 ತಿಂಗಳ ಕಾಲಾವಕಾಶವನ್ನು ಸುಪ್ರೀಂ ಕೋರ್ಟ್ ಸೋಮವಾರ ನೀಡಿದೆ.

ಈ ಪ್ರಕರಣದ ವಿಚಾರಣೆಯನ್ನು ಕೊಚ್ಚಿಯ ಸ್ಥಳೀಯ ನ್ಯಾಯಾಲಯ ನಡೆಸುತ್ತಿದೆ. ಉಚ್ಚ ನ್ಯಾಯಾಲಯದಲ್ಲಿರುವ ಪ್ರಕರಣದ ವಿಚಾರಣೆ ವಿಳಂಬವಾಗುತ್ತಿರುವುದರಿಂದ ಅಲ್ಲಿನ ನ್ಯಾಯಾಧೀಶರು ಹೆಚ್ಚುವರಿ ಸಮಯಾವಕಾಶ ಕೋರಿದ್ದರು. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಕಾಲಾವಧಿ ವಿಸ್ತರಣೆಗೆ ಎರಡನೇ ಬಾರಿ ಅನುಮತಿ ನೀಡಿದೆ.

ವಿಚಾರಣೆಗೆ 6 ತಿಂಗಳ ಕಾಲಾವಕಾಶ ನೀಡಿದ ಸುಪ್ರೀಂ ಕೋರ್ಟ್ ಅರ್ಜಿದಾರ ಹಾಗೂ ಪ್ರತಿವಾದಿ ಸಹಕರಿಸುವಂತೆ ತಿಳಿಸಿದೆ. ಕೆಲಸದ ನಿಮಿತ್ತ ಕೊಚ್ಚಿಗೆ ಪ್ರಯಾಣಿಸುತ್ತಿದ್ದ ನಟಿಯೋರ್ವರನ್ನು 2017 ಫೆಬ್ರವರಿಯಲ್ಲಿ ಅಪಹರಿಸಿ, ಲೈಂಗಿಕ ದೌರ್ಜನ್ಯ ಎಸಗಲಾಗಿತ್ತು. ಈ ಪ್ರಕರಣದಲ್ಲಿ ದಿಲೀಪ್ ಅವರು 8ನೇ ಆರೋಪಿ. ಅವರನ್ನು 2017 ಜುಲೈನಲ್ಲಿ ಬಂಧಿಸಲಾಗಿತ್ತು. ಅನಂತರ ಎರಡು ತಿಂಗಳ ಬಳಿಕ ಜಾಮೀನಿನಲ್ಲಿ ಬಿಡುಗಡೆ ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News