ಪಶ್ಚಿಮಬಂಗಾಳದಲ್ಲಿ 8 ಹಂತದ ಚುನಾವಣೆ: ಚುನಾವಣಾ ಆಯೋಗದ ನಿರ್ಧಾರ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮನವಿ

Update: 2021-03-01 16:58 GMT

ಹೊಸದಿಲ್ಲಿ, ಮಾ. 1: ಪಶ್ಚಿಮಬಂಗಾಳದಲ್ಲಿ ವಿಧಾನ ಸಭೆ ಚುನಾವಣೆಯನ್ನು 8 ಹಂತದಲ್ಲಿ ನಡೆಸುವ ಚುನಾವಣಾ ಆಯೋಗದ ನಿರ್ಧಾರ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸೋಮವಾರ ಮನವಿ ಸಲ್ಲಿಸಲಾಗಿದೆ.

ಸಂವಿಧಾನದ ಕಲಂ 14 (ಸಮಾನತೆ) ಹಾಗೂ ಕಲಂ 21 (ಜೀವಿಸುವ ಹಕ್ಕು)ನ್ನು ಉಲ್ಲಂಘಿಸುವುದರಿಂದ ಪಶ್ಚಿಮಬಂಗಾಳದಲ್ಲಿ ವಿಧಾನ ಸಭೆ ಚುನಾವಣೆಯನ್ನು 8 ಹಂತಗಳಲ್ಲಿ ನಡೆಸುವುದನ್ನು ನಿಲ್ಲಿಸಲು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆ ಮನವಿ ಸಲ್ಲಿಸಿದ ನ್ಯಾಯವಾದಿ ಎಂ.ಎಲ್. ಶರ್ಮಾ ಸುಪ್ರೀಂ ಕೋರ್ಟ್ ಅನ್ನು ಕೋರಿದ್ದಾರೆ.

ಪಶ್ಚಿಮಬಂಗಾಳ, ಅಸ್ಸಾಂ, ಕೇರಳ, ತಮಿಳುನಾಡು ಹಾಗೂ ಪುದುಚೇರಿಯಲ್ಲಿ ವಿಧಾನ ಸಭೆ ಚುನಾವಣೆಯ ವೇಳಾಪಟ್ಟಿಯನ್ನು ಚುನಾವಣಾ ಆಯೋಗ ಫೆಬ್ರವರಿ 26ರಂದು ಪ್ರಕಟಿಸಿತ್ತು. ತೃಣಮೂಲ ಕಾಂಗ್ರೆಸ್ ಪಕ್ಷ ನೇತೃತ್ವದ ಆಡಳಿತ ಇರುವ ಪಶ್ಚಿಮಬಂಗಾಳದಲ್ಲಿ ಮಾರ್ಚ್ 27ರಿಂದ ಎಪ್ರಿಲ್ 29ರ ವರೆಗೆ 8 ಸುತ್ತಿನ ಚುನಾವಣೆ ನಡೆಯಲಿದೆ. ತಮಿಳುನಾಡು, ಕೇರಳ, ಹಾಗೂ ಪುದುಚೇರಿಯಲ್ಲಿ ಒಂದೇ ಹಂತದಲ್ಲಿ ಹಾಗೂ ಅಸ್ಸಾಂನಲ್ಲಿ ಮೂರು ಹಂತದಲ್ಲಿ ಎಪ್ರಿಲ್ 6ರಂದು ಚುನಾವಣೆ ನಡೆಯಲಿದೆ.

ಕೆಲವು ದಿನಗಳಲ್ಲಿ ಸುಪ್ರೀಂ ಕೋರ್ಟ್‌ನ ಮುಂದೆ ವಿಚಾರಣೆಗೆ ಬರುವ ಸಾಧ್ಯತೆ ಇರುವ ಈ ಮನವಿಯಲ್ಲಿ ಪಶ್ಚಿಮಬಂಗಾಳದಲ್ಲಿ ಚುನಾವಣಾ ಪ್ರಚಾರದ ಸಂದರ್ಭ ಧಾರ್ಮಿಕ ಘೋಷಣೆಗಳನ್ನು ಕೂಗುವವರ ವಿರುದ್ಧ ಎಫ್‌ಐಆರ್ ದಾಖಲಿಸಲು ಸಿಬಿಐಗೆ ನಿರ್ದೇಶಿಸುವಂತೆ ಕೂಡ ಕೋರಿದೆ. ‘ಜೈ ಶ್ರೀ ರಾಮ್’ ಹಾಗೂ ಇತರ ಧಾರ್ಮಿಕ ಘೋಷಣೆಗಳು ಕೋಮು ಸಾಮರಸ್ಯವನ್ನು ಕದಡುತ್ತದೆ. ಇದು ಭಾರತೀಯ ದಂಡ ಸಂಹಿತೆ ಹಾಗೂ 1651ರ ಪ್ರಜಾ ಪ್ರತಿನಿಧಿತ್ವ ಕಾಯ್ದೆ ಅಡಿ ಅಪರಾಧ ಎಂದು ಮನವಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News