ಬಿಜೆಪಿ ಕಾರ್ಯಕರ್ತನ ತಾಯಿಗೆ ಟಿಎಂಸಿಗರಿಂದ ಹಲ್ಲೆ ಪ್ರಕರಣ: ಮಗನೇ ಅಮ್ಮನಿಗೆ ಥಳಿಸುತ್ತಿದ್ದ ಎಂದ ಸಂಬಂಧಿ!

Update: 2021-03-01 17:11 GMT

ಕೋಲ್ಕತ್ತಾ: ಬಿಜೆಪಿ ಕಾರ್ಯಕರ್ತನ ತಾಯಿಗೆ ಟಿಎಂಸಿ ಬೆಂಬಲಿಗರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿರುವ ಫೋಟೊವೊಂದು ಸಾಮಾಜಿಕ ತಾಣದಾದ್ಯಂತ ವೈರಲ್‌ ಆಗಿದೆ. ಇದೀಗ ಈ ಪ್ರಕರಣಕ್ಕೆ ಹೊಸದೊಂದು ತಿರುವು ಲಭ್ಯವಾಗಿದ್ದು, ಬಿಜೆಪಿ ಕಾರ್ಯಕರ್ತನಾಗಿದ್ದ ಮಗನೇ ದಿನಂಪ್ರತೀ ತಾಯಿಗೆ ಥಳಿಸುತ್ತಿದ್ದ ಎಂದು ಆತನ ಸಂಬಂಧಿಯೋರ್ವ ಹೇಳಿಕೆ ನೀಡಿದ ಕುರಿತು indiatoday.in ವರದಿ ಮಾಡಿದೆ.

ಪಶ್ಚಿಮ ಬಂಗಾಳದ ನಾರ್ತ್‌ ೨೪ ಪರಗಣ ಜಿಲ್ಲೆಯ ನಿವಾಸಿಯಾಗಿದ್ದ ಗೋಪಾಲ್‌ ಮುಜುಮ್ದಾರ್‌ ಎಂಬಾತ, "ನನ್ನ ತಾಯಿ ಶೋವಾ ಮುಜುಮ್ದಾರ್‌ ಗೆ ಟಿಎಂಸಿ ಕಾರ್ಯಕರ್ತರು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಹಲ್ಲೆ ನಡೆಸುವಾಗ ನೀನು ಬಿಜೆಪಿಗೆ ಕೆಲಸ ಮಾಡುತ್ತಿರುವ ಕಾರಣಕ್ಕೆ ನಿಮಗಿಬ್ಬರಿಗೆ ಥಳಿಸುತ್ತೇನೆ ಎಂದು ಹೇಳಿದ್ದರು. ಮುಖವಾಡ ಧರಿಸಿದ್ದ ಕಾರಣ ಅವರ ಮುಖಗಳನ್ನು ನೋಡಲಾಗಲಿಲ್ಲ" ಎಂದು ಇಂಡಿಯಾ ಟುಡೇ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾಗಿ ವರದಿ ತಿಳಿಸಿದೆ. ಈ ಕುರಿತಾದಂತೆ ಬಿಜೆಪಿ ಕಾರ್ಯಕರ್ತರು ಸಾಮಾಜಿಕ ತಾಣದಾದ್ಯಂತ ಗುಲ್ಲೆಬ್ಬಿಸಿದ್ದರು.

ಆದರೆ, ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸದೊಂದು ತಿರುವುಂಟಾಗಿದ್ದು, ಗೋಪಾಲ್‌ ಮುಜುಮ್ದಾರ್‌ ಹೇಳಿಕೆಯನ್ನು ಅವರ ಸಂಬಂಧಿ ಅಲ್ಲಗಳೆದಿದ್ದಾರೆ. ಇದೊಂದು ಕುಟುಂಬ ವಿವಾದವಷ್ಟೇ ಎಂದು ಹೇಳಿಕೆ ನೀಡಿದ್ದಾರೆ. " ನನ್ನ ಅಜ್ಜಿ ಶೋವಾ ಮುಜುಮ್ದಾರ್‌ ಈಗಾಗಲೇ ಅನಾರೋಗ್ಯಕ್ಕೀಡಾಗಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿದೆ. ಅಜ್ಜಿ ದಿನವೂ ನಮ್ಮ ಮನೆಗೆ ಅಳುತ್ತಾ ಬಂದು ನನ್ನ ಮಗ ನನಗೆ ಥಳಿಸುತ್ತಾನೆ ಎಂದು ಆರೋಪಿಸುತ್ತಿದ್ದರು. ಫೋಟೊದಲ್ಲಿ ಅವರ ಮುಖವು ಜಜ್ಜಿದ ಸ್ವರೂಪದಲ್ಲಿದೆ. ಅದು ಈ ಪ್ರಕರಣ ನಡೆಯುವ ಮುಂಚೆಯೂ ಹಾಗೆಯೇ ಇತ್ತು. ಆತ ತಾಯಿಗೆ ತುಂಬಾ ಕಿರುಕುಳ ನೀಡುತ್ತಿದ್ದ" ಎಂದು ಶೋವಾ ರವರ ಮೊಮ್ಮಗ ಗೋಬಿಂದೋ ಮುಜುಮ್ದಾರ್‌ ಆರೋಪಿಸಿದ್ದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News