ಅಂತಿಮ ಟೆಸ್ಟ್ ಗೆ ಭಾರತ ತಂಡದ ಅಭ್ಯಾಸ ಶುರು

Update: 2021-03-01 18:29 GMT

ಅಹಮದಾಬಾದ್, ಮಾ.1: ಭಾರತದ ಕ್ರಿಕೆಟ್ ತಂಡದ ಅಗ್ರ ಸರದಿಯ ಬ್ಯಾಟ್ಸ್ ಮನ್‌ಗಳಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಅಜಿಂಕ್ಯ ರಹಾನೆ ಸೋಮವಾರ ಅಂತಿಮ ಟೆಸ್ಟ್‌ಗೆ ಅಭ್ಯಾಸ ಮುಂದುವರಿಸಿದರು.

ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಗುರುವಾರ ಇಲ್ಲಿ ಪ್ರಾರಂಭವಾಗಲಿದೆ. ನಾಯಕ ಕೊಹ್ಲಿ, ಅವರ ಉಪ ರಹಾನೆ ಮತ್ತು ಆರಂಭಿಕಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ನೆಟ್‌ನಲ್ಲಿ ಅಭ್ಯಾಸ ನಡೆಸುತ್ತಿರುವ ವೀಡಿಯೊವನ್ನು ಬಿಸಿಸಿಐ ಟ್ವಿಟರ್‌ನಲ್ಲಿ ಬಿಸಿಸಿಐ ಪೋಸ್ಟ್ ಮಾಡಿದೆ.

ಮೂವರು ಹಿರಿಯ ಆಟಗಾರರು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ವೇಗದ ಬೌಲರ್‌ಗಳು ಮತ್ತು ಸ್ಪಿನ್ನರ್‌ಗಳ ದಾಳಿಯನ್ನು ಎದುರಿಸಿದರು. ಮುಖ್ಯ ಕೋಚ್ ರವಿಶಾಸ್ತ್ರಿ ಅವರು ರೋಹಿತ್ ಮತ್ತು ಕೊಹ್ಲಿ ಅವರೊಂದಿಗೆ ಮಾತುಕತೆ ನಡೆಸಿದರು. ಮೂರನೇ ಟೆಸ್ಟ್ ನಲ್ಲಿ ಭಾರತದ ಭರ್ಜರಿ ಗೆಲುವಿನಲ್ಲಿ 11 ವಿಕೆಟ್‌ಗಳನ್ನು ಗಳಿಸಿದ ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ ವಿಶ್ವದ ಕೆಲವು ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಿಗೆ ನೆಟ್‌ನಲ್ಲಿ ಬೌಲಿಂಗ್ ನಡೆಸಿದರು. ಕೊಹ್ಲಿ ನೇತೃತ್ವದ ಭಾರತದ ತಂಡವು ಚೆನ್ನೈನಲ್ಲಿ ನಡೆದ ಮೊದಲ ಟೆಸ್ಟ್‌ನ್ನು 227 ರನ್‌ಗಳ ಅಂತರದಲ್ಲಿ ಕಳೆದುಕೊಂಡಿತು, ಆದರೆ ಎರಡನೇ ಟೆಸ್ಟ್ ನಲ್ಲಿ 317 ರನ್‌ಗಳ ಜಯ ಗಳಿಸುವ ಮೂಲಕ ಪ್ರವಾಸಿ ಇಂಗ್ಲೆಂಡ್‌ಗೆ ತಿರುಗೇಟು ನೀಡಿತ್ತು. ಹಿಂದಿನ ಪಂದ್ಯದಲ್ಲಿ ಭಾರತವು ಇಂಗ್ಲೆಂಡ್‌ನ್ನು 112 ಮತ್ತು 81 ರನ್‌ಗಳಿಗೆ ಆಲೌಟ್ ಮಾಡಿ ಎರಡೇ ದಿನಗಳಲ್ಲಿ ಮೂರನೇ ಟೆಸ್ಟ್ ಜಯಿಸಿತ್ತು.

 ಭಾರತ ತಂಡವು ರವಿವಾರ ಇಲ್ಲಿ ಪೂರ್ಣ ಪ್ರಮಾಣದ ಅಭ್ಯಾಸವನ್ನು ನಡೆಸಿತ್ತು. ಸರಣಿಯಲ್ಲಿ 2-1ರಲ್ಲಿ ಮುನ್ನಡೆ ಸಾಧಿಸಿರುವ ಭಾರತ ತಂಡದಲ್ಲಿ ಅಂತಿಮ ಟೆಸ್ಟ್‌ಗೆ ಅಗ್ರ ವೇಗಿ ಜಸ್‌ಪ್ರೀತ್ ಬುಮ್ರಾ ಇರುವುದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News