ಭಾರತದ ಪುರುಷರಿಗೆ ಜಯ, ಮಹಿಳೆಯರಿಗೆ ಸೋಲು

Update: 2021-03-02 04:55 GMT

 ಕ್ರೆಫೆಲ್ಡ್ : ಕೊರೋನ ವೈರಸ್ ಲಾಕ್‌ಡೌನ್ ನಂತರ ನಡೆದ ಯುರೋಪ್ ಟೂರ್ ಓಪನರ್‌ನಲ್ಲಿ ಭಾರತದ ಪುರುಷರ ಹಾಕಿ ತಂಡವು ಜರ್ಮನಿಯನ್ನು 6-1 ಗೋಲು ಗಳಿಂದ ಮಣಿಸಿದೆ. ಇದರೊಂದಿಗೆ ಅಂತರ್‌ರಾಷ್ಟ್ರೀಯ ಹಾಕಿಯಲ್ಲಿ ಯಶಸ್ವಿ ಶುಭಾರಂಭ ಮಾಡಿದೆ.

ವಿವೇಕ್ (27, 28 ನಿಮಿಷ), ನೀಲಕಂಠ ಶರ್ಮಾ (13ನೇ ನಿ.), ಲಲಿತ್ ಕುಮಾರ್ ಉಪಾಧ್ಯಾಯ (41ನೇ ನಿ.), ಆಕಾಶ್‌ದೀಪ್ ಸಿಂಗ್ (42 ನೇ ನಿ.) ಮತ್ತು ಹರ್ಮನ್‌ಪ್ರೀತ್ ಸಿಂಗ್ (47 ನೇ ನಿ.) ಭಾರತದ ಪರ ಗೋಲು ಗಳಿಸಿದವರು.

   ಭಾರತದ ಆಟಗಾರರು ಆರಂಭದಿಂದಲೂ ಆಕ್ರಮಣಕಾರಿ ಪ್ರದರ್ಶನ ನೀಡಿದರು. ಜರ್ಮನ್ ತಂಡಕ್ಕೆ ಒತ್ತಡ ಹೇರಿದರು. ಸ್ಟ್ರೈಕಿಂಗ್ ವಲಯದಲ್ಲಿ ಸಂಭಾವ್ಯ ಅವಕಾಶಗಳನ್ನು ಸೃಷ್ಟಿಸಿದ ನಂತರ, ಭಾರತವು ಮೊದಲ ಕ್ವಾರ್ಟರ್‌ನ 13ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶ ಗಳಿಸಿತು. ಮಿಡ್‌ಫೀಲ್ಡರ್ ನೀಲಕಂಠ ಈ ಅವಕಾಶದಲ್ಲಿ ಗೋಲು ಜಮೆ ಮಾಡಿದರು. ಮುಂದಿನ ನಿಮಿಷದಲ್ಲಿ ಫಾರ್ವರ್ಡ್ ಸ್ಟೇಬ್ ಜರ್ಮನಿ ಪರ ಗೋಲು ಬಾರಿಸಿ 1-1 ಸಮಬಲ ಸಾಧಿಸಿದರು.

 ಎರಡನೇ ಕ್ವಾರ್ಟರ್‌ನಲ್ಲಿ ಆತಿಥೇಯರು ಭಾರತದ ಮೇಲೆ ಆರಂಭದಲ್ಲೇ ಒತ್ತಡ ಹೇರಿದರು. ಮಿಡ್‌ಫೀಲ್ಡರ್ ವಿವೇಕ್ 27 ಮತ್ತು 28 ನೇ ನಿಮಿಷಗಳಲ್ಲಿ ಎರಡು ಬ್ಯಾಕ್-ಟು-ಬ್ಯಾಕ್ ಗೋಲು ಗಳಿಸಿದರು.

   ಮೂರನೇ ಕ್ವಾರ್ಟರ್‌ನಲ್ಲಿ, ಆತಿಥೇಯರು ಆರು ಪೆನಾಲ್ಟಿ ಕಾರ್ನರ್ ಅವಕಾಶವನ್ನು ಪಡೆದರು. ಗೋಲು ಗಳಿಸಲು ಜರ್ಮನಿ ತಂಡ ಪ್ರಯತ್ನ ನಡೆಸಿದರೂ ಭಾರತದ ನಾಯಕ ಪಿ.ಆರ್.ಶ್ರೀಜೇಶ್ ಗೋಲು ನಿರಾಕರಿಸಿದರು.

  ಭಾರತದ ಫಾರ್ವರ್ಡ್‌ಗಳಾದ ಲಲಿತ್, ಆಕಾಶ್‌ದೀಪ್ ಕ್ರಮವಾಗಿ 41 ಮತ್ತು 42ನೇ ನಿಮಿಷದಲ್ಲಿ ಗೋಲುಗಳನ್ನು ಗಳಿಸಿದರು. 47ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಮತ್ತೊಂದು ಅದ್ಭುತ ಅವಕಾಶ ಬಂದಿತು, ಮತ್ತು ಹರ್ಮನ್‌ಪ್ರೀತ್ ಗೋಲು ಜಮೆ ಮಾಡಿ ಭಾರತದ ಮುನ್ನಡೆಯನ್ನು ವಿಸ್ತರಿಸಿದರು. ಭಾರತ ಉತ್ತಮ ಪ್ರದರ್ಶನದೊಂದಿಗೆ 6-1 ಅಂತರದ ಗೆಲುವನ್ನು ದೃಡಪಡಿಸಿತು.

ಒಂದು ದಿನದ ವಿರಾಮದ ನಂತರ, ಭಾರತ ಮತ್ತೆ ಮಾರ್ಚ್ 2 ರಂದು ಜರ್ಮನಿಯನ್ನು ಎದುರಿಸಲಿದೆ.

ಎರಡನೇ ಪಂದ್ಯ ದಲ್ಲೂ ಮಹಿಳಾ ತಂಡಕ್ಕೆ ಸೋಲು

ಭಾರತದ ಮಹಿಳಾ ಹಾಕಿ ತಂಡವು ಡಸೆಲ್ಡಾರ್ಫ್‌ನಲ್ಲಿ ತನ್ನ ಎರಡನೇ ಪಂದ್ಯದಲ್ಲಿ ಜರ್ಮನಿಯ ವಿರುದ್ಧ 0-1 ಗೋಲುಗಳಿಂದ ಸೋಲನುಭವಿಸಿತು, ಆರಂಭಿಕ ಪಂದ್ಯದಲ್ಲಿ 0-5 ಅಂತರದಿಂದ ಸೋಲನುಭವಿಸಿದ್ದರಿಂದ ಹೆಚ್ಚು ಸುಧಾರಿತ ಪ್ರದರ್ಶನವನ್ನು ನೀಡಿತು.

  ಮಿಡ್‌ಫೀಲ್ಡರ್ ಅಮೆಲಿ ವೋರ್ಟ್ಮನ್ (24 ನೇ ನಿಮಿಷ) ಜರ್ಮನಿಯ ಪರ ಏಕೈಕ ಗೋಲು ಗಳಿಸಿದರು.ಇದರೊಂದಿಗೆ ಜರ್ಮನಿ 4 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News