ಐಪಿಎಲ್ ನಲ್ಲಿ ಹಣಕ್ಕೆ ಒತ್ತು, ಕ್ರಿಕೆಟಿಗೆ ಮಹತ್ವವಿಲ್ಲ: ಡೇಲ್ ಸ್ಟೇಯ್ನ್

Update: 2021-03-02 15:49 GMT

ಹೊಸದಿಲ್ಲಿ: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನಲ್ಲಿ ಆಟಗಾರರನ್ನು ಖರೀದಿಸುವ ಮೊತ್ತಕ್ಕೆ ಕೆಲವೊಮ್ಮೆ ಒತ್ತು ನೀಡಬಹುದು. ಇದರ ಪರಿಣಾಮವಾಗಿ ಕ್ರಿಕೆಟ್ ಮಹತ್ವ ಕಳೆದುಕೊಳ್ಳುತ್ತದೆ ಎಂದು ದಕ್ಷಿಣ ಆಫ್ರಿಕದ ವೇಗದ ಬೌಲರ್ ಡೇಲ್ ಸ್ಟೇಯ್ನ್ ಹೇಳಿದ್ದಾರೆ.

ಅತ್ಯಂತ ಯಶಸ್ವಿ ದೇಶೀಯ ಟಿ-20 ಲೀಗ್ ಐಪಿಎಲ್ ಗೆ ಹೋಲಿಸಿದರೆ ಇತರ ಲೀಗ್ ಗಳು ನನಗೆ ಆಟಗಾರನಾಗಿ ಹೆಚ್ಚು ಲಾಭದಾಯಕವಾಗಿತ್ತು ಎಂದು ಸ್ಟೇಯ್ನ್ ಸುಳಿವು ನೀಡಿದರು.

ಸ್ಟೇಯ್ನ್ ಪ್ರಸ್ತುತ ಪಾಕಿಸ್ತಾನ ಸೂಪರ್ ಲೀಗ್ ನಲ್ಲಿ ಕ್ವೆಟ್ಟಾ ಗ್ಲಾಡಿಯೇಟರ್ಸ್ ಪರ ಆಡುತ್ತಿದ್ದಾರೆ.

“ನಾನು ಸ್ವಲ್ಪ ಸಮಯವನ್ನು ಬಯಸುವೆ. ಐಪಿಎಲ್ ಹೊರತುಪಡಿಸಿ ಇತರ ಲೀಗ್ ಗಳಲ್ಲಿ ಆಡುವುದು ಆಟಗಾರನಾಗಿ ಸ್ವಲ್ಪ ಹೆಚ್ಚು ಲಾಭದಾಯಕ ಎಂದು ನಾನು ಕಂಡುಕೊಂಡಿದ್ದೇನೆ. ನೀವು ಐಪಿಎಲ್ ಗೆ ಹೋದಾಗ ಅಂತಹ ದೊಡ್ಡ ತಂಡಗಳು ಹಾಗೂ ಹಲವು ದೊಡ್ಡ ಹೆಸರುಗಳಿರುತ್ತವೆ. ಬಹುಶಃ ಆಟಗಾರರು ಗಳಿಸುವ ಹಣದತ್ತ ಹೆಚ್ಚು ಒತ್ತು ನೀಡಲಾಗುತ್ತದೆ. ಎಲ್ಲವೂ ಹಾಗೆಯೇ ಇರುತ್ತದೆ. ಕೆಲವೊಮ್ಮೆ ಎಲ್ಲೋ ಒಂದು ಕಡೆ ಕ್ರಿಕೆಟ್ ಮರೆತುಹೋಗುತ್ತದೆ ಎಂದು ‘ಕ್ರಿಕೆಟ್ ಪಾಕಿಸ್ತಾನ’ಕ್ಕೆ ಸ್ಟೇಯ್ನ್ ತಿಳಿಸಿದರು.

ಸ್ಟೇಯ್ನ್ ಈ ವರ್ಷದ ಐಪಿಎಲ್ ನಲ್ಲಿ ಆಡುವುದಿಲ್ಲ ಎಂದು ಕಳೆದ ವರ್ಷ ಹೇಳಿದ್ದರು. ಹೀಗಾಗಿ ವಿರಾಟ್ ಕೊಹ್ಲಿ ನೇತೃತ್ವದ ಆರ್ ಸಿಬಿ ಸ್ಟೇಯ್ನ್ ರನ್ನು ತಂಡದಿಂದ ಬಿಡುಗಡೆ ಮಾಡಿತ್ತು.

ಸ್ಟೇಯ್ನ್ 2020ರಲ್ಲಿ ಆರ್ ಸಿಬಿ ಪರ 3 ಪಂದ್ಯಗಳನ್ನು ಆಡಿದ್ದರು. ಕೇವಲ 1 ವಿಕೆಟ್ ಪಡೆದಿದ್ದರು.

2019ರ ಆಗಸ್ಟ್ ನಲ್ಲಿ ಕ್ರಿಕೆಟ್ ನಿಂದ ನಿವೃತ್ತಿಯಾಗಿದ್ದ ಸ್ಟೇಯ್ನ್ ದಕ್ಷಿಣ ಆಫ್ರಿಕಾದ ಪರವಾಗಿ ಟೆಸ್ಟ್ ಕ್ರಿಕೆಟ್ ನಲ್ಲಿ ಗರಿಷ್ಠ ವಿಕೆಟ್ ಪಡೆದ ಸಾಧನೆ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News