ಸಾಗರಮಾಲಾ ಯೋಜನೆಯಡಿ 2035ರ ವೇಳೆಗೆ ಬಂದರುಗಳಲ್ಲಿ 6 ಲ.ಕೋ.ರೂ.ಹೂಡಿಕೆ:ಪ್ರಧಾನಿ

Update: 2021-03-02 17:08 GMT

ಹೊಸದಿಲ್ಲಿ,ಮಾ.3: ಸಾಗರಮಾಲಾ ಯೋಜನೆಯಡಿ ಭಾರತವು 2035ರ ವೇಳೆಗೆ ಬಂದರುಗಳಲ್ಲಿ 82 ಶತಕೋಟಿ ಡಾ.(6 ಲ.ಕೋ.ರೂ.)ಗಳ ಹೂಡಿಕೆಯನ್ನು ಮಾಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಹೇಳಿದರು. ಸಾಗರ ಶೃಂಗಸಭೆ 2021ನ್ನು ಉದ್ದೇಶಿಸಿ ಮಾತನಾಡಿದ ಅವರು,ಬಂದರುಗಳ ಅಭಿವೃದ್ಧಿಗಾಗಿ ಸಾಗರಮಾಲಾ ಯೋಜನೆಯನ್ನು ಸರಕಾರವು 2016ರಲ್ಲಿ ಪ್ರಕಟಿಸಿತ್ತು. ಈ ಕಾರ್ಯಕ್ರಮದಡಿ 2015-2035ರ ಅವಧಿಯಲ್ಲಿ ಆರು ಲ.ಕೋ.ರೂ.ಗಳ ವೆಚ್ಚದಲ್ಲಿ 574 ಯೋಜನೆಗಳನ್ನು ಅನುಷ್ಠಾನಕ್ಕಾಗಿ ಗುರುತಿಸಲಾಗಿದೆ ಎಂದರು.

ಹಾಲಿ ಮೂಲಸೌಕರ್ಯಗಳನ್ನು ಮೇಲ್ದರ್ಜೆಗೇರಿಸಲು ಮತ್ತು ಮುಂದಿನ ಪೀಳಿಗೆಯ ಮೂಲಸೌಕರ್ಯಗಳನ್ನು ಸೃಷ್ಟಿಸಲು ತನ್ನ ಸರಕಾರವು ಆದ್ಯತೆ ನೀಡಿದೆ ಎಂದ ಅವರು,ಸರಕಾರದ ಗುರಿಯ ಫಲಿತಾಂಶಗಳು ಗೋಚರವಾಗುತ್ತಿವೆ ಎಂದು ಬೆಟ್ಟು ಮಾಡಿದರು.

‘2014ರಲ್ಲಿ ಸುಮಾರು ವಾರ್ಷಿಕ 870 ಮಿಲಿಯನ್ ಟನ್‌ಗಳಿದ್ದ ಪ್ರಮುಖ ಬಂದರುಗಳ ಸಾಮರ್ಥ್ಯವನ್ನು ಈಗ ವಾರ್ಷಿಕ ಸುಮಾರು 1,550 ಟನ್‌ಗಳಿಗೆ ಹೆಚ್ಚಿಸಲಾಗಿದೆ. ಉತ್ಪಾದಕತೆಯಲ್ಲಿನ ಈ ಏರಿಕೆಯು ನಮ್ಮ ಬಂದರುಗಳಿಗೆ ನೆರವಾಗುವುದು ಮಾತ್ರವಲ್ಲ,ನಮ್ಮ ಉತ್ಪನ್ನಗಳನ್ನು ಹೆಚ್ಚು ಸ್ಪರ್ಧಾತ್ಮಕವನ್ನಾಗಿಸುವ ಮೂಲಕ ಒಟ್ಟಾರೆ ಆರ್ಥಿಕತೆಯನ್ನೂ ಹೆಚ್ಚಿಸುತ್ತದೆ ’ಎಂದರು.

‘ಮೂಲಸೌಕರ್ಯವನ್ನು ಮೇಲ್ದರ್ಜೆಗೇರಿಸುವ ಜೊತೆಗೆ ಸಂಪರ್ಕ ವ್ಯವಸ್ಥೆಯನ್ನು ಹೆಚ್ಚಿಸಲೂ ಸರಕಾರವು ಶ್ರಮಿಸುತ್ತಿದೆ. ನಾವು ನಮ್ಮ ಬಂದರುಗಳನ್ನು ಕರಾವಳಿ ಆರ್ಥಿಕ ವಲಯಗಳು,ಬಂದರು ಆಧಾರಿತ ಸ್ಮಾರ್ಟ್ ಸಿಟಿಗಳು ಮತ್ತು ಕೈಗಾರಿಕಾ ಪ್ರದೇಶಗಳೊಂದಿಗೆ ಸಂಯೋಜಿಸುತ್ತಿದ್ದೇವೆ. ಇದು ಬಂದರುಗಳ ಸಮೀಪ ಕೈಗಾರಿಕಾ ಹೂಡಿಕೆಗಳನ್ನು ಬೆಂಬಲಿಸಲಿದೆ ಮತ್ತು ಜಾಗತಿಕ ತಯಾರಿಕೆ ಚಟುವಟಿಕೆಗಳನ್ನು ಉತ್ತೇಜಿಸಲಿದೆ ’ಎಂದು ಮೋದಿ ನುಡಿದರು.

ಮಹಾರಾಷ್ಟ್ರದ ವಾಧ್ವಾನ್,ಒಡಿಶಾದ ಪಾರಾದೀಪ್ ಮತ್ತು ಗುಜರಾತಿನ ದೀನದಯಾಳ್‌ನಲ್ಲಿ ಬೃಹತ್ ಬಂದರುಗಳನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ. ಸರಕಾರವು 2030ರ ವೇಳೆಗೆ 23 ಜಲಮಾರ್ಗಗಳ ಕಾರ್ಯಾಚರಣೆಯ ಗುರಿಯನ್ನು ಹೊಂದಿದೆ ಎಂದ ಅವರು,ಮೂಲಸೌಕರ್ಯ ಹೆಚ್ಚಳ,ನೌಕಾಮಾರ್ಗ ಅಭಿವೃದ್ಧಿ,ಮಾರ್ಗದರ್ಶನ ನೆರವುಗಳು ಮತ್ತು ನದಿಗಳ ಮಾಹಿತಿ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ಇದನ್ನು ಸಾಧಿಸಲಾಗುವುದು. ಪರಿಣಾಮಕಾರಿ ಪ್ರಾದೇಶಿಕ ವ್ಯಾಪಾರ ಮತ್ತು ಸಹಕಾರಗಳನ್ನು ಹೆಚ್ಚಿಸಲು ಬಾಂಗ್ಲಾದೇಶ,ನೇಪಾಳ,ಭೂತಾನ ಮತ್ತು ಮ್ಯಾನ್ಮಾರ್‌ನೊಂದಿಗೆ ಪ್ರಾದೇಶಿಕ ಸಂಪರ್ಕಕ್ಕಾಗಿ ಪೂರ್ವ ಜಲಮಾರ್ಗ ಸಂಪರ್ಕ ಜಾಲವನ್ನು ಬಲಪಡಿಸಲಾಗುವುದು ಎಂದರು.

ಭಾರತದಲ್ಲಿ 189 ದೀಪಸ್ತಂಭಗಳಿದ್ದು,ಇವುಗಳ ಪೈಕಿ 78 ದೀಪಸ್ತಂಭಗಳ ಸಮೀಪದ ಜಮೀನಿನಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿಗೊಳಿಸಲು ಸರಕಾರವು ಯೋಜಿಸುತ್ತದೆ. ಕೊಚ್ಚಿ,ಮುಂಬೈ,ಗುಜರಾತ ಮತ್ತು ಗೋವಾಗಳಂತಹ ಪ್ರಮುಖ ರಾಜ್ಯಗಳು ಮತ್ತು ನಗರಗಳಲ್ಲಿ ನಗರ ಜಲ ಸಾರಿಗೆ ವ್ಯವಸ್ಥೆಯನ್ನು ಆರಂಭಿಸಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಮೋದಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News