‘ಟೂಲ್ ಕಿಟ್’ ಪ್ರಕರಣ: ನಿಕಿತಾ ಜೇಕಬ್ ನಿರೀಕ್ಷಣಾ ಜಾಮೀನು ಅರ್ಜಿ

Update: 2021-03-02 17:09 GMT

ಹೊಸದಿಲ್ಲಿ, ಮಾ. 3: ರೈತರ ಪ್ರತಿಭಟನೆಗೆ ಸಂಬಂಧಿಸಿ ಸಾಮಾಜಿಕ ಮಾಧ್ಯಮದಲ್ಲಿ ‘ಟೂಲ್ ಕಿಟ್’ ಹಂಚಿಕೊಂಡ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಸಾಮಾಜಿಕ ಹೋರಾಟಗಾರ್ತಿ ನಿಕಿತಾ ಜೇಕಬ್ ಸಲ್ಲಿಸಿದ ಅರ್ಜಿಗೆ ಪ್ರತಿಕ್ರಿಯೆ ನೀಡಲು ದಿಲ್ಲಿ ನ್ಯಾಯಾಲಯ ಮಂಗಳವಾರ ದಿಲ್ಲಿ ಪೊಲೀಸರಿಗೆ ಒಂದು ವಾರ ಕಾಲಾವಕಾಶ ನೀಡಿದೆ.

ನಿಕಿತಾ ಜೇಕಬ್ ಅವರ ಅರ್ಜಿಯ ಕುರಿತು ವಿವರವಾದ ಪ್ರತಿಕ್ರಿಯೆ ದಾಖಲಿಸಲು ಪೊಲೀಸರಿಗೆ ಇನ್ನಷ್ಟು ಕಾಲಾವಕಾಶದ ಅಗತ್ಯ ಇದೆ ಎಂದು ಸರಕಾರಿ ವಕೀಲರು ಪ್ರತಿಪಾದಿಸಿದ ಬಳಿಕ ಹೆಚ್ಚುವರಿ ಸೆಷನ್ಸ್ ನ್ಯಾಯಮೂರ್ತಿ ಧರ್ಮೇಂದರ್ ರಾಣಾ ಮಾರ್ಚ್ 9ರ ವರೆಗೆ ಕಾಲಾವಕಾಶ ನೀಡಿದ್ದಾರೆ. ಇನ್ನೋರ್ವ ಸಹ ಆರೋಪಿ ಶಂತನು ಮುಲುಕ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯದ ಮಾರ್ಚ್ 9ರಂದು ವಿಚಾರಣೆ ನಡೆಸಲಿದೆ.

ಇದೇ ದಿನ ನಿಕಿತಾ ಜೇಕಬ್ ಅವರು ವಾದ ಮಂಡಿಸಬಹುದು ಎಂದು ನ್ಯಾಯಾಲಯ ಹೇಳಿತು. ವೀಡಿಯೊ ಕಾನ್ಫರೆನ್ಸ್ ಮೂಲಕ ನಡೆದ ಸಂಕ್ಷಿಪ್ತ ವಿಚಾರಣೆ ಸಂದರ್ಭ ನಿಕಿತಾ ಜೇಕಬ್ ಪರವಾಗಿ ಹಾಜರಾಗಿದ್ದ ಹಿರಿಯ ನ್ಯಾಯಾವಾದಿ ರೆಬೆಕ್ಕಾ ಜಾನ್, ನಿಕಿತಾ ಜೇಕಬ್ ಅವರು ತಮ್ಮ ಮನವಿಯ ಕುರಿತು ಶಂತನು ಮುಲಕ್ ಅವರೊಂದಿಗೆ ವಾದಿಸಲು ಬಯಸುವುದಿಲ್ಲ. ಬದಲಾಗಿ ಏಕಾಂಗಿಯಾಗಿ ವಾದಿಸಲು ಬಯಸುತ್ತಿದ್ದಾರೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News