ಹಳೆ ಸ್ನೇಹಿತನ ವಿವಾಹವಾದ ಆ್ಯಸಿಡ್ ದಾಳಿ ಸಂತ್ರಸ್ತೆ ಪ್ರಮೋದಿನಿ

Update: 2021-03-03 12:53 GMT
photo: facebook

ಭುವನೇಶ್ವರ: ಒಡಿಶಾದ “ಚಪಾಕ್’ಹುಡುಗಿ ಎಂದೇ ಗುರುತಿಸಲ್ಪಟ್ಟಿರುವ ಪ್ರಮೋದಿನಿ ತನ್ನ ಮುಖದ ಮೇಲೆ ಆಗಿದ್ದ ಆ್ಯಸಿಡ್ ದಾಳಿಯಿಂದ ಎರಡೂ ಕಣ್ಣುಗಳನ್ನು ಕಳೆದುಕೊಂಡಿದ್ದರು. ಆದರೆ ಈ ಘಟನೆಯು 29ರ ಹರೆಯದ ಪ್ರಮೋದಿನಿ ಜೀವನದ ಮೇಲಿನ ವಿಶ್ವಾಸವನ್ನು ಕಡಿಮೆ ಮಾಡಲಿಲ್ಲ. ಫಿನಿಕ್ಸ್ ಹಕ್ಕಿಯಂತೆ ಮೇಲೆದ್ದು ಬಂದ ಈಕೆ ತನ್ನ ಹಳೆಯ ಸ್ನೇಹಿತ ಸರೋಜ್ ಸಾಹೂ ಅವರನ್ನು ವಿವಾಹವಾಗಿ ಹೊಸ ಜೀವನ ಆರಂಭಿಸಿದ್ದಾರೆ.

ಕುಟುಂಬ ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಜಗತ್ ಸಿಂಗ್ ಪುರ ಜಿಲ್ಲೆಯಲ್ಲಿ ಪ್ರಮೋದಿನಿ ನಿವಾಸದಲ್ಲಿ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ನವ ಜೋಡಿಗೆ ಒಡಿಶಾದ ರಾಜ್ಯಪಾಲ ಗನೇಶಿ ಲಾಲ್ ಹಾಗೂ ರಾಜ್ಯ ಶಿಕ್ಷಣ ಸಚಿವ ಸಮೀರ್ ದಾಶ್ ಅವರು ಆಶೀರ್ವದಿಸಿದರು.

2009ರಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸಂತೋಷ್ ಎಂಬಾತ ಪ್ರಮೋದಿನಿ ಮದುವೆ ಮಾಡಿಕೊಳ್ಳಲು ನಿರಾಕರಿಸಿದಳು ಎಂಬ ಕಾರಣಕ್ಕೆ ಮುಖಕ್ಕೆ ಆ್ಯಸಿಡ್ ಚೆಲ್ಲಿದ್ದ. ಈ ದುರಂತ ಘಟನೆಯಿಂದ ಪ್ರಮೋದಿನಿ ಶೇ.80ರಷ್ಟು ಸುಟ್ಟು ಗಾಯಕ್ಕೀಡಾಗಿದ್ದು, ಎರಡೂ ಕಣ್ಣುಗಳನ್ನು ಕಳೆದುಕೊಂಡಿದ್ದರು. ಆ ಸಮಯದಲ್ಲಿ ಹದಿ ಹರೆಯದವರಾಗಿದ್ದ ಪ್ರಮೋದಿನಿ ತನ್ನ ಹಳ್ಳಿಯ ಸಮೀಪದ ಅಂತರ್-ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದಳು.

ಸಂತೋಷ್, ಪ್ರಮೋದಿನಿಯನ್ನು ಏಕಪಕ್ಷೀಯವಾಗಿ ಇಷ್ಟಪಡುತ್ತಿದ್ದ. ಆತ ಆಕೆಯನ್ನು ಸಂಪರ್ಕಿಸಿ ಪ್ರೇಮನಿವೇದನ ಮಾಡಿದ್ದಾಗ ಆಕೆ ಅದನ್ನು ನಿರಾಕರಿಸಿದ್ದಳು. ಇದರಿಂದ ಕೋಪಗೊಂಡಿದ್ದ ಸಂತೋಷ್, ಪ್ರಮೋದಿನಿ ಮುಖಕ್ಕೆ ಆ್ಯಸಿಡ್ ಎರಚಿ ಜೀವನವನ್ನು ಶಾಶ್ವತವಾಗಿ ಬದಲಾಯಿಸಿದ್ದ.

2009ರ ಎಪ್ರಿಲ್ 18ರಂದು ಆ್ಯಸಿಡ್ ದಾಳಿಗೊಳಗಾಗಿದ್ದ ಪ್ರಮೋದಿನಿ ಐದು ವರ್ಷಗಳ ಕಾಲ ಕಟಕ್ ನ ಎಸ್ ಸಿಬಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.  ಗಂಭೀರ ಗಾಯ ಹಾಗೂ ಸುದೀರ್ಘ ಚಿಕಿತ್ಸೆಯಿಂದಾಗಿ ಪ್ರಮೋದಿನಿ ಕಂಗಾಲಾಗಿದ್ದರು. 2016ರಲ್ಲಿ ತನ್ನ ಆತ್ಮೀಯ ಸ್ನೇಹಿತ ಸರೋಜ್ ನನ್ನು ಭೇಟಿಯಾದ ಬಳಿಕ ಜೀವನದ ಮೇಲೆ ವಿಶ್ವಾಸ ಮೂಡಿತು. ಸರೋಜ್ ಅವರು ಪ್ರಮೋದಿನಿ ಅವರಿಗೆ ಸ್ನೇಹಿತ, ಮಾರ್ಗದರ್ಶಕ ಹಾಗೂ ಶಕ್ತಿಯ ಆಧಾರಸ್ತಂಭವಾಗಿದ್ದರು.

ಪ್ರಮೋದಿನಿ ಹಾಗೂ ಸರೋಜ್ 2018ರಲ್ಲಿ ಲಕ್ನೋದಲ್ಲಿ ಪ್ರೇಮಿಗಳ ದಿನದಂದು ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News