ಮ್ಯಾನ್ಮಾರ್: ಪ್ರತಿಭಟನಕಾರರ ಮೇಲೆ ಗುಂಡು; 9 ಸಾವು

Update: 2021-03-03 15:18 GMT

ಯಾಂಗನ್ (ಮ್ಯಾನ್ಮಾರ್), ಮಾ. 3: ಮ್ಯಾನ್ಮಾರ್‌ನ ಸೇನಾ ಸರಕಾರದ ವಿರುದ್ಧ ಬುಧವಾರ ನಡೆದ ಪ್ರತಿಭಟನೆಗಳ ವೇಳೆ ಭದ್ರತಾ ಪಡೆಗಳು ಹಾರಿಸಿದ ಗುಂಡಿಗೆ ಒಂಬತ್ತು ಮಂದಿ ಬಲಿಯಾಗಿದ್ದಾರೆ.

ದೇಶದ ಎರಡನೇ ಅತಿ ದೊಡ್ಡ ನಗರ ಮಾಂಡಲೇ ನಗರದಲ್ಲಿ ನಡೆದ ಪ್ರತಿಭಟನೆಗಳ ವೇಳೆ ಪೊಲೀಸರು ಹಾರಿಸಿದ ಗುಂಡಿಗೆ ಇಬ್ಬರು ಬಲಿಯಾಗಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಯಾಂಗನ್‌ನಲ್ಲಿ ಪ್ರತಿಭಟನಕಾರರ ಮೇಲೆ ಪೊಲೀಸರು ಗುಂಡು ಹಾರಿಸಿದಾಗ ಓರ್ವ ವ್ಯಕ್ತಿ ಪ್ರಾಣ ಕಳೆದುಕೊಂಡಿದ್ದಾರೆ.

ಮೋನಿವ ನಗರದಲ್ಲಿ ಪ್ರತಿಭಟನಕಾರರ ಮೇಲೆ ಭದ್ರತಾ ಪಡೆಗಳು ಗುಂಡು ಹಾರಿಸಿದಾಗ ಐವರು ಮೃತಪಟ್ಟಿದ್ದಾರೆ ಎಂದು ‘ಮೋನಿವ ಗಝೆಟ್’ ಪತ್ರಿಕೆ ವರದಿ ಮಾಡಿದೆ.

ಮಿಂಗ್ಯನ್ ಪಟ್ಟಣದಲ್ಲಿ ಒರ್ವ ಪ್ರತಿಭಟನಕಾರ ಪೊಲೀಸ್ ಗೋಲಿಬಾರಿನಲ್ಲಿ ಸಾವಿಗೀಡಾಗಿದ್ದಾರೆ.

 ‘‘ಅವರು ನಮ್ಮ ಮೇಲೆ ನಿಜವಾದ ಗುಂಡುಗಳನ್ನು ಹಾರಿಸಿದರು. ಅವರ ಗುಂಡಿಗೆ ಓರ್ವ ಹದಿಹರೆಯದ ಬಾಲಕ ಮೃತಪಟ್ಟಿದ್ದಾರೆ. ಅವರ ತಲೆಗೆ ಗುಂಡು ಹಾರಿಸಲಾಗಿತ್ತು’’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದರು. ಅವರ ಕಾಲಿಗೆ ಗುಂಡು ತಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ಕೋರಿ ‘ರಾಯ್ಟರ್ಸ್’ ಮಾಡಿದ ಟೆಲಿಫೋನ್ ಕರೆಗಳನ್ನು ಆಡಳಿತಾರೂಢ ಸೇನಾ ಮಂಡಳಿಯ ವಕ್ತಾರರು ಸ್ವೀಕರಿಸಲಿಲ್ಲ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News