ನಾಲ್ಕನೇ ಟೆಸ್ಟ್:ಇಂಗ್ಲೆಂಡ್ 205 ರನ್ ಗೆ ಆಲೌಟ್

Update: 2021-03-04 11:40 GMT

ಅಹಮದಾಬಾದ್: ಭಾರತ ವಿರುದ್ಧ ಗುರುವಾರ ಇಲ್ಲಿ ಆರಂಭವಾಗಿರುವ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯಕ್ಕೆ ಒಳಗಾಗಿ 205 ರನ್ ಗಳಿಸಿ ಆಲೌಟಾಗಿದೆ.

ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ ನಿರೀಕ್ಷಿತ ಆರಂಭ ಪಡೆಯಲಿಲ್ಲ. 10 ರನ್ ಗಳಿಸುವಷ್ಟರಲ್ಲಿ ಡಾಮ್ ಸಿಬ್ಲಿ ವಿಕೆಟನ್ನು ಕಳೆದುಕೊಂಡಿತು. 78 ರನ್ ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಇಂಗ್ಲೆಂಡ್ ಗೆ ಬೆನ್ ಸ್ಟೋಕ್ಸ್ (55 ರನ್, 121ಎಸೆತ, 6 ಬೌಂಡರಿ, 2 ಸಿಕ್ಸರ್)ಆಸರೆಯಾದರು. ಸ್ಟೋಕ್ಸ್ ಅವರು ಬೈರ್ ಸ್ಟೋವ್(28 ರನ್) ಜೊತೆಗೂಡಿ 4ನೇ ವಿಕೆಟ್ ಜೊತೆಯಾಟದಲ್ಲಿ 48 ರನ್ ಸೇರಿಸಿ ಇನಿಂಗ್ಸ್ ರಿಪೇರಿಗೆ ಮುಂದಾದರು. ಬೈರ್ ಸ್ಟೋವ್ ಔಟಾದ ಬಳಿಕ ಒಲ್ಲಿ ಪೋಪ್(29 ರನ್) ಜೊತೆಗೂಡಿ ಸ್ಟೋಕ್ಸ್ 5ನೇ ವಿಕೆಟ್ ಗೆ 43 ರನ್ ಸೇರಿಸಿದರು.

ತಂಡದ ಪರ ಸರ್ವಾಧಿಕ ಸ್ಕೋರ್(55) ಗಳಿಸಿದ ಸ್ಟೋಕ್ಸ್ ಆಲ್ ರೌಂಡರ್ ಸುಂದರ್ ಬೀಸಿದ ಎಲ್ಬಿಡಬ್ಲು ಬಲೆಗೆ ಬಿದ್ದರು.

ಇನಿಂಗ್ಸ್ ಅಂತ್ಯದಲ್ಲಿ ಡಾನ್ ಲಾರೆನ್ಸ್(46, 74 ಎಸೆತ)ಒಂದಷ್ಟು ಹೋರಾಟ ನೀಡಿ ತಂಡದ ಸ್ಕೋರನ್ನು 200ರ ಗಡಿ ದಾಟಿಸಿದರು.

ಭಾರತದ ಬೌಲಿಂಗ್ ವಿಭಾಗದಲ್ಲಿ ಸ್ಪಿನ್ನರ್ ಗಳಾದ ಅಕ್ಷರ್ ಪಟೇಲ್(4-68) ಹಾಗೂ ಆರ್.ಅಶ್ವಿನ್(3-47)ಮತ್ತೊಮ್ಮೆ ಮಿಂಚಿದರು. ವೇಗದ ಬೌಲರ್ ಮುಹಮ್ಮದ್ ಸಿರಾಜ್(2-45) ಬೈರ್ ಸ್ಟೋವ್ ಹಾಗೂ ನಾಯಕ ಜೋ ರೂಟ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

ಮೊದಲ ಇನಿಂಗ್ಸ್ ಆರಂಭಿಸಿರುವ ಭಾರತವು ಮೊದಲ ದಿನದಾಟದಂತ್ಯಕ್ಕೆ 12 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 24 ರನ್ ಗಳಿಸಿದೆ.

ಶುಭಮನ್ ಗಿಲ್ ಖಾತೆ ತೆರೆಯುವ ಮೊದಲೇ ವಿಕೆಟ್ ಒಪ್ಪಿಸಿದರು. ರೋಹಿತ್ ಶರ್ಮಾ ಔಟಾಗದೆ 8 ಹಾಗೂ ಚೇತೇಶ್ವರ ಪೂಜಾರ ಔಟಾಗದೆ 15 ರನ್ ಗಳಿಸಿದರು. ಆ್ಯಂಡರ್ಸನ್ 5 ಓವರ್ ಬೌಲಿಂಗ್ ನಲ್ಲಿ ಒಂದೂ ರನ್ ನೀಡದೇ ಒಂದು ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News