"ಸರಕಾರ ಭೀತಿ ಸೃಷ್ಟಿಸಲು ದೇಶದ್ರೋಹ ಕಾನೂನು ಬಳಸುತ್ತಿದೆ, ಅದನ್ನು ತಕ್ಷಣ ರದ್ದುಗೊಳಿಸಬೇಕು"

Update: 2021-03-04 14:02 GMT
photo: thewire

ಹೊಸದಿಲ್ಲಿ,ಮಾ.4: ದೇಶದ್ರೋಹ ಕಾನೂನಾಗಿರುವ ಐಪಿಸಿಯ ಕಲಂ 124ಎ ಅನ್ನು ತಕ್ಷಣ ರದ್ದುಗೊಳಿಸಬೇಕು ಎಂದು ಇತ್ತೀಚಿಗೆ ನಿವೃತ್ತರಾಗಿರುವ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ ದೀಪಕ ಗುಪ್ತಾ ಹೇಳಿದ್ದಾರೆ. ಭಿನ್ನಾಭಿಪ್ರಾಯಗಳನ್ನು ತಡೆಯಲು ಅಥವಾ ಅಡಗಿಸಲು ಪ್ರಜೆಗಳಲ್ಲಿ ಭೀತಿಯನ್ನು ಸೃಷ್ಟಿಸಲು ಸರಕಾರಗಳು ಈ ಕಾನೂನನ್ನು ಬಳಸಿಕೊಳ್ಳುತ್ತಿವೆ ಎಂದು ಹೇಳಿರುವ ಅವರು, ಈ ಕಾನೂನಿನ ದುರುಪಯೋಗದ ಪ್ರಕರಣಗಳು ವ್ಯಾಪಕವಾಗಿ ಹೆಚ್ಚುತ್ತಿವೆ ಎಂದಿದ್ದಾರೆ.

1962ರಲ್ಲಿ ಕೇದಾರನಾಥ ಸಿಂಗ್ ಪ್ರಕರಣದಲ್ಲಿ ಕಲಂ 124ಎ ಅನ್ನು ಸೂಕ್ಷ್ಮವಾಗಿ ವ್ಯಾಖ್ಯಾನಿಸಿದ್ದ ಸರ್ವೋಚ್ಚ ನ್ಯಾಯಾಲಯವು ಹಿಂಸೆಗೆ ಪ್ರಚೋದನೆಯಿದ್ದರೆ ಮಾತ್ರ ಈಗ ಈ ಕಲಂ ಅನ್ವಯಿಸುತ್ತದೆ ಎಂದು ಸ್ಪಷ್ಟಪಡಿಸಿತ್ತು ಎಂದು ಸುದ್ದಿ ಜಾಲತಾಣ ‘The Wire’ಗೆ ನೀಡಿದ ಸಂದರ್ಶನಲ್ಲಿ ಹೇಳಿದ ನ್ಯಾ.ಗುಪ್ತಾ,ಇದು ಈ ಕಲಮ್ ನ ಅತ್ಯಗತ್ಯ ಅಂಶವಾಗಿದ್ದು, ಹಿಂಸೆಗೆ ಪ್ರಚೋದನೆ ಇಲ್ಲದಿದ್ದಲ್ಲಿ ಈ ಕಾನೂನನ್ನು ಬಳಸುವಂತಿಲ್ಲ. ಸರ್ವೋಚ್ಚ ನ್ಯಾಯಾಲಯವು ತನ್ನ ವ್ಯಾಖ್ಯಾನವನ್ನು ಪದೇ ಪದೇ ದೃಢಪಡಿಸಿದೆ ಮತ್ತು ಅದರ ನಿಲುವಿನಲ್ಲಿ ಯಾವುದೇ ಶಂಕೆ ಮತ್ತು ಗೊಂದಲವಿಲ್ಲ, ಆದರೂ ದೇಶಾದ್ಯಂತ ನ್ಯಾಯಾಧೀಶರಿಗೆ ಇದರ ಬಗ್ಗೆ ಗೊತ್ತಿದ್ದಂತಿಲ್ಲ ಅಥವಾ ಗೊತ್ತಿದ್ದರೂ ಅದನ್ನು ಕಡೆಗಣಿಸುತ್ತಿದ್ದಾರೆ. ಅಂದರೆ ಕಲಂ 124ಎ ಈಗ ತನ್ನ ಮೂಲ ಅರ್ಥವನ್ನೇ ಕಳೆದುಕೊಂಡಿದೆ. ಅದನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಲಾಗಿದೆ ಮತ್ತು ಅದನ್ನು ಸೀಮಿತವಾಗಿ ಅನ್ವಯಿಸಬೇಕು, ಅದು ಈ ನೆಲದ ಕಾನೂನಾಗಿದೆ ಎಂದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು,ಕಲಂ 124ಎ ವ್ಯಾಪಕವಾಗಿ ದುರುಪಯೋಗವಾಗುತ್ತಿರುವ ವಿಷಯವನ್ನು ಸ್ವಯಂ ಪ್ರೇರಿತವಾಗಿ ಎತ್ತಲು ಭಾರತದ ಮುಖ್ಯ ನ್ಯಾಯಾಧೀಶರಿಗೆ ಅಧಿಕಾರವಿದೆಯಾದರೂ ಸರ್ವೋಚ್ಚ ನ್ಯಾಯಾಲಯವು ಈ ಬಗ್ಗೆ ಪಿಐಎಲ್ ಅಥವಾ ಮೇಲ್ಮನವಿ ಸಲ್ಲಿಕೆಯಾಗುವವರೆಗೆ ಕಾಯಬೇಕು. ಅದೇ ಸರಿಯಾದ ವಿಧಾನವಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಇತ್ತೀಚಿನ ವರ್ಷಗಳಲ್ಲಿ ಕಲಂ 124ಎ ವಿರುದ್ಧ ಮೇಲ್ಮನವಿಯೊಂದು ಸಲ್ಲಿಕೆಯಾಗಿತ್ತಾದರೂ ಸರ್ವೋಚ್ಚ ನ್ಯಾಯಾಲಯವು ತಾನೇ ಅದರ ವಿಚಾರಣೆಯನ್ನು ನಡೆಸುವ ಬದಲು ಉಚ್ಚ ನ್ಯಾಯಾಲಯಕ್ಕೆ ಕಳುಹಿಸಿದೆ. ಸರ್ವೋಚ್ಚ ನ್ಯಾಯಾಲಯದ ಈ ಕ್ರಮದಿಂದ ತನಗೆ ನಿರಾಶೆಯಾಗಿದೆ ಎಂದು ಹೇಳುತ್ತಿಲ್ಲವಾದರೂ ಅದನ್ನು ಸರ್ವೋಚ್ಚ ನ್ಯಾಯಾಲಯವೇ ತಕ್ಷಣ ವಿಚಾರಣೆಗೆತ್ತಿಕೊಳ್ಳಬೇಕಿತ್ತು ಎನ್ನುವುದು ತನ್ನ ಅಭಿಪ್ರಾಯವಾಗಿದೆ ಎಂದರು.

ಪೊಲೀಸರು ದೇಶದ್ರೋಹ ಆರೋಪವನ್ನು ಹೊರಿಸಿರುವ ಇತ್ತೀಚಿನ ಪ್ರಕರಣಗಳ ಕುರಿತು ಸಂದರ್ಶಕರ ಪ್ರಶ್ನೆಗೆ ಉತ್ತರಿಸಿದ ನ್ಯಾ.ಗುಪ್ತಾ, ದಿಶಾ ರವಿ ಪ್ರಕರಣದಲ್ಲಿ ಟೂಲ್ಕಿಟ್ ಅನ್ನು ಪರಿಷ್ಕರಿಸಿದ್ದು ಅಥವಾ ಅದರಲ್ಲಿಯ ವಿಷಯಗಳನ್ನು ಟ್ವೀಟಿಸಿದ್ದು ಖಂಡಿತವಾಗಿಯೂ ದೇಶದ್ರೋಹವಾಗಿರಲಿಲ್ಲ. ನಿಷೇಧಿತ ಸಂಘಟನೆಯಲ್ಲದ ಪೋಯೆಟಿಕ್ ಜಸ್ಟೀಸ್ ಫೌಂಡೇಷನ್ನ ಸದಸ್ಯರೊಂದಿಗೆ ವೆಬಿನಾರ್ನಲ್ಲಿ ದಿಶಾ ಪಾಲ್ಗೊಂಡಿದ್ದು ಕೂಡ ದೇಶದ್ರೋಹವಾಗಿರಲಿಲ್ಲ,ಅದು ಅಪರಾಧವೂ ಆಗಿರಲಿಲ್ಲ. ಎರಡನೆಯದಾಗಿ ಗಣತಂತ್ರ ದಿನದ ರೈತರ ಟ್ರಾಕ್ಟರ್ ಪರೇಡ್ನ ಸಂದರ್ಭದಲ್ಲಿ ಪ್ರತಿಭಟನಾಕಾರನೋರ್ವ ಗುಂಡೇಟಿನಿಂದ ಮೃತಪಟ್ಟಿದ್ದಾನೆ ಎಂದು ಆತನ ಅಜ್ಜ ತಮಗೆ ತಿಳಿಸಿದ್ದನ್ನು ಪತ್ರಕರ್ತರು ಟ್ವೀಟಿಸಿದ್ದು ದೇಶದ್ರೋಹವಾಗಿರಲಿಲ್ಲ. ಟ್ವೀಟ್ನ ವಿಷಯ ತಪ್ಪಾಗಿದ್ದರೂ ಅದು ದೇಶದ್ರೋಹವಲ್ಲ,ಅಪರಾಧವೂ ಅಲ್ಲ. ಹೆಚ್ಚೆಂದರೆ ಅದು ಕಳಪೆ ಪತ್ರಿಕೋದ್ಯಮವಾಗಬಹುದೇ ಹೊರತು ಅಪರಾಧವಲ್ಲ ಎಂದರು.

 ಇಂದಿರಾ ಗಾಂಧಿಯವರ ಕೊಲೆಯಾದಾಗ ಸಾರ್ವಜನಿಕ ಸ್ಥಳದಲ್ಲಿ ‘ಖಲಿಸ್ತಾನ್ ಜಿಂದಾಬಾದ್ ’ಎಂದು ಕೂಗಿದ್ದು ದೇಶದ್ರೋಹವಾಗಿರಲಿಲ್ಲ ಎಂದು 1995ರಲ್ಲಿ ಬಲವಂತ್ ಸಿಂಗ್ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ಜೆಎನ್ಯು ವಿದ್ಯಾರ್ಥಿಗಳು ‘ಭಾರತ್ ತೇರೆ ತುಕ್ಡೆ ತುಕ್ಡೆ ಹೋಂಗೆ ’ಎಂದು ಕೂಗಿದ್ದು ದೇಶದ್ರೋಹವಾಗಿತ್ತೇ ಎಂಬ ಪ್ರಶ್ನೆಗೆ ನ್ಯಾ.ಗುಪ್ತಾ, ಪೊಲೀಸರು ಈ ಘೋಷಣೆಗೂ ಹಿಂಸಾಚಾರದ ಕೃತ್ಯಕ್ಕೆ ನೇರವಾದ ನಂಟು ಕಲ್ಪಿಸಿದರೆ ಮಾತ್ರ ಅದು ದೇಶದ್ರೋಹವಾಗುತ್ತದೆ. ಆದರೆ ಮೂರು ವರ್ಷಗಳಾದರೂ ಇಂತಹ ಸಾಕ್ಷ ಪೊಲೀಸರಿಗೆ ಲಭಿಸಿಲ್ಲ. ಹೀಗಾಗಿ ಈ ಘೋಷಣೆಯು ದೇಶದ್ರೋಹವಾಗುವ ಸಾಧ್ಯತೆಯಿಲ್ಲ ಎಂದು ತಾನು ಭಾವಿಸಿರುವುದಾಗಿ ಉತ್ತರಿಸಿದರು.

ಕೃಪೆ: thewire.in

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News