‘ಚೋಕ್ ಹೋಲ್ಡ್’ ನಿಷೇಧಿಸುವ ಪೊಲೀಸ್ ಸುಧಾರಣೆಯನ್ನು ಅಂಗೀಕರಿಸಿದ ಅಮೆರಿಕ

Update: 2021-03-04 16:18 GMT

ವಾಶಿಂಗ್ಟನ್, ಮಾ. 4: ಕುತ್ತಿಗೆಯನ್ನು ಕಾಲಿನಿಂದ ಒತ್ತಿಹಿಡಿದು ಉಸಿರುಗಟ್ಟಿಸುವ (ಚೋಕ್ ಹೋಲ್ಡ್) ಪಟ್ಟನ್ನು ನಿಷೇಧಿಸುವ ಮತ್ತು ಜನಾಂಗೀಯ ಆಧಾರದಲ್ಲಿ ಜನರ ವಿವರಗಳನ್ನು ದಾಖಲಿಸುವುದನ್ನು ತಡೆಯುವ ಪ್ರಮುಖ ಪೊಲೀಸ್ ಸುಧಾರಣಾ ಮಸೂದೆಗೆ ಅಮೆರಿಕದ ಸಂಸತ್ತಿನ ಒಂದು ಸದನವಾಗಿರುವ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಬುಧವಾರ ಅನುಮೋದನೆ ನೀಡಿದೆ.

ಆಫ್ರಿಕನ್-ಅಮೆರಿಕನ್ ಜಾರ್ಜ್ ಫ್ಲಾಯ್ಡ್ ಕೊಲೆ ಆರೋಪವನ್ನು ಎದುರಿಸುತ್ತಿರುವ ಬಿಳಿಯ ಪೊಲೀಸ್ ಅಧಿಕಾರಿಯ ವಿಚಾರಣೆ ಆರಂಭಗೊಳ್ಳುವುದಕ್ಕೆ ಐದು ದಿನಗಳಿರುವಾಗ ಈ ಮಸೂದೆಯನ್ನು ಅಂಗೀಕರಿಸಲಾಗಿದೆ.

ಈ ಮಸೂದೆಗೆ ಜಾರ್ಜ್ ಫ್ಲಾಯ್ಡಾ ಹೆಸರಿಡಲಾಗಿದೆ. ಕಳೆದ ವರ್ಷದ ಮೇ 25ರಂದು ಮಿನಪೊಲಿಸ್ ನಗರದಲ್ಲಿ ಪೊಲೀಸ್ ಅಧಿಕಾರಿ ಡೆರೆಕ್ ಶಾವಿನ್, ಫ್ಲಾಯ್ಡ್ ರನ್ನು ಬಂಧಿಸುವ ಸಂದರ್ಭದಲ್ಲಿ ಅವರ ಕುತ್ತಿಗೆಯನ್ನು ಮೊಣಕಾಲಿನಿಂದ 8 ನಿಮಿಷಕ್ಕೂ ಅಧಿಕ ಅವಧಿಗೆ ಒತ್ತಿ ಹಿಡಿದಿದ್ದರು. ಫ್ಲಾಯ್ಡ್ ಉಸಿರುಗಟ್ಟಿ ಮೃತಪಟ್ಟಿದ್ದರು.

ಈ ಆಘಾತಕಾರಿ ದೃಶ್ಯವನ್ನು ಯಾರೋ ಸೆರೆಹಿಡಿದಿದ್ದು, ಅದು ವೈರಲ್ ಆಗಿತ್ತು. ಅವರ ಸಾವಿನ ವಿರುದ್ಧ ಅಮೆರಿಕ ಮತ್ತು ವಿದೇಶಗಳಲ್ಲಿ ಭಾರೀ ಪ್ರತಿಭಟನೆಗಳು ನಡೆದಿದ್ದವು.

‘ಜಾರ್ಜ್ ಫ್ಲಾಯ್ಡ್  ಜಸ್ಟಿಸ್ ಇನ್ ಪೋಲಿಸಿಂಗ್ ಆ್ಯಕ್ಟ್’ಗೆ ಕಳೆದ ವರ್ಷವೇ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಅನುಮೋದನೆ ನೀಡಿತ್ತು. ಆದರೆ, ಅಂದಿನ ಆಡಳಿತಾರೂಢ ರಿಪಬ್ಲಿಕನ್ ಪಕ್ಷದ ಪ್ರಾಬಲ್ಯವಿದ್ದ ಸೆನೆಟ್‌ನಲ್ಲಿ ಅದನ್ನು ತಡೆಹಿಡಿಯಲಾಗಿತ್ತು.

ಈಗ ಸೆನೆಟ್‌ನ ಆಂಶಿಕ ನಿಯಂತ್ರಣವನ್ನು ಡೆಮಾಕ್ರಟಿಕ್ ಪಕ್ಷ ಗಳಿಸಿಕೊಂಡಿರುವ ಹಿನ್ನೆಲೆಯಲ್ಲಿ, ಮಸೂದೆಯನ್ನು ಮರುಮಂಡಿಸಲು ಬೈಡನ್ ಸರಕಾರ ಕಳೆದ ವಾರ ನಿರ್ಧರಿಸಿದೆ. ಈಗ ಅದು 220-212 ಮತಗಳ ಅಂತರದಲ್ಲಿ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಅಂಗೀಕಾರಗೊಂಡಿದ್ದು, ಸೆನೆಟ್‌ನಲ್ಲಿ ಇನ್ನಷ್ಟೇ ಅನುಮೋದನೆಗೊಳ್ಳಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News