ಲಸಿಕೆಯ ಪ್ರಮಾಣಪತ್ರಗಳಲ್ಲಿ ಪ್ರಧಾನಿ ಮೋದಿ ಚಿತ್ರ: ಆರೋಗ್ಯ ಸಚಿವಾಲಯದ ಉತ್ತರ ಕೋರಿದ ಚುನಾವಣಾ ಆಯೋಗ

Update: 2021-03-05 07:53 GMT

ಹೊಸದಿಲ್ಲಿ: ಕೋವಿಡ್-19 ಲಸಿಕೆ ಸ್ವೀಕರಿಸುವವರಿಗೆ ನೀಡುವ ಡಿಜಿಟಲ್ ಪ್ರಮಾಣಪತ್ರಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಫೋಟೊ ಇರುವುದರ ವಿರುದ್ಧ ತೃಣಮೂಲ ಕಾಂಗ್ರೆಸ್ ಸಲ್ಲಿಸಿರುವ ದೂರಿಗೆ ಉತ್ತರಿಸುವಂತೆ ಭಾರತದ ಚುನಾವಣಾ ಆಯೋಗವು ಕೇಂದ್ರ ಆರೋಗ್ಯ ಸಚಿವಾಲಯ ಹಾಗೂ ಪಶ್ಚಿಮಬಂಗಾಳದ ಮುಖ್ಯ ಚುನಾವಣಾಧಿಕಾರಿಯವರನ್ನು ಕೇಳಿದೆ ಎಂದು ದಿ ಇಂಡಿಯನ್ ಎಕ್ಸ್ ಪ್ರೆಸ್ ಶುಕ್ರವಾರ ವರದಿ ಮಾಡಿದೆ.

“ನಾವು ಮೊದಲು ಸತ್ಯವನ್ನು ಕಂಡುಹಿಡಿಯಲು ಬಯಸುತ್ತೇವೆ. ಉದಾಹರಣೆಗೆ ಆರೋಗ್ಯ ಸಚಿವಾಲಯದ ಸೂಚನೆಯ ಮೇರೆಗೆ ಈ ಪ್ರಮಾಣಪತ್ರವನ್ನು ವಿತರಿಸಲಾಗಿದೆಯೇ. ವಾಡಿಕೆಯ ವಿಷಯವಾಗಿ ಅಂತಹ ದೂರುಗಳಲ್ಲಿ ಭಾಗಿಯಾಗಿರುವ ಎಲ್ಲರಿಂದ ನಾವು ಯಾವಾಗಲೂ ಪ್ರತಿಕ್ರಿಯೆ ಪಡೆಯುತ್ತೇವೆ’’ ಎಂದು ಅಪರಿಚಿತ ಅಧಿಕಾರಿಯೊಬ್ಬರು ಪತ್ರಿಕೆಗೆ ತಿಳಿಸಿದ್ದಾರೆ.

ಪಶ್ಚಿಮಬಂಗಾಳದ ಮುಖ್ಯ ಚುನಾವಣಾ ಅಧಿಕಾರಿಗೆ ಈ ವಿಷಯದ ಬಗ್ಗೆ 24 ಗಂಟೆಗಳ ಒಳಗೆ ವರದಿ ಸಲ್ಲಿಸುವಂತೆ ಕೋರಲಾಗಿದೆ ಎಂದು ‘ದಿ ಪ್ರಿಂಟ್’ ತಿಳಿಸಿದೆ.

ಇತ್ತೀಚೆಗೆ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದ ಟಿಎಂಸಿ, ಪ್ರಮಾಣಪತ್ರಗಳಿಂದ ಪ್ರಧಾನಿ ಮೋದಿ ಫೋಟೊವನ್ನು ತೆಗೆದುಹಾಕುುವಂತೆ ಮನವಿ ಸಲ್ಲಿಸಿತ್ತು. ಇದು ಸರಕಾರಿ ವ್ಯವಸ್ಥೆಯ ದುರುಪಯೋಗವಾಗಿದೆ. ಇದು ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಟಿಎಂಸಿ ಆರೋಪಿಸಿತ್ತು.

ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ ನೀಡಿದ ತಾತ್ಕಾಲಿಕ ಪ್ರಮಾಣಪತ್ರಗಳಲ್ಲಿ ಮೋದಿಯವರ ಫೋಟೊ,ಹೆಸರು ಹಾಗೂ ಸಂದೇಶವನ್ನು ಇರಿಸುವ ಮೂಲಕ ಅವರು ತಮ್ಮ ಹುದ್ದೆ ಹಾಗೂ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವುದಲ್ಲದೆ ಕೋವಿಡ್ ಲಸಿಕೆಗಳ ಉತ್ಪಾದಕರಿಗೆ ಸಲ್ಲಬೇಕಾದ ಶ್ರೇಯಸನ್ನು ಕದಿಯುತ್ತಿದ್ದಾರೆ ಎಂದು ಟಿಎಂಸಿ ರಾಜ್ಯಸಭಾ ಸಂಸದ ಡರೆಕ್ ಒಬ್ರಿಯಾನ್ ಇಸಿಐಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News