ಪ್ರತಿಷ್ಠಿತ ಟೈಮ್ ಮ್ಯಾಗಝಿನ್ ಮುಖಪುಟದಲ್ಲಿ ಭಾರತದ ರೈತ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಮಹಿಳೆಯರ ಚಿತ್ರ

Update: 2021-03-05 11:42 GMT

ಹೊಸದಿಲ್ಲಿ: ಅಮೆರಿಕಾದ ಪ್ರತಿಷ್ಠಿತ ಟೈಮ್ ಮ್ಯಾಗಝಿನ್‍ನ ಮಾರ್ಚ್ ಸಂಚಿಕೆಯ ಮುಖಪಟದಲ್ಲಿ ಭಾರತದ ರೈತ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಮಹಿಳೆಯರ ಚಿತ್ರ ಪ್ರಕಟಗೊಂಡಿದೆ.

“ಆನ್ ದಿ ಫ್ರಂಟ್‍ಲೈನ್ಸ್ ಆಫ್ ಇಂಡಿಯಾಸ್ ಫಾರ್ಮರ್ ಪ್ರೊಟೆಸ್ಟ್' ಎಂಬ ಶೀರ್ಷಿಕೆಯ ಮುಖಪುಟ ಲೇಖನವಿರುವ ಈ ಸಂಚಿಕೆಯ ಮುಖಪುಟದ ಚಿತ್ರದಲ್ಲಿ ದಿಲ್ಲಿ ಹೊರವಲಯದ ಟಿಕ್ರಿ ಗಡಿಯಲ್ಲಿ ಪ್ರತಿಭಟನೆಯಲ್ಲಿ ಭಾಗಿಯಾಗಿರುವ 20 ರೈತ ಮಹಿಳೆಯರ ಚಿತ್ರವಿದೆ.

“ಐ ಕೆನಾಟ್ ಬಿ ಇಂಟಿಮಿಡೇಟೆಡ್. ಐ ಕೆನಾಟ್ ಬಿ ಬಾಟ್'' (ನನ್ನನ್ನು ಬೆದರಿಸಲು ಹಾಗೂ ಕೊಳ್ಳಲು ಸಾಧ್ಯವಿಲ್ಲ) ಎಂಬ ಲೇಖನದಲ್ಲಿ ಕೃಷಿ ಕಾನೂನುಗಳ ವಾಪಸಾತಿಗೆ ಆಗ್ರಹಿಸುವ ಹೋರಾಟದಲ್ಲಿ ಭಾಗಿಯಾಗಿರುವ ಜತೆಗೆ ಈ ಮಹಿಳೆಯರು  ಪುರುಷ ಪ್ರಧಾನ ಸಮಾಜದ ಮನಃಸ್ಥಿತಿ, ಲೈಂಗಿಕ ದೌರ್ಜನ್ಯ ಹಾಗೂ ಲಿಂಗಾಧರಿತ ತಾರತಮ್ಯದ ವಿರುದ್ಧವೂ ಹೋರಾಡುತ್ತಿದ್ದಾರೆ ಎಂದು  ಬರೆಯಲಾಗಿದೆ.

“ನಾವೇಕೆ ವಾಪಸ್ ಹೋಗಬೇಕು? ಇದು ಕೇವಲ ಪುರುಷರ ಹೋರಾಟವಲ್ಲ. ಗದ್ದೆಗಳಲ್ಲಿ ಪುರುಷರಿಗೆ ಸರಿಸಮಾನಾಗಿ ನಾವು ಕೆಲಸ ಮಾಡುತ್ತೇವೆ. ರೈತರಲ್ಲದೆ ನಾವು ಇನ್ಯಾರು?'' ಎಂದು ಪಶ್ಚಿಮ ಉತ್ತರ ಪ್ರದೇಶದ ರಾಮಪುರ್ ಗ್ರಾಮದ 74 ವರ್ಷದ  ಜಸಬೀರ್ ಕೌರ್ ಪ್ರಶ್ನಿಸಿರುವುದನ್ನೂ ಲೇಖನದಲ್ಲಿ ಉಲ್ಲೇಖಿಸಲಾಗಿದೆ.

ಮಾರ್ಚ್ 8 ರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಕ್ಕಿಂತ ಕೆಲವೇ ದಿನಗಳಿಗೆ ಮುನ್ನ ಈ ಸಂಚಿಕೆ ಹೊರಬಂದಿದೆ. ಈ ದಿನವನ್ನು ಮಹಿಳಾ ಕಿಸಾನ್ ದಿವಸ್ ಎಂದು ಪ್ರತಿಭಟನಾಕಾರರು  ಆಚರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News