ನ್ಯಾಯಕ್ಕೆ ಆಗ್ರಹಿಸಿ ಡಿಸಿ ಕಚೇರಿ ಎದುರು ಅಹೋರಾತ್ರಿ ಧರಣಿ ಕುಳಿತ ಕುಟುಂಬ

Update: 2021-03-05 16:25 GMT

ಮಂಡ್ಯ, ಮಾ.5: ಅಕ್ರಮ ಸಕ್ರಮ ಯೋಜನೆ ವಿದ್ಯುತ್ ಸಂಪರ್ಕ ಕಲ್ಪಿಸಲು ಅಡ್ಡಿಪಡಿಸಿ ದೌರ್ಜನ್ಯ ನಡೆಸಿದವರ ವಿರುದ್ಧ ಕೆರಗೋಡು ಠಾಣೆ ಪೊಲೀಸರು ದೂರು ಸ್ವೀಕರಿದಲಿಲ್ಲವೆಂದು ಆರೋಪಿಸಿ ತಾಲೂಕಿನ ಡಣಾಯಕನಪುರ ಗ್ರಾಮದ ಕುಟುಂಬವೊಂದರ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಧರಣಿ ಕುಳಿತಿದ್ದಾರೆ.

ಗ್ರಾಮದ ರವಿಕುಮಾರ್, ತಾಯಿ ಪಾರ್ವತಮ್ಮ ಹಾಗೂ ಪತ್ನಿ ನಂದಿನಿ ನಗರದ ಜಿಲ್ಲಾಧಿಕಾರಿ ಕಚೇರಿ ಎದರು ಗುರುವಾರ ತಡರಾತ್ರಿಯಿಂದ ಅಹೋರಾತ್ರಿ ಧರಣಿ ಆರಂಭಿಸಿದ್ದು, ತಮ್ಮ ಕುಟುಂಬಕ್ಕೆ ಆಗಿರುವ ಅನ್ಯಾಯ ಸರಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ತಮ್ಮ ಜಮೀನಿನಲ್ಲಿ ನೀರು ಸರಬರಾಜು ಮಾಡಲು ವಿದ್ಯುತ್ ಸಂಪರ್ಕಕ್ಕಾಗಿ ಸೆಸ್ಕ್ ಇಲಾಖೆಗೆ ಅಕ್ರಮ ಸಕ್ರಮ ಯೋಜನೆಯಡಿ ಅರ್ಜಿ ಸಲ್ಲಿಸಿದ್ದು, ವಿದ್ಯುತ್ ಕಂಬ ಅಳವಡಿಕೆಗೆ ತನ್ನ ಚಿಕ್ಕಪ್ಪನ ಮಕ್ಕಳಾದ ಶಿವಲಿಂಗ, ಶಿವಕುಮಾರ್ ಹಾಗೂ ಅವರ ತಾಯಿ ಗೌರಮ್ಮ ಅಡ್ಡಿಪಡಿಸುತ್ತಿದ್ದಾರೆ ಎಂದು ರವಿಕುಮಾರ್ ಆರೋಪಿಸಿದ್ದಾರೆ.

ಸೆಸ್ಕ್ ಇಂಜಿನಿಯರ್ ಸಂತೋಷ್ ತಮ್ಮ ಸಿಬ್ಬಂದಿ ಜತೆ ವಿದ್ಯುತ್ ಕಂಬ ಅಳವಡಿಕೆಗಾಗಿ ಜಮೀನಿನ ಬಳಿ ಗುರುವಾರ ಬೆಳಗ್ಗೆ ಬಂದಿದ್ದಾಗ ಚಿಕ್ಕಪ್ಪನ ಮಕ್ಕಳಾದ ಶಿವಲಿಂಗ, ಶಿವಕುಮಾರ್ ಅಡ್ಡಿಪಡಿಸಿ ಗಲಾಟೆ ಮಾಡಿದರು. ಈ ವೇಳೆ ಎರಡು ಮೊಬೈಲ್ ಹಾಗೂ ನನ್ನ ಹೆಂಡತಿ ನಂದಿನಿ ಕೊರಳಿನಿಂದ ಮಾಂಗಲ್ಯ ಸರ ಕಸಿದುಕೊಂಡು ಹೋಗಿದ್ದಾರೆ ಎಂದು ಅವರು ದೂರಿದರು.

ಈ ಸಂಬಂಧ ಕೆರೆಗೋಡು ಪೊಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸಲು ಹೋಗಿದ್ದೆ. ಸಲ್ಲದ ಸಬೂಬು ಹೇಳಿದರೇ ಹೊರತು ದೂರು ಸ್ವೀಕರಿಸಲಿಲ್ಲ. ಹಾಗಾಗಿ ಜಿಲ್ಲಾಧಿಕಾರಿ ಅವರ ಕಚೇರಿ ಎದುರು ಧರಣಿ ಕುಳಿತಿದ್ದೇವೆ. ನ್ಯಾಯ ಸಿಗವವರೆಗೂ ಕದಲುವುದಿಲ್ಲ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News