ಅನಗತ್ಯ ಚರ್ಚೆಗಳಿಗೆ ವೇದಿಕೆಯಾಗುತ್ತಿರುವ ವಿಧಾನ ಮಂಡಲ

Update: 2021-03-06 04:58 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಭಾರತದ ಜನತೆ ಸಮಸ್ಯೆಗಳ ಸಂಕಟದ ಉರಿಯಲ್ಲಿ ಬೆಂದು ಹೋಗುತ್ತಿದ್ದಾರೆ. ಬೆಲೆ ಏರಿಕೆ, ನಿರುದ್ಯೋಗ ಜನರ ಬದುಕನ್ನು ದುರ್ಬರವಾಗಿಸಿದೆ. ಇಂತಹ ಸನ್ನಿವೇಶದಲ್ಲಿ ನೆರವಿಗೆ ಬರಬೇಕಾದ ಸರಕಾರ ನೈಜ ಸಮಸ್ಯೆಗಳನ್ನು ಮರೆ ಮಾಚಿ ಜನರನ್ನು ದಿಕ್ಕು ತಪ್ಪಿಸಲು ಯತ್ನಿಸುತ್ತಿರುವುದು ವಿಷಾದದ ಸಂಗತಿ. ಈಗ ಕರ್ನಾಟಕ ವಿಧಾನ ಮಂಡಲದ ಉಭಯ ಸದನಗಳಲ್ಲಿ ಕೋಲಾಹಲಕ್ಕೆ ಕಾರಣವಾದ ‘ಒಂದು ದೇಶ, ಒಂದು ಚುನಾವಣೆ’ ಈ ಸರಕಾರ ಜನರನ್ನು ದಿಕ್ಕು ತಪ್ಪಿಸುವ ಮಸಲತ್ತಿಗೆ ಒಂದು ಪ್ರತ್ಯಕ್ಷ ಉದಾಹರಣೆ. ಎರಡೂ ಸದನಗಳಲ್ಲಿ ಅಪ್ರಸಕ್ತವಾದ ಈ ವಿಷಯದ ಪ್ರಸ್ತಾವ ಅಗತ್ಯವಿರಲಿಲ್ಲ.

ಸದನದ ಮುಂದೆ ಬರುವ ಯಾವುದೇ ವಿಷಯ ಕಲಾಪ ಪಟ್ಟಿಯಲ್ಲಿ ಸೇರ್ಪಡೆಯಾಗಬೇಕಾದರೆ ಸರಕಾರ ಅಂದರೆ ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳ ನಡುವೆ ಒಮ್ಮತ ಏರ್ಪಡಬೇಕು. ಇಲ್ಲವೇ ಇತ್ಯರ್ಥವಾಗದ ವಿಷಯವನ್ನು ನಿರ್ದಿಷ್ಟ ನಿಯಮದ ಅಡಿಯಲ್ಲಿ ವಿಧಾನಸಭಾಧ್ಯಕ್ಷರು ಮತ್ತು ವಿಧಾನ ಪರಿಷತ್ ಸಭಾಪತಿಗಳು ಸದನದ ಮುಂದಿಡಬಹುದು. ಆದರೆ ಯಾವ ನಿಯಮಾವಳಿಗೂ ಒಳಪಡದೆ ವಿವೇಚನಾಧಿಕಾರ ಬಳಸಿ ಸದನದ ಮುಂದಿಡುವುದು ತಪ್ಪಲ್ಲವಾದರೂ ವಿವೇಚನಾಧಿಕಾರವನ್ನು ಮನ ಬಂದಂತೆ ಬಳಸುವುದು ಸತ್ಸಂಪ್ರದಾಯವೆನಿಸುವುದಿಲ್ಲ.

 ಚುನಾವಣೆಗೆ ಸಂಬಂಧಿಸಿದಂತೆ ಕಾನೂನಿನಲ್ಲಿ ಯಾವುದೇ ಬದಲಾವಣೆ ಮಾಡಬೇಕಿದ್ದರೂ ಜನತಾ ಪ್ರಾತಿನಿಧ್ಯ ಕಾಯ್ದೆಗೆ, ಮುಖ್ಯವಾಗಿ ಸಂವಿಧಾನಕ್ಕೆ ತಿದ್ದುಪಡಿ ತರಬೇಕಾಗುತ್ತದೆ. ಇಂತಹ ತಿದ್ದುಪಡಿ ತರುವ, ಅಂಗೀಕರಿಸುವ ಅಧಿಕಾರ ಸಂಸತ್ತಿಗೆ ಇದೆ. ಸಂಸತ್ತಿನ ಉಭಯ ಸದನಗಳು ಮಾತ್ರ ಕಾಯ್ದೆಯಲ್ಲಿ ಇಂತಹ ಬದಲಾವಣೆಯ ಬಗ್ಗೆ ಚರ್ಚಿಸಿ ಅಂಗೀಕರಿಸಬಹುದು. ಇದು ರಾಜ್ಯಗಳ ವಿಧಾನ ಮಂಡಲದ ವ್ಯಾಪ್ತಿಗೆ ಒಳಪಡುವ ವಿಷಯವಲ್ಲ. ಇದೆಲ್ಲ ಸರಕಾರದಲ್ಲಿದ್ದವರಿಗೆ ಗೊತ್ತಿಲ್ಲವೆಂದಲ್ಲ. ಆದರೆ ಸರಕಾರದ ಲೋಪ ದೋಷಗಳನ್ನು ಬಯಲು ಪಡಿಸುವ ಯಾವುದೇ ವಿಷಯಗಳು ಸದನದಲ್ಲಿ ಚರ್ಚೆಗೆ ಬರಬಾರದು ಎಂಬ ಕಾರಣಕ್ಕಾಗಿ ಸರಕಾರವೇ ಅನಗತ್ಯವಾಗಿ ವಿಷಯ ಪ್ರಸ್ತಾಪಕ್ಕೆ ಅವಕಾಶ ನೀಡಿದೆಯೇನೋ ಎಂಬ ಸಂದೇಹ ಸಹಜವಾಗಿ ಬರುತ್ತದೆ. ಇಂತಹ ಸಂದೇಹ ನಿವಾರಿಸುವ ನಿಟ್ಟಿನಲ್ಲಿ ಸರಕಾರ ಸಕಾರಾತ್ಮಕವಾಗಿ ನಡೆದುಕೊಳ್ಳಬೇಕಾಗಿದೆ.

‘ಒಂದು ದೇಶ, ಒಂದು ಚುನಾವಣೆ’ ಎಂಬುದು ಕಾರ್ಯಸಾಧ್ಯವಲ್ಲದ ಚಿಂತನೆ. ದೇಶದಲ್ಲಿ ಯಾವುದೇ ಕಾನೂನು ಇಲ್ಲದಿದ್ದರೂ 1952ರಿಂದ 1967ರ ವರೆಗೆ ಬಹುತೇಕ ಲೋಕಸಭೆ ಹಾಗೂ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆಗಳು ನಡೆಯುತ್ತಿದ್ದವು.ಆಗ ಕೇಂದ್ರ ಮತ್ತು ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿದಿತ್ತು.ಆದರೆ 1967ರ ಸಾರ್ವತ್ರಿಕ ಚುನಾವಣೆಗಳ ನಂತರ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬಂದರೂ ಕೆಲ ರಾಜ್ಯಗಳಲ್ಲಿ ಕಾಂಗ್ರೆಸೇತರ ಪಕ್ಷಗಳ ಸಮ್ಮಿಶ್ರ ಸರಕಾರಗಳು ಅಸ್ತಿತ್ವಕ್ಕೆ ಬಂದವು. ನಂತರ ಸಮ್ಮಿಶ್ರ ಸರಕಾರಗಳಲ್ಲಿ ಭಿನ್ನಾಭಿಪ್ರಾಯ ಉಂಟಾಗಿ ಕೆಲ ರಾಜ್ಯಗಳಲ್ಲಿ ಸರಕಾರ ಬಿದ್ದು, ವಿಧಾನ ಸಭೆ ವಿಸರ್ಜನೆಗೊಂಡು ರಾಷ್ಟ್ರಪತಿ ಆಡಳಿತವನ್ನು ಹೇರಲಾಯಿತು. ಸಂವಿಧಾನದ ಪ್ರಕಾರ ರಾಷ್ಟ್ರಪತಿ ಆಡಳಿತವನ್ನು ಆರು ತಿಂಗಳಿಗಿಂತ ಹೆಚ್ಚು ಕಾಲ ಹೇರುವಂತಿಲ್ಲ. ಆದ್ದರಿಂದ ಅಂತಹ ರಾಜ್ಯಗಳಲ್ಲಿ ಮಧ್ಯಂತರ ಚುನಾವಣೆಗಳು ನಡೆದವು. ಅದಕ್ಕಿಂತ ಮೊದಲು 1957ರಲ್ಲಿ ಕೇರಳದಲ್ಲಿ ಚುನಾವಣೆ ಮೂಲಕ ಅಸ್ತಿತ್ವಕ್ಕೆ ಬಂದ ಮೊದಲ ಕಮ್ಯುನಿಸ್ಟ್ ಸರಕಾರವನ್ನು ಅಂದಿನ ನೆಹರೂ ನೇತೃತ್ವದ ಕೇಂದ್ರ ಸರಕಾರ ವಜಾ ಮಾಡಿತು. ಹೀಗೆ ಏಕ ಚುನಾವಣೆ ಎಂಬುದು ನಿಂತು ಹೋಗಿ ಆಯಾ ರಾಜ್ಯಗಳ ವಿಧಾನಸಭೆ ಅವಧಿ ಮುಗಿದ ನಂತರ ಚುನಾವಣೆ ನಡೆಸುತ್ತಾ ಬರಲಾಯಿತು. ಈಗ ‘ಒಂದು ದೇಶ, ಒಂದು ಚುನಾವಣೆ’ ಮಾಡಿದರೂ ಕೂಡ ಅದು ಯಶಸ್ವಿಯಾಗುವುದಿಲ್ಲ.

ಅದೇನೇ ಇರಲಿ ವಿಧಾನ ಮಂಡಲದ ಉಭಯ ಸದನಗಳ ಕಲಾಪಗಳು ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುವುದು ವಿಧಾನಸಭಾಧ್ಯಕ್ಷರ ಹೊಣೆಗಾರಿಕೆ ಮಾತ್ರವಲ್ಲ, ಆಡಳಿತ ಹಾಗೂ ಪ್ರತಿಪಕ್ಷಗಳ ಜವಾಬ್ದಾರಿಯೂ ಆಗಿದೆ. ಜನತೆಯ ಜ್ವಲಂತ ಸಮಸ್ಯೆಗಳ ಗಂಭೀರ ಚರ್ಚೆಯ ವೇದಿಕೆಯಾಗಬೇಕಾದ ಸದನ ಕೋಲಾಹಲದ ಸಂತೆಯಾಗಬಾರದು. ನಮ್ಮ ಕರ್ನಾಟಕ ವಿಧಾನ ಮಂಡಲಕ್ಕೆ ಒಂದು ಇತಿಹಾಸವಿದೆ.ಘನತೆಯಿದೆ. ಅದಕ್ಕೆ ಕಪ್ಪುಕಲೆ ಅಂಟಿಸುವ ಕೆಲಸವನ್ನು ಯಾರೂ ಮಾಡಬಾರದು.ಜನತೆಯ ಬೊಕ್ಕಸದ ಹಣದಿಂದ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ನಡೆಸುವ ಅಧಿವೇಶನವನ್ನು ವ್ಯರ್ಥಗೊಳಿಸುವುದು ಜನತೆಗೆ ಮಾಡುವ ಮಹಾದ್ರೋಹ ಎಂಬುದನ್ನು ನಮ್ಮ ಜನಪ್ರತಿನಿಧಿಗಳು ಮರೆಯಬಾರದು. ಇನ್ನು ಮುಂದೆ ಹೀಗಾಗದಂತೆ ನೋಡಿಕೊಳ್ಳಬೇಕು.

ಕಳೆದ ಎರಡು ದಶಕಗಳಿಂದ ಕರ್ನಾಟಕ ಮಾತ್ರವಲ್ಲ, ದೇಶದ ಬಹುತೇಕ ಶಾಸನ ಸಭೆಗಳ ಹಾಗೂ ಸಂಸತ್ತಿನ ಉಭಯ ಸದನಗಳ ಗುಣಮಟ್ಟ ಕಡಿಮೆಯಾಗುತ್ತಿದೆ.ಮುಂಚಿನಂತೆ ಸಂವಿಧಾನ ಮತ್ತು ನಿಯಮಾವಳಿಗಳನ್ನು ಓದಿಕೊಂಡು ಬರುವವರು ವಿರಳ. ಅದರಲ್ಲೂ ಇತ್ತೀಚೆಗೆ ರಿಯಲ್ ಎಸ್ಟೇಟ್ ದಂಧೆ ಮಾಡುವವರು, ಗಣಿ ಮಾಫಿಯಾದವರು, ಚಿನ್ನದ ಅಂಗಡಿಯ ವ್ಯಾಪಾರಿಗಳು ಮಾತ್ರವಲ್ಲ, ಕ್ರಿಮಿನಲ್ ಆರೋಪ ಎದುರಿಸುತ್ತಿರುವವರು ಶಾಸನ ಸಭೆಗಳನ್ನು ಪ್ರವೇಶಿಸುತ್ತಿರುವುದರಿಂದ ಸದನಗಳು ಕುಸ್ತಿ ಅಖಾಡಗಳಾಗಿವೆ. ಈ ಹಿನ್ನೆಲೆಯಲ್ಲಿ ನಮ್ಮ ಶಾಸನಸಭೆಗಳ ಗುಣಮಟ್ಟ ಕಾಪಾಡಲು ರಾಜಕೀಯ ಪಕ್ಷಗಳು ಸಂಕಲ್ಪ ಮಾಡಬೇಕಾಗಿದೆ. ಕ್ರಿಮಿನಲ್ ಆರೋಪ ಹೊತ್ತವರಿಗೆ ಪಕ್ಷದ ಟಿಕೆಟ್ ನೀಡಬಾರದು.

ನಮ್ಮ ವಿಧಾನಸಭೆ, ವಿಧಾನ ಪರಿಷತ್ತು, ಸಂಸತ್ತುಗಳು ಜನಸಾಮಾನ್ಯರ ಹಾಗೂ ದೇಶದ ಸಮಸ್ಯೆಗಳ ಚರ್ಚಾ ವೇದಿಕೆಯಾದರೆ ನಮ್ಮ ಪ್ರಜಾಪ್ರಭುತ್ವ ಅರ್ಥಪೂರ್ಣವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News