ಇರಾಕ್: ಪೋಪ್-ಅಲ್‌ಸಿಸ್ತಾನಿ ಮಾತುಕತೆ ಶಾಂತಿಸ್ಥಾಪನೆಗೆ ಶ್ರಮಿಸಲು ಇರಾಕಿನ ಮುಸ್ಲಿಂ-ಕ್ರೈಸ್ತರಿಗೆ ಕರೆ

Update: 2021-03-06 16:47 GMT

 ಉರ್ ಬಯಲುಪ್ರದೇಶ (ಇರಾಕ್),ಮಾ.6: ಇರಾಕ್ ಪ್ರವಾಸದಲ್ಲಿರುವ ಪೋಪ್ ಫ್ರಾನ್ಸಿಸ್ ಹಾಗೂ ಇರಾಕ್‌ನ ಪ್ರಭಾವಿ ಶಿಯಾ ಧರ್ಮಗುರು ಅಯಾತೊಲ್ಲಾ ಅಲಿ ಸಿಸ್ತಾನಿ ಅವರು ಕ್ರೈಸ್ತರು ಹಾಗೂ ಮುಸ್ಲಿಮರ ನಡುವೆ ಶಾಂತಿಯುತ ಸಹಬಾಳ್ವೆಯ ಪ್ರಬಲ ಸಂದೇಶವನ್ನು ಶನಿವಾರ ನೀಡಿದ್ದಾರೆ. ಅಂತರಿಕ ಯುದ್ಧದಿಂದ ಜರ್ಝರಿತ ಗಲ್ಫ್ ರಾಷ್ಟ್ರವಾದ ಇರಾಕ್‌ನಲ್ಲಿ ಸಂಕಷ್ಟಕ್ಕೀಡಾಗಿರುವ ಅಲ್ಪಸಂಖ್ಯಾತ ಕ್ರೈಸ್ತ ಸಮುದಾಯಕ್ಕೆ ಸಾಂತ್ವನ ನೀಡಬೇಕೆಂದು ಅವರು ಕರೆಕೊಟ್ಟಿದ್ದಾರೆ.

 ಇರಾಕ್‌ನಲ್ಲಿ ಶಿಯಾ ಸಮುದಾಯದ ಪವಿತ್ರ ನಗರವಾದ ನಜಾಫ್‌ಗೆ ಶನಿವಾರ ಆಗಮಿಸಿದ ಪೋಪ್ ಫ್ರಾನ್ಸಿಸ್ ಅವರು ಅಯಾತೊಲ್ಲಾಅಲಿ ಸಿಸ್ತಾನಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಇರಾಕ್‌ನ ಅಲ್ಪಸಂಖ್ಯಾತರಾಗಿರುವ ಕ್ರೈಸ್ತರ ರಕ್ಷಣೆಯಲ್ಲಿ ಧಾರ್ಮಿಕ ಸಂಸ್ಥೆಗಳು ಪಾತ್ರವಹಿಸಬೇಕಾಗಿದೆ ಎಂದು ಸಿಸ್ತಾನಿ ಹೇಳಿದರು. ಇರಾಕ್‌ನಲ್ಲಿ ಕ್ರೈಸ್ತರು ಶಾಂತಿಯುತವಾಗಿ ಬದುಕಬೇಕಾಗಿದೆ ಹಾಗೂ ಅವರು ಇತರ ಇರಾಕಿಗಳಷ್ಟೇ ಸಮಾನವಾದ ಅಧಿಕಾರವನ್ನು ಹೊಂದಿದ್ದಾರೆಎಂದು ಸಿಸ್ತಾನಿ ಅಭಿಪ್ರಾಯಿಸಿದರು.

   ಮಾತುಕತೆಯ ಸಂದರ್ಭದಲ್ಲಿ ಪೋಪ್ ಫ್ರಾನ್ಸಿಸ್ ಅವರು, ‘ಅತ್ಯಂತ ದುರ್ಬಲರು ಮತ್ತು ಅತ್ಯಂತ ದಬ್ಬಾಳಿಕೆಗೊಳಗಾದವರ ಪರವಾಗಿ ಧ್ವನಿಯನ್ನು ಎತ್ತಿದ್ದಕ್ಕಾಗಿ’ ಅಲ್ ಸಿಸ್ತಾನಿ ಅವರಿಗೆ ಕೃತಜ್ಞತೆ ಅರ್ಪಿಸಿದರು. 90 ವರ್ಷ ವಯಸ್ಸಿನ ಅಲ್ ಸಿಸ್ತಾನಿ ಅವರು ಶಿಯಾ ಮುಸ್ಲಿಂ ಸಮುದಾಯದ ಅತ್ಯಂತ ಹಿರಿಯ ಹಾಗೂ ಪ್ರಭಾವಿ ಧರ್ಮಗುರು ಗಳಲ್ಲೊಬ್ಬರಾಗಿದ್ದಾರೆ.

     ಶನಿವಾರ ಮುಂಜಾನೆ ನಜಾಫ್‌ಗೆ ಆಗಮಿಸಿದ 84 ವರ್ಷ ವಯಸ್ಸಿನ ಪೋಪ್ ಫ್ರಾನ್ಸಿಸ್ ಅವರು ಶಿಯಾ ಸಮುದಾಯದ ಪ್ರಮುಖ ಸ್ಥಳಗಳಲ್ಲೊಂದಾದ ಇಮಾಮ್ ಅಲಿ ಮಸೀದಿಯ ಸಮೀಪದಲ್ಲಿರುವ ಅಲ್‌ಸಿಸ್ತಾನಿಯವರ ನಿವಾಸಕ್ಕೆ ಆಗಮಿಸಿದು.

  ಸಾಂಪ್ರಾದಾಯಿಕ ಇರಾಕಿ ಉಡುಪುಗಳನ್ನು ಧರಿಸಿದ ತಂಡವೊಂದು ಪೋಪ್ ಅವರನ್ನು ಸ್ವಾಗತಿಸಿತು. ಪೋಪ್ ಆಗಮನದ ಹಿನ್ನೆಲೆಯಲ್ಲಿ ಶಾಂತಿಯ ಸಂಕೇತವಾಗಿ ಬಿಳಿ ಪಾರಿವಾಳಗಳನ್ನು ಹಾರಿಬಿಡಲಾಯಿತು.

 ಪೋಪ್ ಹಾಗೂ ಅಲ್‌ಸಿಸ್ತಾನಿ ಅವರ ಮಧ್ಯೆ 40 ನಿಮಿಷಗಳ ಕಾಲ ನಡೆದ ಮಾತುಕತೆ ಅತ್ಯಂತ ಸಕಾರಾತ್ಮಕವಾಗಿತ್ತು ಎಂದು ನಜಾಫ್‌ನ ಧಾರ್ಮಿಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಾಮಾನ್ಯವಾಗಿ ಸಂದರ್ಶಕರನ್ನು ಆಸನದಲ್ಲಿ ಕುಳಿತುಕೊಂಡೇ ಬರಮಾಡಿಕೊಳ್ಳುವ ಸಿಸ್ತಾನಿ ಅವರು ಪೋಪ್ ಅವರ ಗೌರವಾರ್ಥವಾಗಿ ತನ್ನ ಕೊಠಡಿಯ ಬಾಗಿಲ ಎದುರು ನಿಂತು ಅವರನ್ನು ಸ್ವಾಗತಸಿದರು.

  ಸಿಸ್ತಾನಿ ಜೊತೆ ಮಾತುಕತೆಯ ಬಳಿಕ ಪೋಪ್ ಅವರು ಪುರಾತನವಾದ ಉರ್ ನಗರಕ್ಕೆ ಭೇಟಿ ನೀಡಿದರು. ಅಲ್ಲಿ ನಡೆದ ಅಂತರ್ ಧರ್ಮೀಯ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇರಾಕ್‌ನ ಮುಸ್ಲಿಮರು ಹಾಗೂ ಕ್ರೈಸ್ತರು ತಮ್ಮ ನಡುವಿನ ಐತಿಹಾಸಿಕ ವಿದ್ವೇಷಗಳನ್ನು ತೊರೆದು ಶಾಂತಿ ಹಾಗೂ ಏಕತೆಗಾಗಿ ಶ್ರಮಿಸುವತೆ ಕರೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News