ಕೋವಿಡ್‌ನಿಂದ ಮೃತಪಟ್ಟವರ ದಫನಕ್ಕೆ ಶ್ರೀಲಂಕಾ ಸರಕಾರ ಅನುಮತಿ

Update: 2021-03-06 16:59 GMT
ಸಾಂದರ್ಭಿಕ ಚತ್ರ

 ಕೊಲಂಬೊ,ಮಾ.6: ಕೊನೆಗೂ ಜಾಗತಿಕ ಒತ್ತಡಕ್ಕೆ ಮಣಿದ ಶ್ರೀಲಂಕಾವು ಕೊರೋನಾ ಸೋಂಕಿನಿಂದ ಮೃತಪಟ್ಟವರನ್ನು ದಫನ ಮಾಡುವುದನ್ನು ನಿಷೇಧಿಸುವ ತನ್ನ ವಿವಾದಾತ್ಮಕ ಆದೇಶವನ್ನು ಹಿಂತೆಗೆದುಕೊಂಡಿದೆ. ಕೊರೋನದಿಂದ ಮೃತಪಟ್ಟವರ ಮೃತದೇಹಗಳನ್ನು ದಫನ ಮಾಡಲು ಅವಕಾಶ ನೀಡದಿರುವ ಮೂಲಕ ಶ್ರೀಲಂಕಾವು ಮುಸ್ಲಿಮರು, ಕ್ರೈಸ್ತರು ಸೇರಿದಂತೆ ಹಲವಾರು ಧಾರ್ಮಿಕ ಅಲ್ಪಸಂಖ್ಯಾತರ ಧಾರ್ಮಿಕ ಹಕ್ಕುಗಳನ್ನು ನಿರಾಕರಿಸಿದೆ ಎಂಬ ಬಗ್ಗೆ ವ್ಯಾಪಕ ಆಕ್ರೋಶವುಂಟಾಗಿತ್ತು.

  ವಿವಿಧ ಸಮುದಾಯಗಳು ವ್ಯಾಪಕ ಪ್ರತಿಭಟನೆಗಳನ್ನು ನಡೆಸಿದ ಹೊರತಾಗಿಯೂ ಶ್ರೀಲಂಕಾ ಸರಕಾರವು ಕಳೆದೊಂದು ವರ್ಷದಿಂದ ಕೋವಿಡ್-19 ಸೋಂಕಿನಿಂದ ಮೃತರಾದವರನ್ನು ದಫನ ಮಾಡುವುದಕ್ಕೆ ಅನುಮತಿ ನೀಡಿರಲಿಲ್ಲ.

 ಆದರೆ ಶುಕ್ರವಾರ ಶ್ರೀಲಂಕಾದ ಸೇನಾ ವರಿಷ್ಠ ಜನರಲ್ ಶಾವೇಂದ್ರ ಸಿಲ್ವ ಅವರು ಹೇಳಿಕೆಯೊಂದನ್ನು ನೀಡಿ, ಕೋವಿಡ್-19 ನಿಂದಾಗಿ ಸಾವಿಗೀಡಾದ ಇಬ್ಬರು ವ್ಯಕ್ತಿಗಳನ್ನು ದಫನ ಮಾಡಲು ಅವಕಾಶ ನೀಡಿದೆಯೆಂದು ತಿಳಿಸಿದ್ದಾರೆ. ಆ ಮೂಲಕ ಶ್ರೀಲಂಕಾವು ತನ್ನ ಬಲವಂತದ ಅಂತ್ಯಸಂಸ್ಕಾರ ನೀತಿಯನ್ನು ಕೈಬಿಟ್ಟಿರುವುದು ದೃಢಪಟ್ಟಿದೆಯೆಂದು ಅಸೋಸಿಯೆಟೆಡ್ ಪ್ರೆಸ್ ತಿಳಿಸಿದೆ.

     ಕೊರೋನಾಗೆ ಬಲಿಯಾದವರ ಅಂತ್ಯಸಂಸ್ಕಾರಕ್ಕೆ ಸಂಬಂಧಿಸಿ ಕಳೆದ ವರ್ಷದ ಎಪ್ರಿಲ್‌ನಲ್ಲಿ ಶ್ರೀಲಂಕಾ ಸರಕಾರವು ಗೆಝೆಟ್ ಅಧಿಸೂಚನೆಯಲ್ಲಿ ಶವಗಳ ದಫನವನ್ನು ನಿಷೇಧಿಸಿತ್ತು. ಆದರೆ ಕಳೆದ ತಿಂಗಳು ಕೇಂದ್ರ ಸರಕಾರವು ಅಧಿಸೂಚನೆಯನ್ನು ಪರಿಷ್ಕರಿಸಿತ್ತು. ನೂತನ ಅಧಿಸೂಚನೆಯು ದಫನ ಹಾಗೂ ದಹನ ವಿಧಾನಗಳ ಮೂಲಕ ಶವಸಂಸ್ಕಾರ ನಡೆಸುವುದಕ್ಕೆ ಅವಕಾಶ ನೀಡುತ್ತದೆ.

ಕೊರೋನದಿಂದ ಮೃತಪಟ್ಟ ಇಬ್ಬರ ಮೃತದೇಹಗಳನ್ನು ದಫನ ಮಾಡಲಾಗಿದ್ದು, ಇನ್ನೂ ಐವರನ್ನು ದಫನಗೊಳಿಸಲಾಗುವುದು ಎಂದು ಸಿಲ್ವಾ ಅವರು ಸುದ್ದಿಗಾರರಿಗೆ ತಿಳಿಸಿದರು. ಕೋವಿಡ್-19 ಸೋಂಕಿನಿಂದ ಮೃತಪಟ್ಟವರನ್ನು ದಫನವನ್ನು ನಿಷೇಧಿಸುವ ಶ್ರೀಲಂಕಾದ ನೀತಿಯನ್ನು ಅಂತಾರಾಷ್ಟ್ರೀಯ ಮಾನವಹಕ್ಕು ಸಂಘಟನೆಗಳು ಕೂಡಾ ಖಂಡಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News