ಭಾರತದಿಂದ ಬ್ರಿಟನ್‌ಗೆ ಲಸಿಕೆ ಪೂರೈಕೆಯಿಂದ ಬಡದೇಶಗಳಿಗೆ ಸಮಸ್ಯೆಯಾಗದು: ಬ್ರಿಟಿಶ್ ಸಚಿವ ನದೀಂ ಝಹಾವಿ ಸ್ಪಷ್ಟನೆ

Update: 2021-03-06 17:07 GMT

  ಲಂಡನ್,ಮಾ.6: ಭಾರತದಿಂದ 1 ಕೋಟಿ ಕೋವಿಶೀಲ್ಡ್ ಡೋಸ್‌ಗಳನ್ನು ತರಿಸಿಕೊಳ್ಳುವ ಬ್ರಿಟಿಶ್ ಸರಕಾರದ ನಿರ್ಧಾರವನ್ನು ಬ್ರಿಟನ್‌ನ ಲಸಿಕೆ ನಿಯೋಜನೆ ಸಚಿವ ನದೀಂ ಝಹಾವಿ ಸಮರ್ಥಿಸಿಕೊಂಡಿದ್ದಾರೆ. ಮುಂದುವರಿದ ರಾಷ್ಟ್ರಗಳಿಗೆ ಕಡಿಮೆ ಬೆಲೆಯ ಕೋವಿಡ್-19 ಲಸಿಕೆಗಳನ್ನು ಭಾರೀ ಸಂಖ್ಯೆಯಲ್ಲಿ ಪೂರೈಕೆ ಮಾಡುವುದರಿಂದ ಬಡರಾಷ್ಟ್ರಗಳು ಲಸಿಕೆಗಳ ಅಭಾವವನ್ನು ಎದುರಿಸಬೇಕಾದೀತೆಂಬ ಭೀತಿಯನ್ನು ಅದು ತಳ್ಳಿಹಾಕಿದೆ.

 ಭಾರತ ಸೆರಂ ಸಂಸ್ಥೆಯು ಆಕ್ಸ್‌ಫರ್ಡ್ ವಿವಿ/ ಆಸ್ಟ್ರಾಝೆನೆಕ ಸಂಸ್ಥೆಯ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾಗಿರುವ ಕೋವಿಶೀಲ್ಡ್ ಲಸಿಕೆಗಳನ್ನು ಒಂದು ಪ್ರಮಾಣವನ್ನು ಬ್ರಿಟನ್‌ನನ್ನು ಉದ್ದೇಶಿಸಿಯೇ ಉತ್ಪಾದಿಸಲಾಗುತ್ತಿದೆ. ಅಲ್ಲದೆ ಬ್ರಿಟನ್‌ಗೆ ಲಸಿಕೆಗಳ ಪೂರೈಕೆಯು ಇತರ ರಾಷ್ಟ್ರಗಳಿಗೆ ಲಸಿಕೆಯನ್ನು ಸರಬರಾಜು ಮಾಡುವುದರ ಮೇಲೆ ಪರಿಣಾಮವನ್ನು ಬೀರಕೂಡದು ಎಂಬ ಬಗ್ಗೆ ಸೆರಂ ಸಂಸ್ಥೆಯಿಂದ ಬ್ರಿಟಿಶ್ ಸರಕಾರ ಭರವಸೆಯನ್ನು ಪಡೆದುಕೊಂಡಿದೆಯೆಂದು ಝಹಾವಿ ಅಸೋಸಿಯೇಟೆಡ್ ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ.

‘‘ಸೆರಂ ಸಂಸ್ಥೆಯು ಕಡಿಮೆ ಹಾಗೂ ಮಧ್ಯಮ ಆದಾಯದ ದೇಶಗಳಿಗೆ ಪೂರೈಕೆ ಮಾಡಲು ಸುಮಾರು 30 ಕೋಟಿ ಡೋಸ್‌ಗಳನ್ನು ಉತ್ಪಾದಿಸುತ್ತದೆ. ಘಾನಾ ಹಾಗೂ ಫಿಲಿಪ್ಪಿನ್ಸ್ ಹಾಗೂ ಐವರಿ ಕೋಸ್ಟ್‌ಗೆ ಅದು ಈವಾರ ಲಸಿಕೆಗಳನ್ನು ಪೂರೈಕೆ ಮಾಡಿರುವುದನ್ನು ನೀವು ಕಂಡಿದ್ದೀರಿ’’ ಎಂದು ಝಹಾವಿ ತಿಳಿಸಿದರು.

 ಬ್ರಿಟನ್‌ನಂತಹ ಅಭಿವೃದ್ಧಿಹೊಂದಿದ ರಾಷ್ಟ್ರಗಳು ಭಾರತದಿಂದ ಲಸಿಕೆಗಳನ್ನು ತರಿಸಿಕೊಳ್ಳುವುದರಿಂದ ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಲಸಿಕೆ ಪೂರೈಕೆಯು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಲಿದೆ ಎಂದು ಮೆಡಿಸಿನ್ಸ್ ಸ್ಯಾನ್ಸ್ ಫ್ರಂಟಿಯರ್ಸ್‌ (ಎಂಎಸ್‌ಎಫ್) ಸೇರಿದಂತೆ ವಿವಿಧ ಸರಕಾರೇತರ ಸಂಸ್ಥೆಗಳು ಕಳವಳ ವ್ಯಕ್ತಪಡಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News