ಅಂಬಾನಿ ಮನೆ ಬಳಿ ಸ್ಫೋಟಕವಿದ್ದ ಕಾರಿನ ಮಾಲಕನ ಸಾವಿನ ಪ್ರಕರಣದಲ್ಲಿ ರಾಜಕೀಯ ಬೇಡ: ಶಿವಸೇನೆ

Update: 2021-03-06 17:24 GMT

ಮುಂಬೈ, ಮಾ.6: ಉದ್ಯಮಿ ಮುಕೇಶ್ ಅಂಬಾನಿ ಮನೆ ಬಳಿ ಪತ್ತೆಯಾಗಿದ್ದ ಸ್ಫೋಟಕ ತುಂಬಿದ್ದ ಕಾರಿನ ಪ್ರಕರಣಕ್ಕೆ ಸಂಬಂಧಿಸಿದ ವ್ಯಕ್ತಿ ಹಿರೇನ್ ಮನ್ಸುಖ್ ಸಾವಿನ ವಿಷಯದಲ್ಲಿ ರಾಜಕೀಯ ಸಲ್ಲದು. ಈ ಸಾವಿನ ಹಿಂದಿರುವ ಸತ್ಯವನ್ನು ಬಹಿರಂಗಗೊಳಿಸುವುದು ಮಹಾರಾಷ್ಟ್ರ ಸರಕಾರದ ಪ್ರತಿಷ್ಠೆಯ ನಿಟ್ಟಿನಲ್ಲಿ ಮಹತ್ವದ್ದಾಗಿದೆ ಎಂದು ಶಿವಸೇನಾ ಮುಖಂಡ ಸಂಜಯ್ ರಾವತ್ ಹೇಳಿದ್ದಾರೆ.

ಥಾಣೆಯ ಮುಂಬ್ರಾ-ರೇಟಿ ಬಂದರ್ ರಸ್ತೆಯ ಬಳಿಯ ಕೊರಕಲಿನಲ್ಲಿ 45 ವರ್ಷದ ಹಿರೇನ್ ಮನ್ಸುಖ್ ಮೃತದೇಹ ಶುಕ್ರವಾರ ಪತ್ತೆಯಾಗಿರುವುದಾಗಿ ಪೊಲೀಸರು ಹೇಳಿದ್ದರು. ‘ಮನ್ಸುಖ್ ಸಾವು ಅತ್ಯಂತ ಆಘಾತಕಾರಿ ಮತ್ತು ದುರದೃಷ್ಟಕರ. ಇದನ್ನು ರಾಜಕೀಯಗೊಳಿಸಿ ಮಹಾರಾಷ್ಟ್ರ ಸರಕಾರವನ್ನು ಅಪರಾಧಿ ಸ್ಥಾನದಲ್ಲಿ ಇರಿಸುವುದು ಸರಿಯಲ್ಲ. ಮನ್ಸುಖ್ ಸಾವು ಆತ್ಮಹತ್ಯೆಯೇ, ಕೊಲೆಯೇ ಎಂಬುದು ಸ್ಪಷ್ಟವಾಗಿಲ್ಲ. ಅವರು ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದರು. ಈ ಪ್ರಕರಣದ ಸತ್ಯವನ್ನು ಗೃಹ ಇಲಾಖೆ ತ್ವರಿತವಾಗಿ ಹೊರಗೆ ತರಬೇಕಾಗಿದೆ. ಯಾಕೆಂದರೆ ಇದು ಮಹಾ ವಿಕಾಸ್ ಅಘಾಡಿ ಸರಕಾರದ ಪ್ರತಿಷ್ಠೆಯ ಪ್ರಶ್ನೆಯಾಗಿದೆ ’ ಎಂದು ಸಂಜಯ್ ರಾವತ್ ಹೇಳಿದ್ದಾರೆ.

ಸಾವಿನ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ(ಎನ್‌ಐಎ)ಗೆ ವಹಿಸುವಂತೆ ವಿರೋಧ ಪಕ್ಷ ಬಿಜೆಪಿ ಒತ್ತಾಯಿಸಿತ್ತು. ಆದರೆ ಸರಕಾರ ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್)ಗೆ ತನಿಖೆಯನ್ನು ಹಸ್ತಾಂತರಿಸಿದೆ.

ಈ ಮಧ್ಯೆ, ಮನ್ಸುಖ್ ಅವರ ಮರಣೋತ್ತರ ಪರೀಕ್ಷೆ ಸಂದರ್ಭ ಎನ್‌ಕೌಂಟರ್ ಸ್ಪೆಷಲಿಸ್ಟ್ ಪೊಲೀಸ್ ಅಧಿಕಾರಿಯೊಬ್ಬರು ಉಪಸ್ಥಿತರಿದ್ದ ಬಗ್ಗೆ ಬಿಜೆಪಿ ಮುಖಂಡ ಆಶೀಷ್ ಶೆಲರ್ ಆಕ್ಷೇಪ ಸೂಚಿಸಿದ್ದಾರೆ. ‘ಈ ಅಧಿಕಾರಿ ಥಾಣೆ ಪೊಲೀಸ್ ವಿಭಾಗದವರಲ್ಲ ಅಥವಾ ಎಟಿಎಸ್ ಸದಸ್ಯರಲ್ಲ. ಇದನ್ನು ನೋಡಿದಾಗ ಸರಕಾರ ಯಾವುದೋ ಮಾಹಿತಿಯನ್ನು ಬಚ್ಚಿಡಲು ಪ್ರಯತ್ನಿಸುತ್ತಿದೆ ಎಂಬ ಶಂಕೆ ಮೂಡುತ್ತಿದೆ. ಅಲ್ಲದೆ , ಥಾಣೆ ಮತ್ತು ಮುಂಬೈ ಪೊಲೀಸರ ಕಾರ್ಯಕ್ಷಮತೆಯನ್ನು ಶ್ಲಾಘಿಸಿದ್ದ ರಾಜ್ಯದ ಗೃಹಸಚಿವರು , ಅರ್ಧ ಘಂಟೆಯಲ್ಲೇ ಯು-ಟರ್ನ್ ಹೊಡೆದು ತನಿಖೆಯನ್ನು ಎಟಿಎಸ್‌ಗೆ ವಹಿಸಿದ್ದಾರೆ. ಈ ಅರ್ಧಗಂಟೆಯಲ್ಲಿ ಏನೋ ನಡೆದಿದೆ ’ ಎಂದವರು ಹೇಳಿದ್ದಾರೆ.

ಮನ್ಸುಖ್ ಸಾವಿನ ಪ್ರಕರಣವನ್ನು ಹಾಲಿ ನ್ಯಾಯಾಧೀಶರ ನೇತೃತ್ವದ ಸಮಿತಿಗೆ ವಹಿಸುವಂತೆ ಎಂಎನ್‌ಎಸ್ ಮುಖಂಡ ಸಂದೀಪ್ ದೇಶಪಾಂಡೆ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News