ತಮಿಳುನಾಡು: ತೆರಿಗೆ ದಾಳಿಯಲ್ಲಿ 1,000 ಕೋಟಿ ಮೊತ್ತದ ಅಘೋಷಿತ ಆದಾಯ ಪತ್ತೆ

Update: 2021-03-07 16:47 GMT

ಹೊಸದಿಲ್ಲಿ, ಮಾ.7: ತಮಿಳುನಾಡಿನಲ್ಲಿ ಮಾರ್ಚ್ 4ರಂದು ವಿವಿಧೆಡೆ ನಡೆಸಿದ ದಾಳಿಯಲ್ಲಿ 1,000 ಕೋಟಿ ರೂ.ಗೂ ಅಧಿಕ ಅಘೋಷಿತ ಆದಾಯ ಪತ್ತೆಯಾಗಿದೆ ಎಂದು ತೆರಿಗೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ತಮಿಳುನಾಡು ಮೂಲದ ಚಿನ್ನದ ಗಟ್ಟಿ ಮಾರಾಟ ಸಂಸ್ಥೆ , ಹಾಗೂ ದಕ್ಷಿಣ ಭಾರತದ ಬೃಹತ್ ಚಿನ್ನಾಭರಣ ಸಂಸ್ಥೆ ಚೆನ್ನೈ, ಮುಂಬೈ, ಕೊಯಂಬತ್ತೂರು, ಮದುರೈ, ತಿರುಚಿನಾಪಳ್ಳಿ, ತ್ರಿಶ್ಯೂರು, ನೆಲ್ಲೋರ್,ಜೈಪುರ ಮತ್ತು ಇಂದೋರ್ನಲ್ಲಿ ಹೊಂದಿರುವ 27 ಶಾಖೆಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. ದಾಳಿಯಲ್ಲಿ 1.2 ಕೋಟಿ ರೂ. ಕಪ್ಪು ಹಣವನ್ನೂ ವಶಕ್ಕೆ ಪಡೆಯಲಾಗಿದೆ.

ದಾಖಲೆ ರಹಿತ ನಗದು ವ್ಯವಹಾರ, ಶಾಖೆಗಳಿಂದ ನಕಲಿ ರಶೀದಿ, ಖರೀದಿಗೆ ಮುಂಗಡ ನೀಡಿರುವಂತೆ ತೋರಿಸಲು ನಕಲಿ ಖಾತೆಗಳಲ್ಲಿ ಕ್ಯಾಷ್ ಕ್ರೆಡಿಟ್ ನೀಡಿರುವುದು, ನೋಟು ಅಮಾನ್ಯೀಕರಣ ಸಂದರ್ಭದಲ್ಲಿ ದಾಖಲೆ ರಹಿತ ನಗದು ಠೇವಣಿ ಮುಂತಾದ ವ್ಯವಹಾರ ನಡೆದಿರುವ ಬಗ್ಗೆ ಚಿನ್ನದ ಗಟ್ಟಿ ಮಾರಾಟಗಾರರ ಕಚೇರಿಯಲ್ಲಿ ಪುರಾವೆ ಲಭಿಸಿದೆ ಎಂದು ಸಿಬಿಡಿಟಿ(ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸಸ್) ಅಧಿಕಾರಿಗಳು ಹೇಳಿದ್ದಾರೆ.

ಚಿನ್ನಾಭರಣ ಸಂಸ್ಥೆಯು ಸ್ಥಳೀಯ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದಿರುವುದು ಮತ್ತು ಮರುಪಾವತಿ, ಬಿಲ್ಡರ್ ಗಳಿಗೆ ನಗದು ಸಾಲ ನೀಡಿರುವುದು ಮತ್ತು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಹೂಡಿಕೆ ಮಾಡಿರುವುದು ಬೆಳಕಿಗೆ ಬಂದಿದೆ. ಸಂಸ್ಥೆಯು ದಾಖಲೆ ರಹಿತ ಚಿನ್ನದ ಗಟ್ಟಿ ಖರೀದಿ ನಡೆಸಿದೆ. ಕೆಟ್ಟ ಸಾಲ(ಬ್ಯಾಡ್ ಡೆಟ್)ದ ಬಗ್ಗೆ ತಪ್ಪು ಮಾಹಿತಿ, ಹಳೆಯ ಚಿನ್ನಗಳನ್ನು ಹೊಸ ಚಿನ್ನದೊಂದಿಗೆ ವಿನಿಮಯ ಮಾಡಿಕೊಳ್ಳುವಾಗ ಮತ್ತು ಚಿನ್ನಾಭರಣ ತಯಾರಿಸುವಾಗ ಅಧಿಕ ವೇಸ್ಟೇಜ್ ತೋರಿಸಲಾಗಿದೆ ಎಂದು ತೆರಿಗೆ ಇಲಾಖೆ ಮಾಹಿತಿ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News