7,500ನೇ ಜನೌಷಧಿ ಕೇಂದ್ರವನ್ನು ದೇಶಕ್ಕೆ ಸಮರ್ಪಿಸಿದ ಪ್ರಧಾನಿ ಮೋದಿ

Update: 2021-03-07 16:43 GMT

ಹೊಸದಿಲ್ಲಿ, ಮಾ.7: ಪ್ರಧಾನ ಮಂತ್ರಿ ನರೇಂದ್ರ ಮೋದಿ ರವಿವಾರ ಶಿಲಾಂಗ್ ನಲ್ಲಿ 7,500ನೇ ಜನೌಷಧಿ ಕೇಂದ್ರವನ್ನು ದೇಶಕ್ಕೆ ಸಮರ್ಪಿಸಿದ್ದಾರೆ. ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ದೇಶದ ವಿವಿಧೆಡೆಯ ಜನರೊಂದಿಗೆ ಸಂವಾದ ನಡೆಸಿದರು.

ಶಿಲಾಂಗ್ನ ನಾರ್ಥ್ ಈಸ್ಟರ್ನ್ ಇಂದಿರಾಗಾಂಧಿ ರೀಜನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಆ್ಯಂಡ್ ಮೆಡಿಕಲ್ ಸೈಯನ್ಸ್‌ ನಲ್ಲಿ ಈ ಜನೌಷಧಿ ಕೇಂದ್ರ ಕಾರ್ಯಾಚರಿಸಲಿದೆ. ಈ ಸಂದರ್ಭ ಮಾತನಾಡಿದ ಪ್ರಧಾನಿ, ತಮ್ಮ ಸರಕಾರ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿ ಕೈಗೊಂಡಿರುವ ಹಲವು ಕ್ರಮಗಳಿಂದಾಗಿ ಮತ್ತು ಕಡಿಮೆ ಬೆಲೆಯಲ್ಲಿ ಔಷಧದ ಪೂರೈಕೆಯಿಂದಾಗಿ ಬಡವರು ಮತ್ತು ಔಷಧದ ಅಗತ್ಯವಿರುವವರು ವಾರ್ಷಿಕ ಸುಮಾರು 50,000 ಕೋಟಿ ರೂ. ಉಳಿಸಲು ಸಾಧ್ಯವಾಗಿದೆ ಎಂದರು.

ವೈದ್ಯಕೀಯ ವಿಜ್ಞಾನದ ಸೌಲಭ್ಯಗಳಿಂದ ಯಾರೂ ವಂಚಿತರಾಗಬಾರದು ಮತ್ತು ಔಷಧಿಗಳು ಅಗ್ಗದ ಮತ್ತು ಕೈಗೆಟಕುವ ದರದಲ್ಲಿ ದೊರಕಬೇಕು ಎಂಬುದು ಸರಕಾರದ ಉದ್ದೇಶವಾಗಿದೆ. ಬುಡಕಟ್ಟು ಸಮುದಾಯದ ಹಿತಚಿಂತನೆಗಾಗಿ ಶಿಲಾಂಗ್ನಲ್ಲಿ ಜನೌಷಧಿ ಕೇಂದ್ರ ಬಾಗಿಲು ತೆರೆದಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕೇಂದ್ರಗಳನ್ನು ತೆರೆಯಲಾಗುವುದು. ಜನೌಷಧಿ ಕೇಂದ್ರಗಳು ಬಡ ಮತ್ತು ಮಧ್ಯಮ ವರ್ಗದ ಜನತೆಯ ಆಪ್ತ ಸಂಗಾತಿಗಳಾಗಿವೆ ಎಂದು ಇಂದು ನಡೆದ ಸಂವಾದದಲ್ಲಿ ಭಾಗವಹಿಸಿದ್ದ ದೇಶದಾದ್ಯಂತದ ಜನತೆ ಹೇಳಿದ್ದಾರೆ. ಆಯುಷ್ಮಾನ್ ಭಾರತ್ ಯೋಜನೆಯೂ ಬಡ ಜನರಿಗೆ ನೆರವಾಗಿದೆ ಎಂದು ನರೇಂದ್ರ ಮೋದಿ ಹೇಳಿದರು.

2014ರಲ್ಲಿ 86 ಜನೌಷಧಿ ಕೇಂದ್ರಗಳಿದ್ದವು, ಈಗ ದೇಶದ ಎಲ್ಲಾ ಜಿಲ್ಲೆಗಳಲ್ಲೂ ಈ ಕೇಂದ್ರಗಳು ವ್ಯಾಪಿಸಿವೆ. ಜನೌಷಧಿಯ ಬಗ್ಗೆ ಜನಜಾಗೃತಿ ಮೂಡಿಸಲು ಮಾರ್ಚ್ 1ರಿಂದ 7ರವರೆಗೆ ಜನೌಷಧಿ ಸಪ್ತಾಹ ಆರಂಭಿಸಲಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News