ಮಹಿಳೆಗೆ ಸಂವಿಧಾನ ಎಂಬ ಆಸರೆ

Update: 2021-03-07 19:30 GMT

ಪುರುಷ ಮತ್ತು ಮಹಿಳೆ ಪರಸ್ಪರ ಜೊತೆಗೂಡಿಯೇ ಮನೆಯನ್ನು ಮಾತ್ರವಲ್ಲ ಬಹುತ್ವ ಭಾರತವನ್ನು ನಿಜವಾದ ಅರ್ಥದಲ್ಲಿ ಕಟ್ಟಬೇಕಾಗಿದೆ. ಯಾರೂ ಮೇಲಲ್ಲ, ಯಾರೂ ಕೀಳಲ್ಲ. ಉಸಿರಾಡುವ ಗಾಳಿಗೆ, ನಡೆಯುವ ಭೂಮಿಗೆ, ಕುಡಿಯುವ ನೀರಿಗೆ ಲಿಂಗಭೇದ, ಜಾತಿಭೇದವಿಲ್ಲ. ನಾವು ಮನುಷ್ಯರು ಕಟ್ಟಿಕೊಂಡ ಈ ಕೃತಕ ಗೋಡೆಗಳನ್ನು ಕೆಡವಿ ಇಡೀ ಮನುಕುಲಕ್ಕೆ ತಾಯ್ತನದ ಸ್ಪರ್ಶ ನೀಡುವ ದಿಕ್ಕಿನಲ್ಲಿ ಹೊಸ ಕಾಲದ ಮಹಿಳಾ ಆಂದೋಲನ ಸಾಗಬೇಕಾಗಿದೆ.


ಭಾರತವನ್ನು ವಿಶ್ವಗುರುವನ್ನಾಗಿ ಮಾಡುವ ಮಾತುಗಳನ್ನು ಕೇಳುತ್ತಿರುವಾಗಲೇ ಇನ್ನೊಂದೆಡೆ ಸುಪ್ರೀಂ ಕೋರ್ಟಿನಲ್ಲಿ ‘‘ನೀನು ಆಕೆಯನ್ನು ಮದುವೆಯಾಗುತ್ತೀಯಾ?’’ ಎಂದು ಅತ್ಯಾಚಾರ ಮಾಡಿದವನನ್ನು ಮುಖ್ಯ ನ್ಯಾಯಮೂರ್ತಿಗಳು ಕೇಳಿದ ಪ್ರಶ್ನೆ ಸಹಜವಾಗಿ ವಿವಾದದ ಅಲೆಯನ್ನೆಬ್ಬಿಸಿದೆ. ಮಹಿಳಾ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಈ ಸಲದ ಮಹಿಳಾ ದಿನಾಚರಣೆಯಲ್ಲಿ ಕೂಡ ಈ ಸಾತ್ವಿಕ ಸಿಟ್ಟು ಪ್ರತಿಧ್ವನಿಸಲಿದೆ. ನಮ್ಮ ಸಮಾಜದ ಜೀವ ಶಕ್ತಿಯಾಗಿರುವ ಸಕಲ ಜೀವಿಗಳನ್ನು ಪೊರೆಯುವ ಹೆಣ್ಣು ಜೀವದ ಬಗೆಗಿನ ಪುರುಷ ಪ್ರಧಾನ ಸಮಾಜದ ಪಕ್ಷಪಾತಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಭಾರತ ಮಾತ್ರವಲ್ಲ ಜಗತ್ತಿನೆಲ್ಲೆಡೆ ಇದೇ ಕಥೆ, ಇದೇ ವ್ಯಥೆ. ಅಂತಲೇ ಗುಲಾಮರ ಗುಲಾಮಳು ಮಹಿಳೆ ಎಂದು ಮಾರ್ಕ್ಸ್ ಆತ್ಮಬಂಧು ಎಂಗೆಲ್ಸ್ ಗುರುತಿಸಿದರು.

ಒಂದೆಡೆ ಆತ್ಮ ನಿರ್ಭರದ ಮಾತು ಹೇಳುತ್ತಲೇ ಇನ್ನೊಂದೆಡೆ ಭಾರತವನ್ನು ಶತಮಾನದ ಹಿಂದಿನ ಕತ್ತಲ ಲೋಕಕ್ಕೆ ಕೊಂಡೊಯ್ಯುವ ರಹಸ್ಯ ಕಾರ್ಯಸೂಚಿಗಳು ಹರಿದಾಡುತ್ತಿರುವಾಗಲೇ ದಮನಿತ ಸಮುದಾಯಗಳು ಮತ್ತು ಎಲ್ಲ ಸಮುದಾಯಗಳ ಲಿಂಗ ತಾರತಮ್ಯದ ಉರಿಯಲ್ಲಿ ಬೆಂದು ಹೋಗುತ್ತಿರುವ, ಭ್ರೂಣದಲ್ಲೇ ಹೊಸಕಿ ಹಾಕಲ್ಪಡುತ್ತಿರುವ ಹೆಣ್ಣು ಸಂಕುಲದ ಮಾತು ನಮ್ಮೆಲ್ಲರ ಮಾತಾಗಬೇಕಾಗಿದೆ.

ನಮ್ಮ ಭಾರತ ಒಕ್ಕೂಟಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕಗಳಾದವು. ನಮಗೊಂದು ಸಂವಿಧಾನ ಬಂದು ಆರು ದಶಕಗಳೇ ಗತಿಸಿದವು. ಮಹಿಳೆಗೆ ಸೀಮಿತವಾಗಿ ಹೇಳುವುದಾದರೆ ಸಂವಿಧಾನ ಎಂಬುದು ಬರುವ ಮೊದಲು ಮನುಸ್ಮತಿಯೇ ಇಲ್ಲಿನ ಸಂವಿಧಾನವಾಗಿತ್ತು. ಆ ಮನು ಸಂವಿಧಾನದ ಪ್ರಕಾರ ಗಂಡನೆಂಬವ ಕಾಯಿಲೆ ಕಸಾಲೆಯಿಂದ ಸತ್ತರೆ ಅವನ ಹೆಂಡತಿಯೂ ಚಿತೆಯೇರಬೇಕಾಗಿತ್ತು. ಮನುಧರ್ಮದ ಕಟ್ಟುಪಾಡುಗಳನ್ನು ಬರೆಯುತ್ತ ಹೋದರೆ ಈ ಅಂಕಣದ ಮಿತಿ ದಾಟಬೇಕಾಗುತ್ತದೆ. ಅದೀಗ ಅಪ್ರಸ್ತುತ.

ಈಗ ನಾವು ಅಂಗೀಕರಿಸಿದ ಸಂವಿಧಾನದ ಬಗ್ಗೆ ಯೋಚಿಸೋಣ. ಬಾಬಾಸಾಹೇಬ ಅಂಬೇಡ್ಕರ್ ಅವರ ನೇತೃತ್ವದಲ್ಲಿ ರೂಪುಗೊಂಡ ಈ ಸಂವಿಧಾನ ಮನುಧರ್ಮದ ಭಯಾನಕ ಬಂಧನದಿಂದ ಮಹಿಳೆಯನ್ನು ಮುಕ್ತಗೊಳಿಸಿತು. ಸಂವಿಧಾನವೇನೋ ಮುಕ್ತಗೊಳಿಸಿತು. ಆದರೆ ನಮ್ಮ ಸಮಾಜ ಇನ್ನೂ ಪುರುಷ ಪ್ರಧಾನ ಕುಮೌಲ್ಯಗಳ ಹೆಣಭಾರ ಹೊತ್ತು ತೇಕುತ್ತಿದೆ. ಮಹಿಳೆ ಇಂದು ಏನಾದರೂ ಸಾಧಿಸಿದ್ದರೆ ಅದಕ್ಕೆ ಸಂವಿಧಾನದ ಕಾನೂನಿನ ಬಲ ಮಾತ್ರವಲ್ಲ ಆಕೆಯ ಅಪಾರ ಶ್ರದ್ಧೆಯ ದುಡಿಮೆಯೂ ಇದಕ್ಕೆ ಕಾರಣ.

ಸಂವಿಧಾನದಲ್ಲಿ ಲಿಂಗ ತಾರತಮ್ಯ ಮಾಡದೆ ಮಹಿಳೆಯರಿಗೆ ಸಮಾನಾವಕಾಶ ನೀಡುವ ಬಗ್ಗೆ ಸ್ಪಷ್ಟ ಉಲ್ಲೇಖವಿದೆ. ತಮಗೆ ಸಂವಿಧಾನಾತ್ಮಕವಾಗಿ ದೊರೆತ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡ ಹೆಣ್ಣು ಮಕ್ಕಳು ದೇಶದ ಸಾವಿರಾರು ಹಳ್ಳಿಗಳಲ್ಲಿ ಗ್ರಾಮ ಪಂಚಾಯತ್ ಸದಸ್ಯರಾಗಿ, ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷರಾಗಿ ಹಾಗೂ ವಿಧಾನಸಭೆ, ಲೋಕಸಭೆ, ರಾಜ್ಯಸಭೆಗಳಲ್ಲಿ ಪ್ರಾತಿನಿಧ್ಯ ಪಡೆದು ದಕ್ಷವಾಗಿ ಕಾರ್ಯನಿರ್ವಹಿಸುತ್ತಿರುವ ನೂರಾರು ಉದಾಹರಣೆಗಳಿವೆ. ಅಷ್ಟೇ ಅಲ್ಲ ಜಿಲ್ಲಾಧಿಕಾರಿಗಳಾಗಿ, ಶಿಕ್ಷಕಿಯರಾಗಿ, ವಿಜ್ಞಾನಿಗಳಾಗಿ, ದಾದಿಯರಾಗಿ, ಸಾರಿಗೆ ಬಸ್‌ಗಳ ನಿರ್ವಾಹಕರಾಗಿ, ಪೌರ ಕಾರ್ಮಿಕರಾಗಿ, ಹೀಗೆ ನಾನಾ ಕ್ಷೇತ್ರಗಳಲ್ಲಿ ಪುರುಷರಿಗಿಂತ ದಕ್ಷವಾಗಿ, ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಾರ್ವಜನಿಕ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಮಹಿಳೆಯರ ಮೇಲೆ ಸಣ್ಣಪುಟ್ಟ ಭ್ರಷ್ಟಾಚಾರ ಮತ್ತಿತರ ಆರೋಪಗಳಿಲ್ಲವೆಂದಲ್ಲ, ಇದ್ದರೂ ಇದರ ತೆರೆಮರೆಯಲ್ಲಿ ಅವರ ಗಂಡಂದಿರ ಗುಪ್ತ ಕೈವಾಡವಿರುವುದೂ ಸುಳ್ಳಲ್ಲ.

ಸಂವಿಧಾನ ಇಷ್ಟೆಲ್ಲ ರಕ್ಷಣೆ ನೀಡಿದ್ದರೂ ಜಾತಿ ಮತ್ತು ವರ್ಗ ಸಮಾಜದಲ್ಲಿ ದಲಿತ ಬಡ ಮಹಿಳೆಯರ ಪಾಲಿಗೆ ಅದು ಇನ್ನೂ ನಿಜವಾದ ಅರ್ಥದಲ್ಲಿ ದಕ್ಕಿಲ್ಲ.ಅಂತಲೇ ಖೈರ್ಲಾಂಜಿಯಂತಹ ಘಟನೆಗಳು ಮತ್ತೆ ಮತ್ತೆ ಸಂಭವಿಸುತ್ತಲೇ ಇವೆ.

ಮಹಿಳಾ ದಿನದ ಈ ಸಂದರ್ಭದಲ್ಲಿ ಸಂವಿಧಾನದಲ್ಲಿ ಮಹಿಳೆಯರಿಗಾಗಿ ಹಲವಾರು ಹಕ್ಕುಗಳನ್ನು ನೀಡಲು ಶ್ರಮಿಸಿದ ಅಂಬೇಡ್ಕರ್ ಅವರು ಮಹಿಳೆಯರ ಆಸ್ತಿ ಹಕ್ಕಿಗಾಗಿ ತಮ್ಮ ಕೇಂದ್ರ ಮಂತ್ರಿ ಸ್ಥಾನಕ್ಕೇ ರಾಜೀನಾಮೆ ನೀಡಿದ ಚಾರಿತ್ರಿಕ ಘಟನೆ ಮತ್ತೆ ಮತ್ತೆ ನೆನಪಾಗುತ್ತದೆ.

ಸಂವಿಧಾನವನ್ನು ಅಂಗೀಕರಿಸಿದ ನಂತರ ಜವಾಹರಲಾಲ್ ನೆಹರೂ ಸಂಪುಟದಲ್ಲಿ ಡಾ. ಅಂಬೇಡ್ಕರ್ ಕಾನೂನು ಸಚಿವರಾಗಿರುತ್ತಾರೆ. ಆಗ ಭಾರತೀಯ ಸಮಾಜದಲ್ಲಿ ಪಿತ್ರಾರ್ಜಿತ ಆಸ್ತಿಯಲ್ಲಿ ಮಹಿಳೆಯರಿಗೆ ಸಮಪಾಲು ಇರುವುದಿಲ್ಲ. ಕಾನೂನು ಸಚಿವರಾದ ಅಂಬೇಡ್ಕರ್ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಸಮಪಾಲು ನೀಡುವ ವಿಧೇಯಕವನ್ನು ಸದನದ ಮುಂದೆ ಮಂಡಿಸಲು ಸಿದ್ಧವಾಗಿರುತ್ತಾರೆ. ಆಗ ರೊಚ್ಚಿಗೆದ್ದ ಮನುವಾದಿ ಹಿಂದುತ್ವವಾದಿಗಳು ದೇಶ ವ್ಯಾಪಿ ಪ್ರತಿಭಟನೆ ನಡೆಸುತ್ತಾರೆ. ರಾಜಧಾನಿ ದಿಲ್ಲಿಯಲ್ಲಿ ಹಿಂದುತ್ವವಾದಿ ಸಂಘಟನೆಗಳ ನಾಯಕ ಕರಪಾತ್ರಜಿ ಮಹಾರಾಜರು ದಿಲ್ಲಿಯ ರಾಮಲೀಲಾ ಮೈದಾನದಲ್ಲಿ ಸಾವಿರಾರು ಜನರನ್ನು ಸೇರಿಸಿ, ‘‘ನಮ್ಮ ಧರ್ಮದಲ್ಲಿ ಕೈ ಹಾಕಿದರೆ ಜೋಕೆ’’ ಎಂದು ಬೆದರಿಕೆ ಹಾಕುತ್ತಾರೆ. ‘‘ನಾವು ಅಸ್ಪಶ್ಯನೆಂದು ಹೊರಗಿಟ್ಟವನು ನಮ್ಮ ಧರ್ಮ ಶಾಸ್ತ್ರ ಬದಲಿಸಲು ಬಿಡುವುದಿಲ್ಲ. ಹೆಣ್ಣಿಗೆ ಸಮಪಾಲು ನೀಡುವುದಿಲ್ಲ. ಅದು ಗಂಡು ಸಂತಾನಕ್ಕೆ ಮಾತ್ರ ಸೇರಿದ್ದು’’ ಎಂದು ಅರಚಾಡುತ್ತಾರೆ.

ಮಹಿಳೆಯರಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಪಾಲು ನೀಡುವ ಹಿಂದೂಕೋಡ್ ಬಿಲ್‌ಗೆ ಸಂಪ್ರದಾಯ ವಾದಿಗಳಿಂದ ವಿರೋಧ ಬಂದಾಗ ಪ್ರಧಾನಿ ನೆಹರೂ ಗಾಬರಿಯಾಗುತ್ತಾರೆ. ಮುಂದೆ ಕೆಲವೇ ತಿಂಗಳುಗಳಲ್ಲಿ (1952ರಲ್ಲಿ) ಸಾರ್ವತ್ರಿಕ ಚುನಾವಣೆಗಳನ್ನು ಎದುರಿಸಬೇಕಾಗಿರುತ್ತದೆ. ಅಂತಲೇ ದಿಗಿಲುಗೊಂಡ ನೆಹರೂ ಹಿಂದೂ ಕೋಡ್ ಬಿಲ್‌ಗೆ ತಂದಿರುವ ತಿದ್ದುಪಡಿಯನ್ನು ಸದನದ ಮುಂದಿಡಬಾರದು ವಾಪಸು ಪಡೆಯಬೇಕೆಂದು ಕಾನೂನು ಮಂತ್ರಿ ಡಾ.ಅಂಬೇಡ್ಕರ್ ಅವರಿಗೆ ಪತ್ರ ಕಳಿಸುತ್ತಾರೆ. ಬೇರೆ ಯಾರೇ ಆಗಿದ್ದರೂ ಪ್ರಧಾನಿ ಕಳಿಸಿದ ಪತ್ರ ಎಂದು ಶಿರಸಾ ವಹಿಸಿ ಪಾಲಿಸುತ್ತಿದ್ದರು. ಆದರೆ ಅಂಬೇಡ್ಕರ್ ಏನು ಮಾಡಿದರು ಗೊತ್ತೇ? ಪ್ರಧಾನಿ ನೆಹರೂ ಕಳಿಸಿದ ಪತ್ರವನ್ನು ಬದಿಗಿಟ್ಟು, ಪ್ರಧಾನಿಗೆ ತಮ್ಮ ರಾಜೀನಾಮೆ ಕೊಟ್ಟು ಕಳಿಸುತ್ತಾರೆ. ಬಾಬಾಸಾಹೇಬರು ನಂಬಿದ ಸಿದ್ಧಾಂತ ಮತ್ತು ಸ್ವಾಭಿಮಾನದ ಪ್ರಶ್ನೆಯಲ್ಲಿ ಎಂದೂ ರಾಜಿ ಮಾಡಿಕೊಳ್ಳುತ್ತಿರಲಿಲ್ಲ.

ಅಂಬೇಡ್ಕರ್ ಬಗ್ಗೆ ಮಾತಾಡುವಾಗ ಅವರನ್ನು ಕೇವಲ ದಲಿತ ನಾಯಕ ಎಂದು ಬಿಂಬಿಸುತ್ತಾ ಬರಲಾಗಿದೆ. ಆದರೆ ಅವರು ಸಂವಿಧಾನದಲ್ಲಿ ದಲಿತರಿಗಿಂತ ಉಳಿದೆಲ್ಲ ಶೋಷಿತ ಸಮುದಾಯಗಳಿಗೆ, ಕಾರ್ಮಿಕರಿಗೆ, ರೈತರಿಗೆ, ಮಹಿಳೆಯರಿಗೆ ನೀಡಿರುವ ಕೊಡುಗೆ ದೊಡ್ಡದು. ಪಿತ್ರಾರ್ಜಿತ ಆಸ್ತಿಯಲ್ಲಿ ಸಮಪಾಲು ನೀಡುವ ಪ್ರಶ್ನೆಯಲ್ಲಿ ಅವರು ತಮ್ಮ ಮಂತ್ರಿಸ್ಥಾನಕ್ಕೆ ರಾಜೀನಾಮೆ ಬಿಸಾಕಿದರು. ವಾಸ್ತವವಾಗಿ ಈ ಆಸ್ತಿಹಕ್ಕು ದಲಿತ ಮಹಿಳೆಯರಿಗೆ ಅಷ್ಟಾಗಿ ಅನ್ವಯಿಸುವುದಿಲ್ಲ. ದಲಿತರಿಗೆ ತಮ್ಮದೆನ್ನುವ ಆಸ್ತಿಯೇ ಇರುವುದಿಲ್ಲ. ಇದು ಅನ್ವಯವಾಗುವುದು ಸವರ್ಣೀಯ ಮೇಲ್ವರ್ಗದ ಆಸ್ತಿಯುಳ್ಳ ವರ್ಗಗಳ ಮಹಿಳೆಯರಿಗೆ.ಇಲ್ಲೇ ಅಂಬೇಡ್ಕರ್ ಎಂತಹವರೆಂಬುದು ಗೊತ್ತಾಗುತ್ತದೆ.

ನಂತರ ಮಹಿಳೆಯರಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕು ನೀಡುವ ತಿದ್ದುಪಡಿಯನ್ನು ಸಂಸತ್ತು ತುಂಬಾ ತಡವಾಗಿ ಅನುಮೋದಿಸಿತು. ಆದರೆ ಆಸ್ತಿ ಇಲ್ಲದ ಜನ ವರ್ಗಗಳಲ್ಲಿ ಹೆಣ್ಣು ಮಕ್ಕಳ ಶೋಷಣೆ ಇನ್ನೂ ಕೊನೆಗೊಂಡಿಲ್ಲ. ಭ್ರೂಣಹತ್ಯೆ, ಹೆಣ್ಣು ಕೂಸುಗಳ ಮಾರಾಟ ನಡೆಯುತ್ತಲೇ ಇವೆ. ಆದರೂ ಉಸಿರಾಡುವ ವಾತಾವರಣ ನಿರ್ಮಾಣವಾಗಿದ್ದು ಸುಳ್ಳಲ್ಲ.

ಯಾವುದೇ ಸಮಾಜವಿರಲಿ ಹೆಣ್ಣು ಮತ್ತು ಗಂಡು ಸಹಜೀವಿಗಳು. ದಾಂಪತ್ಯದಲ್ಲೂ ಪರಸ್ಪರ ಗೌರವವನ್ನು ಇಟ್ಟುಕೊಂಡು ಒಬ್ಬರು ಇನ್ನೊಬ್ಬರ ಖಾಸಗಿತನದಲ್ಲಿ ಕೈ ಹಾಕದೆ ಬದುಕಿದರೆ ಬದುಕು ಸಹನೀಯವಾಗುತ್ತದೆ. ಸಮಾನತೆ ಅಂದರೆ ಈ ಸಹನೀಯವಾದ ಬದುಕು. ಇಂತಹ ಕುಟುಂಬಗಳಲ್ಲಿ ಮಕ್ಕಳ ಭವಿಷ್ಯವೂ ಸುರಕ್ಷಿತವಾಗಿರುತ್ತದೆ.

ಪುರುಷ ಮತ್ತು ಮಹಿಳೆ ಪರಸ್ಪರ ಜೊತೆಗೂಡಿಯೇ ಮನೆಯನ್ನು ಮಾತ್ರವಲ್ಲ ಬಹುತ್ವ ಭಾರತವನ್ನು ನಿಜವಾದ ಅರ್ಥದಲ್ಲಿ ಕಟ್ಟಬೇಕಾಗಿದೆ. ಯಾರೂ ಮೇಲಲ್ಲ, ಯಾರೂ ಕೀಳಲ್ಲ. ಉಸಿರಾಡುವ ಗಾಳಿಗೆ, ನಡೆಯುವ ಭೂಮಿಗೆ, ಕುಡಿಯುವ ನೀರಿಗೆ ಲಿಂಗಭೇದ, ಜಾತಿಭೇದವಿಲ್ಲ. ನಾವು ಮನುಷ್ಯರು ಕಟ್ಟಿಕೊಂಡ ಈ ಕೃತಕ ಗೋಡೆಗಳನ್ನು ಕೆಡವಿ ಇಡೀ ಮನುಕುಲಕ್ಕೆ ತಾಯ್ತನದ ಸ್ಪರ್ಶ ನೀಡುವ ದಿಕ್ಕಿನಲ್ಲಿ ಹೊಸ ಕಾಲದ ಮಹಿಳಾ ಆಂದೋಲನ ಸಾಗಬೇಕಾಗಿದೆ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News