ಜಮ್ಮು ಕಾಶ್ಮೀರ: ವಿದ್ಯಾರ್ಥಿಗಳಿಗಾಗಿ ಬಸ್ ಸ್ಟಾಂಡ್ ಅನ್ನು ‘ಬೀದಿ ಗ್ರಂಥಾಲಯ’ವಾಗಿ ಪರಿವರ್ತಿಸಿದ ಸೇನೆ

Update: 2021-03-07 18:59 GMT

ಅನಂತ್ ನಾಗ್: ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧರಾಗಲು ಹಾಗೂ ಉನ್ನತ ಅಧ್ಯಯನ ನಡೆಸಲು ದಕ್ಷಿಣ ಕಾಶ್ಮೀರದ ಗ್ರಾಮವೊಂದರಲ್ಲಿದ್ದ ಶಿಥಿಲಗೊಂಡ ಬಸ್ ನಿಲ್ದಾಣವನ್ನು ಸೇನೆ ‘ಬೀದಿ ಗ್ರಂಥಾಲಯ’ವಾಗಿ ಪರಿವರ್ತಿಸಿದೆ.

ಸೇನೆಯ 18 ರಾಷ್ಟ್ರೀಯ ರೈಫಲ್ ಫೆಬ್ರವರಿ ಕೊನೆಯ ವಾರದಲ್ಲಿ ಸಿದ್ಧಪಡಿಸಿದ ಈ ಗ್ರಂಥಾಲಯ ಈಗ ರಾಣಿಪುರ, ಚಿಟ್ಟಿಸಿಗ್ಪುರಾ, ಕೇಜ್ರಿವಾಲ್ ಹಾಗೂ ದೇವಿಪೋರಾ ಗ್ರಾಮದ ವಿದ್ಯಾರ್ಥಿಗಳಲ್ಲಿ ಜನಪ್ರಿಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉನ್ನತ ತರಗತಿಯ ವಿದ್ಯಾರ್ಥಿಗಳು ಪುಸ್ತಕಗಳಲ್ಲಿ ಮಗ್ನರಾಗುವುದನ್ನು ನೋಡಿದ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು 18 ರಾಷ್ಟ್ರೀಯ ರೈಫಲ್ಸ್ನ ಕಮಾಂಡಿಂಗ್ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್ ರೋಹಿತ್ ಝಾ ಅವರನ್ನು ಸುತ್ತುವರಿದು ಗ್ರಂಥಾಲಯದಲ್ಲಿ ಕೆಲವು ಕಥೆ ಪುಸ್ತಕಗಳನ್ನು ಇರಿಸುವಂತೆ ಒತ್ತಾಯಿಸಿದ್ದರು. ಕೂಡಲೇ ಝಾ ಅವರು ಆದೇಶ ನೀಡಿ ಸಾಮಾಜಿಕ ಸಂದೇಶ ನೀಡುವ ಹಾಗೂ ಜ್ಞಾನವನ್ನು ಹೆಚ್ಚಿಸುವ ಪುಸ್ತಕಗಳನ್ನು ಇರಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಸ್ ಸ್ಯಾಂಡ್ ಗ್ರಂಥಾಲಯ ಅನಂತ್ನಾಗ್ ಜಿಲ್ಲೆಯ ಚಿಟ್ಟಿಸಿಂಗಪೋರಾದ ಕೇಂದ್ರದಲ್ಲಿ ಇದೆ. ಇದು ಈಗ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುವ ಹಾಗೂ ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳ ಕೇಂದ್ರವಾಗಿದೆ. ಗ್ರಂಥಾಲಯ ಬೆಳಗ್ಗೆ ಬಾಗಿಲು ತೆರೆಯುತ್ತಿದ್ದಂತೆ ಹಿರಿಯ ವಿದ್ಯಾರ್ಥಿಗಳಲ್ಲದೆ, ಕಿರಿಯ ವಿದ್ಯಾರ್ಥಿಗಳು ಕೂಡ ಇಲ್ಲಿಗೆ ಧಾವಿಸುತ್ತಾರೆ.

ಇದರೊಂದಿಗೆ ಕೆಲವು ಪುಸ್ತಕಗಳನ್ನು ಪೂರೈಸಲು ಒಪ್ಪಿಕೊಂಡಿರುವ ಬುಕ್ಸ್ ಆಫ್ ಇಂಡಿಯಾ ಸೊಸೈಟಿಯೊಂದಿಗೆ ಸೇನೆಯ ಘಟಕ ಒಪ್ಪಂದ ಮಾಡಿಕೊಂಡಿದೆ. ‘‘ಪುಸ್ತಕಗಳು ವಿದ್ಯಾರ್ಥಿಗಳ ಮನಸ್ಸಿಗೆ ಶಾಂತಿ ನೀಡುತ್ತದೆ’’ ಎಂದು ಸೇನೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News