×
Ad

ಮ್ಯಾನ್ಮಾರ್: ಪ್ರತಿಭಟನಕಾರರನ್ನು ಒಂದೇ ಜಿಲ್ಲೆಯಲ್ಲಿ ಕೂಡಿ ಹಾಕಿದ ಪೊಲೀಸರು

Update: 2021-03-09 21:25 IST

ಯಾಂಗನ್ (ಮ್ಯಾನ್ಮಾರ್), ಮಾ. 9: ಮ್ಯಾನ್ಮಾರ್‌ನ ಸೇನಾಡಳಿತದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ನೂರಾರು ಜನರನ್ನು ಸೋಮವಾರ ರಾತ್ರಿ ಯಾಂಗನ್ ನಗರದ ಒಂದೇ ಜಿಲ್ಲೆಯಲ್ಲಿ ಭದ್ರತಾ ಸಿಬ್ಬಂದಿ ಕೂಡಿಹಾಕಿದ್ದಾರೆ.

ಅವರಿಗೆ ಸ್ಥಳದಿಂದ ತೆರಳಲು ಮಂಗಳವಾರ ಅವಕಾಶ ನೀಡಲಾಗಿದೆ. ಪೊಲೀಸರು ಮತ್ತು ಇತರ ವಿಭಾಗದ ಭದ್ರತಾ ಸಿಬ್ಬಂದಿ ಪ್ರತಿಭಟನಕಾರರೊಂದಿಗೆ ಹಿಂಸಾತ್ಮಕವಾಗಿ ವರ್ತಿಸುತ್ತಿದ್ದು, ಅವರ ವಿರುದ್ಧ ದಮನ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಭದ್ರತಾ ಸಿಬ್ಬಂದಿ ಡಝನ್‌ಗಟ್ಟಳೆ ಪ್ರತಿಭಟನಕಾರರನ್ನು ಬಂಧಿಸಿದ್ದಾರೆ ಹಾಗೂ ಮನೆಗಳಿಗೆ ನುಗ್ಗಿ ನಿವಾಸಿಗಳನ್ನು ಪ್ರಶ್ನಿಸುತ್ತಿದ್ದಾರೆ.

ಭದ್ರತಾ ಪಡೆಗಳು ಸಂಚೌಂಗ್ ಜಿಲ್ಲೆಯಲ್ಲಿ ಪ್ರತಿಭಟನಕಾರರನ್ನು ಕೂಡಿ ಹಾಕಿದ್ದು, ಹಲವಾರು ಪ್ರತಿಭಟನಕಾರರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪ್ರತಿಭಟನಕಾರರು ಮಂಗಳವಾರ ‘ರಾಯ್ಟರ್ಸ್’ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ತಡೆಬೇಲಿಗಳನ್ನು ನಿರ್ಮಿಸಿದ ಪೊಲೀಸರು ಮಂಗಳವಾರ ಮುಂಜಾನೆ ಸ್ಥಳದಿಂದ ತೆರಳಿದ ಬಳಿಕ ತಾವು ಅಲ್ಲಿಂದ ತಪ್ಪಿಸಿಕೊಂಡೆವು ಎಂದು ಪ್ರತಿಭಟನಕಾರರ ಸಾಮಾಜಿಕ ಮಾಧ್ಯಮ ಪುಟಗಳು ಹೇಳಿವೆ.

5 ಮಾಧ್ಯಮ ಸಂಸ್ಥೆಗಳ ಪರವಾನಿಗೆ ರದ್ದು

ಮ್ಯಾನ್ಮಾರ್‌ನ ಐದು ಮಾಧ್ಯಮ ಸಂಸ್ಥೆಗಳ ಪರವಾನಿಗೆಯನ್ನು ರದ್ದುಪಡಿಸಲಾಗಿದೆ ಎಂದು ಸರಕಾರಿ ಟೆಲಿವಿಶನ್ ಎಂಆರ್‌ಟಿವಿ ಸೋಮವಾರ ಪ್ರಕಟಿಸಿದೆ.

ಮಿಝಿಮ, ಮ್ಯಾನ್ಮಾರ್ ನೌ, 7-ಡೇ, ಡಿವಿಬಿ ಮತ್ತು ಖಿಟ್ ತಿಟ್ ಮೀಡಿಯ- ಇವು ಪರವಾನಿಗೆ ರದ್ದುಗೊಂಡ ಮಾಧ್ಯಮ ಕಂಪೆನಿಗಳು.

ಕಳೆದ ತಿಂಗಳು ನಡೆದ ಸೇನಾ ಕ್ಷಿಪ್ರಕ್ರಾಂತಿಯ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳನ್ನು ಈ ಎಲ್ಲ ಮಾಧ್ಯಮ ಸಂಸ್ಥೆಗಳು ಸಕ್ರಿಯವಾಗಿ ವರದಿ ಮಾಡುತ್ತಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News