ಲೈಂಗಿಕ ಕಿರುಕುಳ ಪ್ರಕರಣ : ಎಸ್ಪಿ ಅಮಾನತಿಗೆ ಚುನಾವಣಾ ಆಯೋಗ ಸೂಚನೆ

Update: 2021-03-10 04:03 GMT
ಸಾಂದರ್ಭಿಕ ಚಿತ್ರ

ಚೆನ್ನೈ : ಲೈಂಗಿಕ ಕಿರುಕುಳ ಪ್ರಕರಣದ ಹಿನ್ನೆಲೆಯಲ್ಲಿ ಪೊಲೀಸ್ ಅಧೀಕ್ಷಕ ಡಿ.ಕಣ್ಣನ್ ಅವರನ್ನು ತಮಿಳುನಾಡು ಸರ್ಕಾರ ವರ್ಗಾವಣೆ ಮಾಡಿದ ಬೆನ್ನಲ್ಲೇ, ಅಧಿಕಾರಿಯನ್ನು ಅಮಾನತುಗೊಳಿಸಿ ಶಿಸ್ತುಕ್ರಮ ಆರಂಭಿಸುವಂತೆ ಭಾರತದ ಚುನಾವಣಾ ಆಯೋಗ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.

ತಮಿಳುನಾಡು ಮುಖ್ಯ ಚುನಾವಣಾ ಅಧಿಕಾರಿಯ ಮೂಲಕ ಎಸ್ಪಿ ವರ್ಗಾವಣೆಗೆ ರಾಜ್ಯ ಗೃಹ ಇಲಾಖೆ ಮನವಿ ಮಾಡಿತ್ತು. ಅದರಂತೆ ಅಧಿಕಾರಿಯನ್ನು ಚುನಾವಣೇತರ ಹುದ್ದೆಗೆ ವರ್ಗಾಯಿಸಲಾಗಿದೆ. ಇದೀಗ ಅವರನ್ನು ವಾಣಿಜ್ಯ ಅಪರಾಧಗಳ ತನಿಖಾ ವಿಭಾಗದ ಎಸ್ಪಿ ಆಗಿ ನಿಯೋಜಿಸಲಾಗಿದೆ ಎಂದು ಚುನಾವಣಾ ಆಯೋಗದ ಕಾರ್ಯದರ್ಶಿ ಕಚೇರಿ ಪ್ರಕಟಣೆ ಹೇಳಿದೆ.

ಮುಖ್ಯ ಚುನಾವಣಾ ಅಧಿಕಾರಿ ರಾಜ್ಯ ಗೃಹ ಇಲಾಖೆಗೆ ಪತ್ರ ಬರೆದಿದ್ದು, ಸಿಬಿ-ಸಿಐಡಿ ಘಟಕ ಕಣ್ಣನ್ ವಿರುದ್ಧ ಭಾರತೀಯ ದಂಡಸಂಹಿತೆ ಸೆಕ್ಷನ್ 354-ಎ(2), 341 ಮತ್ತು 506 (ಐ) ಅನ್ವಯ ಹಾಗೂ ತಮಿಳುನಾಡು ಮಹಿಳೆಯರ ಕಿರುಕುಳ ನಿಷೇಧ ಕಾಯ್ದೆ-1998ರ ಸೆಕ್ಷನ್ 4ರ ಅನ್ವಯ ಪ್ರಕರಣ ದಾಖಸಿರುವುದನ್ನು ಉಲ್ಲೇಖಿಸಿದೆ.

"ಪ್ರಕರಣದ ಗಂಭೀರತೆ ಹಿನ್ನೆಲೆಯಲ್ಲಿ ತಮಿಳುನಾಡು ಗೃಹ ಕಾರ್ಯದರ್ಶಿಗಳು ಡಿ.ಕಣ್ಣನ್ ಅವರನ್ನು ತಕ್ಷಣ ಅಮಾನತುಪಡಿಸಿ ಶಿಸ್ತು ಪ್ರಕ್ರಿಯೆ ಆರಂಭಿಸಬೇಕು" ಎಂದು ಪತ್ರದಲ್ಲಿ ಸೂಚಿಸಲಾಗಿದೆ. ಬುಧವಾರದ ಒಳಗಾಗಿ ಈ ಕುರಿತು ಬದ್ಧತಾ ವರದಿಯನ್ನು ಸಲ್ಲಿಸುವಂತೆ ಮಖ್ಯ ಕಾರ್ಯದರ್ಶಿಗೆ ಆದೇಶಿಸಲಾಗಿದೆ.

ವಿಶೇಷ ಡಿಜಿಪಿ ವಿರುದ್ಧ ಲೈಂಗಿಕ ಕಿರುಕುಳದ ದೂರು ನೀಡಲು ಮಹಿಳಾ ಐಪಿಎಸ್ ಅಧಿಕಾರಿಯೊಬ್ಬರು ಚೆನ್ನೈಗೆ ತೆರಳದಂತೆ ತಡೆದ ಆರೋಪಕ್ಕೆ ಸಂಬಂಧಿಸಿ ಕಣ್ಣನ್ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಮಹಿಳೆಯ ದೂರಿನ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರ ಆಂತರಿಕ ದೂರು ಸಮಿತಿಯನ್ನು ರಚಿಸಿತ್ತು. ಇದಾದ ಹಲವು ದಿನಗಳ ಬಳಿಕ ಕಣ್ಣನ್ ಅವರನ್ನು ಮಂಗಳವಾರ ವರ್ಗಾಯಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News