ಉತ್ತರಪ್ರದೇಶ: ಸಾಮೂಹಿಕ ಅತ್ಯಾಚಾರ ದೂರು ದಾಖಲಿಸಿದ ಮರುದಿನವೇ ಸಂತ್ರಸ್ತೆ ತಂದೆ 'ಅಪಘಾತಕ್ಕೆ' ಬಲಿ

Update: 2021-03-10 19:11 GMT

ಕಾನ್ಪುರ,ಮಾ.10: ಎರಡು ದಿನಗಳ ಹಿಂದೆ ಕಾನ್ಪುರ ಜಿಲ್ಲೆಯ ತನ್ನ ಗ್ರಾಮದಲ್ಲಿ ಮೂವರಿಂದ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ 13ರ ಹರೆಯದ ಬಾಲಕಿಯ ತಂದೆ ಬುಧವಾರ ಬೆಳಿಗ್ಗೆ ಆಕೆಯನ್ನು ವೈದ್ಯಕೀಯ ತಪಾಸಣೆಗಾಗಿ ದಾಖಲಿಸಲಾಗಿರುವ ಆಸ್ಪತ್ರೆಯ ಹೊರಗೆ ಟ್ರಕ್ ಡಿಕ್ಕಿಯಾಗಿ ಮೃತಪಟ್ಟಿದ್ದಾರೆ.

ಸಾಮೂಹಿಕ ಅತ್ಯಾಚಾರ ಪ್ರಕರಣದ ಮೂವರು ಆರೋಪಿಗಳ ಪೈಕಿ ದೀಪು ಯಾದವ ಮತ್ತು ಸೌರಭ್ ಯಾದವ ಸೋದರರಾಗಿದ್ದು ಅವರ ತಂದೆ ಕಾನ್ಪುರದಿಂದ ಸುಮಾರು 100 ಕಿ.ಮೀ.ದೂರದ ಕನೌಜ್ ಜಿಲ್ಲೆಯಲ್ಲಿ ಪಿಎಸ್‌ಐ ಆಗಿದ್ದಾರೆ. ಮೂರನೆಯ ಆರೋಪಿ ಗೋಲು ಯಾದವ ಎಂಬಾತನ್ನು ಪೊಲೀಸರು ಬಂಧಿಸಿದ್ದಾರೆ.

ಸಂತ್ರಸ್ತ ಬಾಲಕಿಯ ಕುಟುಂಬವು ಪೊಲೀಸರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದೆ. ಸಾಮೂಹಿಕ ಅತ್ಯಾಚಾರ ಪ್ರಕರಣವು ದಾಖಲಾದಾಗಿನಿಂದ ಆರೋಪಿಗಳ ಕುಟುಂಬವು ತಮಗೆ ನಿರಂತರವಾಗಿ ಬೆದರಿಕೆಯನ್ನೊಡ್ಡುತ್ತಿದೆ ಮತ್ತು ಪೊಲೀಸರು ಇದರಲ್ಲಿ ಶಾಮೀಲಾಗಿದ್ದಾರೆ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ.

‘ನನ್ನ ಮಗನನ್ನು ಕೊಲೆ ಮಾಡಿದ್ದಾರೆ. ಪೊಲೀಸರು ಇದರಲ್ಲಿ ಶಾಮೀಲಾಗಿದ್ದಾರೆ ’ಎಂದು ಸಂತ್ರಸ್ತ ಬಾಲಕಿಯ ಶೋಕತಪ್ತ ಅಜ್ಜ ಸುದ್ದಿಗಾರರಿಗೆ ತಿಳಿಸಿದರು.

ತಾವು ಬೆದರಿಕೆಗಳನ್ನು ಎದುರಿಸುತ್ತಿದ್ದೇವೆ ಎಂದು ಕುಟುಂಬದ ಇನ್ನೋರ್ವ ಸದಸ್ಯ ಕೂಡ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದ್ದ. ‘ನಾವು ದೂರು ಸಲ್ಲಿಸಿದ ಬೆನ್ನಲ್ಲೇ ಮುಖ್ಯ ಆರೋಪಿಯ ಅಣ್ಣ ನಮಗೆ ಬೆದರಿಕೆಯೊಡ್ಡಲು ಆರಂಭಿಸಿದ್ದ. ತನ್ನ ತಂದೆ ಪಿಎಸ್‌ಐ ಆಗಿದ್ದಾರೆ ಮತ್ತು ನಿಮ್ಮ ವಿರುದ್ಧ ಮತ್ತೆ ಇಂತಹುದೇ ಕ್ರೌರ್ಯವನ್ನು ನಡೆಸುತ್ತೇವೆ ಎಂದು ಆತ ಹೇಳಿದ್ದ ’ಎಂದು ಆತ ತಿಳಿಸಿದ್ದ.

ಸಂತ್ರಸ್ತ ಬಾಲಕಿಯ ವೈದ್ಯಕೀಯ ತಪಾಸಣೆ ನಡೆಯುತ್ತಿದ್ದರಿಂದ ಆಕೆಯ ತಂದೆ ಚಹಾ ಕುಡಿಯಲೆಂದು ಆಸ್ಪತ್ರೆಯಿಂದ ಹೊರಗೆ ಹೆಜ್ಜೆಯನ್ನಿರಿಸಿದ್ದರು. ಇದೇ ವೇಳೆ ಅವರಿಗೆ ಟ್ರಕ್ ಢಿಕ್ಕಿ ಹೊಡೆದಿತ್ತು. ಅವರನ್ನು ಕಾನ್ಪುರ ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಬದುಕುಳಿಯಲಿಲ್ಲ. ಅಪಘಾತ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದ್ದು,ತನಿಖೆ ನಡೆಯುತ್ತಿದೆ ಎಂದು ಕಾನ್ಪುರ ಪೊಲೀಸ್ ಮುಖ್ಯಸ್ಥ ಡಾ.ಪ್ರೀತಿಂದರ್ ಸಿಂಗ್ ತಿಳಿಸಿದರು.

ಸಂತ್ರಸ್ತ ಬಾಲಕಿಯ ದೇಹಸ್ಥಿತಿ ಚೆನ್ನಾಗಿದೆ. ಪ್ರಕರಣದ ತನಿಖೆಗಾಗಿ ಐದು ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News