ಮಹಾರಾಷ್ಟ್ರದಲ್ಲಿ ಕನ್ನಡ ನಾಮಫಲಕಕ್ಕೆ ಕಪ್ಪು ಮಸಿ: ಕರವೇ-ಶಿವಸೇನಾ ಮುಖಂಡರ ನಡುವೆ ವಾಗ್ವಾದ

Update: 2021-03-12 17:27 GMT

ಬೆಳಗಾವಿ, ಮಾ.12: ಮಹಾರಾಷ್ಟ್ರದ ಕೊಲ್ಲಾಪುರದ ಮಹಾಲಕ್ಷ್ಮಿ ಯಾತ್ರಿ ನಿವಾಸದ ಕಟ್ಟಡದ ಮೇಲಿದ್ದ ಕನ್ನಡ ಅಕ್ಷರಗಳಿಗೆ ಶಿವಸೇನೆ ಕಾರ್ಯಕರ್ತರು ಕಪ್ಪು ಮಸಿ ಬಳಿದಿರುವುದನ್ನು ಖಂಡಿಸಿ ಕರವೇ ಕಾರ್ಯಕರ್ತರು, ಬೆಳಗಾವಿಯಲ್ಲಿ ಮರಾಠಿ ನಾಮಫಲಕ್ಕೆ ಕಪ್ಪು ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಿವಸೇನೆ ಹಾಗೂ ಎಂಇಎಸ್ ಕಾರ್ಯಕರ್ತರ ಕನ್ನಡ ವಿರೋಧಿ ನೀತಿಯನ್ನು ಖಂಡಿಸಿ, ಕನ್ನಡ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ದೀಪಕ್ ಗುಡಗನಟ್ಟಿ ನೇತೃತ್ವದಲ್ಲಿ ಕರವೇ ಕಾರ್ಯಕರ್ತರು ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-4ರ ಪಕ್ಕದ ಹೋಟೆಲ್‍ಗಳ ಮರಾಠಿ ನಾಮಫಲಕಗಳಿಗೆ ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮರಾಠಿ ನಾಮಫಲಕ ಹಾಕದಂತೆ ಹೋಟೆಲ್ ಮಾಲಕರಿಗೆ ಕರವೇ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ.

ಈ ವೇಳೆ ಶಿವಸೇನಾ ಮುಖಂಡ ಪ್ರಕಾಶ ಶಿರೋಳಕರ ಅವರ ಕಾರಿನ ಮುಂಭಾಗದಲ್ಲಿದ್ದ ಮರಾಠಿ ಬೋರ್ಡ್ ಹಾಗೂ ನಂಬರ್ ಪ್ಲೇಟ್‍ನ್ನು ಕರವೇ ಕಾರ್ಯಕರ್ತರು ಕಿತ್ತು ಹಾಕಿದ್ದು, ಎರಡು ಸಂಘಟನೆಗಳ ಮುಖಂಡರ ನಡುವೆ ವಾಗ್ವಾದ ನಡೆದಿದೆ. ಕೂಡಲೇ ಪೊಲೀಸರ ಮಧ್ಯೆಪ್ರವೇಶಿಸಿ ಪರಿಸ್ಥಿತಿಯನ್ನು ನಿಭಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News