ಅಂಬಾನಿ ನಿವಾಸ ಸಮೀಪ ಸ್ಫೋಟಕ ಪತ್ತೆ ಪ್ರಕರಣ: ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಝೆ ವಿಚಾರಣೆ ನಡೆಸಿದ ಎನ್‍ಐಎ

Update: 2021-03-13 14:19 GMT

ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ನಿವಾಸದ ಬಳಿ ವಾಹನದಲ್ಲಿ ಇತ್ತೀಚೆಗೆ ಸ್ಫೋಟಕಗಳು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಎನ್‍ಐಎ ಅಧಿಕಾರಿಗಳು ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಝೆ ಅವರನ್ನು ವಿಚಾರಣೆ ನಡೆಸಿದ್ದಾರೆ.

ತಮ್ಮನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಹಾಗೂ ಜಗತ್ತಿಗೆ ʼಗುಡ್ ಬೈ ಹೇಳುವ ಸಮಯ' ಹತ್ತಿರವಾಗುತ್ತಿದೆ ಎಂದು ಬೆಳಿಗ್ಗೆ ಸಚಿನ್ ಅವರು ತಮ್ಮ ವಾಟ್ಸ್ಯಾಪ್ ಸ್ಟೇಟಸ್‍ನಲ್ಲಿ ಹಾಕಿಕೊಂಡಿದ್ದರು ಎನ್ನಲಾಗಿದೆ.

"ಮಾರ್ಚ್ 3, 2004ರಂದು ಸಿಐಡಿಯ ಸಹ ಅಧಿಕಾರಿಗಳು ನನ್ನನ್ನು ಸುಳ್ಳು ಪ್ರಕರಣದಲ್ಲಿ ಬಂಧಿಸಿದರು.  ಆ ಪ್ರಕರಣ ಇನ್ನೂ ಇತ್ಯರ್ಥಗೊಂಡಿಲ್ಲ. ಈಗ ಮತ್ತೆ ಇತಿಹಾಸ  ಮರುಕಳಿಸುತ್ತಿದೆ ಎಂದು ಅನಿಸುತ್ತಿದೆ. ನನ್ನ ಸಹ ಅಧಿಕಾರಿಗಳು ನನ್ನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲು ಯತ್ನಿಸುತ್ತಿದ್ದಾರೆ. ಆದರೆ ಈ ಬಾರಿಯ ಸನ್ನಿವೇಶದಲ್ಲಿ ಅಲ್ಪ ವ್ಯತ್ಯಾಸವಿದೆ.  ಆಗ ಪ್ರಾಯಶಃ ನನಗೆ 17 ವರ್ಷಗಳ ಭರವಸೆ, ತಾಳ್ಮೆ,  ಜೀವನ ಮತ್ತು ಸೇವೆ ಕೂಡ ಇತ್ತು. ಆದರೆ ಈಗ  ನನಗೆ 17 ವರ್ಷಗಳ ಮುಂದಿನ ಜೀವನ, ಸೇವೆ ಅಥವಾ  ಬದುಕಲು ಸಹನೆಯೂ ಇಲ್ಲ. ಜಗತ್ತಿಗೆ ಗುಡ್ ಬೈ ಹೇಳುವ ಸಮಯ ಹತ್ತಿರವಾಗುತ್ತಿದೆ ಎಂದು ನನಗನಿಸುತ್ತದೆ" ಎಂದು ಅವರು ತಮ್ಮ ಸ್ಟೇಟಸ್‍ನಲ್ಲಿ ಬರೆದಿದ್ದರು.

ಅಂಬಾನಿ ನಿವಾಸ ಸಮೀಪ ಸ್ಫೋಟಕಗಳು ತುಂಬಿದ್ದ ಕಾರು ಪತ್ತೆ ಪ್ರಕರಣದ ಮೊದಲ ತನಿಖಾಧಿಕಾರಿ ಸಚಿನ್ ಆಗಿದ್ದರೂ ನಂತರ ಅವರನ್ನು ಆ ಹುದ್ದೆಯಿಂದ ಕಿತ್ತು ಹಾಕಲಾಗಿತ್ತು.  ಸ್ಫೋಟಕ ತುಂಬಿದ್ದ ಕಾರಿನ ಮಾಲಿಕ ಮನ್ಸುಖ್ ಹಿರನ್ ಸಂಶಯಾಸ್ಪದವಾಗಿ  ಮೃತಪಟ್ಟ ನಂತರ ಆತನ ಕುಟುಂಬ ಸದಸ್ಯರು ಹಾಗೂ ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಅವರು ಸಚಿನ್ ವಿರುದ್ಧ ಗಂಭೀರ ಆರೋಪ ಹೊರಿಸಿದ್ದರು. ಮನ್ಸುಖ್ ಕುಟುಂಬವಂತೂ  ಈ ಪ್ರಕರಣದಲ್ಲಿ ಸಚಿನ್ ಅವರು ಮನ್ಸುಖ್ ಅವರನ್ನು ಬಳಸಿಕೊಂಡು ನಂತರ ಕೊಲೆ ಮಾಡಿರಬಹುದು ಎಂದು ಆರೋಪಿಸಿತ್ತು.

ಶುಕ್ರವಾರವಷ್ಟೇ ಸಚಿನ್ ಅವರನ್ನು ಕ್ರೈಂ ಬ್ರ್ಯಾಂಚ್‍ನಿಂದ ಸ್ಪೆಷಲ್ ಬ್ರ್ಯಾಂಚ್‍ಗೆ  ವರ್ಗಾಯಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News