×
Ad

ಕೇಂದ್ರ ಸರಕಾರದಿಂದ ಕೋವಿಶೀಲ್ಡ್‌ನ ಹಿನ್ನಡೆಗಳ ಪರಿಶೀಲನೆ

Update: 2021-03-13 23:39 IST

ಹೊಸದಿಲ್ಲಿ, ಮಾ. 13: ಆಸ್ಟ್ರಾ ಝೆನೆಕಾ-ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಕೋವಿಶೀಲ್ಡ್ ಲಸಿಕೆ ಕೆಲವರಲ್ಲಿ ಅಪಾಯಕಾರಿ ರಕ್ತ ಹೆಪ್ಪುಗಟ್ಟುವಿಕೆ ಕಾರಣವಾಗಬಹುದೆಂಬ ಆತಂಕದ ನಡುವೆ ಕೋವಿಶೀಲ್ಡ್ ಲಸಿಕೆಯ ಬಳಕೆಯನ್ನು ಕನಿಷ್ಠ 10 ದೇಶಗಳು ಸ್ಥಗಿತಗೊಳಿಸಿವೆ.

ಈ ಹಿನ್ನೆಲೆಯಲ್ಲಿ ಕೋವಿಶೀಲ್ಡ್ ಲಸಿಕೆ ತೆಗೆದುಕೊಂಡ ಬಳಿಕ ಸಂಭವಿಸಿದ ಜನರ ಸಾವು ಹಾಗೂ ಆಸ್ಪತ್ರೆ ದಾಖಲಾದ ಬಗ್ಗೆ ಪರಿಶೀಲನೆ ನಡೆಸಲು ಕೇಂದ್ರ ಸರಕಾರ ನಿರ್ಧರಿಸಿದೆ. ಲಸಿಕೆಯನ್ನು ಸಿರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದಿಸಿ ಮಾರಾಟ ಮಾಡುತ್ತಿದೆ. ಆಸ್ಟ್ರಿಯಾ, ಈಸ್ಟೋನಿಯಾ, ಲಾಟ್ವಿಯಾ, ಲಿಥುವಾನಿಯಾ ಹಾಗೂ ಲುಕ್ಸೆಂಬರ್ಗ್‌ನಂತಹ ದೇಶಗಳು ಆಸ್ಟ್ರಾಝೆನೆಕಾ ಲಸಿಕೆಯ ಬಳಕೆಯ ಒಂದು ಬ್ಯಾಚ್ ಅನ್ನು ಹಿಂಪಡೆದಿದೆ.

ಡೆನ್ಮಾರ್ಕ್ ಸಹಿತ ಇತರ ದೇಶಗಳು ಆಸ್ಟಾಝೆನೆಕಾದ ಎಲ್ಲಾ ಲಸಿಕೆಯನ್ನು ಬಳಸುವುದನ್ನು ಎರಡು ವಾರಗಳ ಕಾಲ ರದ್ದುಗೊಳಿಸಿದೆ. ಯುರೋಪ್‌ನ ವಿವಿಧ ದೇಶಗಳಲ್ಲಿ ಆಸ್ಟ್ರಾಝೆನಾಕದ ಲಸಿಕೆ ಸ್ವೀಕರಿಸಿದ ಕನಿಷ್ಠ 22 ಮಂದಿಯಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಹಾಗೂ ಶ್ವಾಸಕೋಶದ ಧಮನಿ ಬಂಧ ಉಂಟಾಗಿದೆ ಎಂದು ವರದಿ ಹೇಳಿದೆ. ಆಸ್ಟ್ರಾಝೆನಾಕದ ಲಸಿಕೆ ಬಳಸುವುದನ್ನು ಸ್ಥಗಿತಗೊಳಿಸಲು ಯಾವುದೇ ಕಾರಣ ಇಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಶುಕ್ರವಾರ ಹೇಳಿದೆ. ಇದರ ಲಸಿಕೆ ಸಲಹಾ ಸಮಿತಿ ಸುರಕ್ಷಾ ದತ್ತಾಂಶವನ್ನು ಪರಿಶೀಲಿಸುತ್ತಿದೆ.

ಲಸಿಕೆ ಹಾಗೂ ರಕ್ತ ಹೆಪ್ಪುಗಟ್ಟುವಿಕೆ ನಡುವೆ ಯಾವುದೇ ಸಂಬಂಧ ಇರುವುದು ಸಾಬೀತಾಗಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಒತ್ತಿ ಹೇಳಿದೆ. ಭಾರತದ ಸನ್ನಿವೇಶದಲ್ಲಿ ಈ ಬೆಳವಣಿಗೆಯನ್ನು ಪರಿಶೀಲಿಸಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹಾಗೂ ಲಸಿಕೆಯ ಬಳಿಕ ಪ್ರತಿಕೂಲ ಘಟನೆಗಳ ಕುರಿತ ರಾಷ್ಟ್ರೀಯ ಸಮಿತಿಯ ಹಿರಿಯ ಅಧಿಕಾರಿ ಹೇಳಿದ್ದಾರೆ. ‘‘ಕೋವಿಶೀಲ್ಡ್ ಲಸಿಕೆ ಸ್ವೀಕರಿಸಿದವರಲ್ಲಿ ಕಳವಳಪಡುವ ಯಾವುದೇ ಅಂಶ ನಮಗೆ ಇದುವರೆಗೆ ಕಂಡು ಬಂದಿಲ್ಲ. ಹೊಸ ಮಾಹಿತಿಯ ಹಿನ್ನೆಲೆಯಲ್ಲಿ ಲಸಿಕೆ ತೆಗೆದುಕೊಂಡವರ ಸಾವು ಹಾಗೂ ಆಸ್ಪತ್ರೆಗೆ ದಾಖಲಾಗಿರುವುದನ್ನು ಮತ್ತೊಮ್ಮೆ ಪರಿಶೀಲಿಸಲಿದ್ದೇವೆ’’ ಎಂದು ಎಇಎಫ್‌ಐ ಸಮಿತಿಯ ಸಲಹೆಗಾರ ನರೇಂದ್ರ ಅರೋರಾ ಹೇಳಿದ್ದಾರೆ.

ಭಾರತದಲ್ಲಿ ಕೊರೋನ ಲಸಿಕೆ ತೆಗೆದುಕೊಂಡ 2.63 ಕೋಟಿ ಜನರಲ್ಲಿ ಶೇ. 90ರಷ್ಟು ಕೋವಿಶೀಲ್ಡ್ ಲಸಿಕೆ ತೆಗೆದುಕೊಂಡಿದ್ದಾರೆ. ಈ ಲಸಿಕೆ ತೆಗೆದುಕೊಂಡ ಕೆಲವು ದಿನಗಳ ಒಳಗೆ ಯಾರೊಬ್ಬರೂ ಮೃತಪಟ್ಟಿರುವುದು ವರದಿಯಾಗಿಲ್ಲ. ಆದರೆ, ರಾಷ್ಟ್ರೀಯ ಸಮಿತಿ ಈ ಬಗ್ಗೆ ಪರಿಶೀಲನೆಯನ್ನು ಇನ್ನಷ್ಟೇ ಪೂರ್ಣಗೊಳಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News