ಚುನಾವಣಾ ಟಿಕೆಟ್ ನೀಡದ್ದಕ್ಕೆ ತಲೆ ಬೋಳಿಸಿಕೊಂಡ ಕೇರಳ ಕಾಂಗ್ರೆಸ್ ಮಹಿಳಾ ವಿಭಾಗದ ಅಧ್ಯಕ್ಷೆ
ತಿರುವನಂತಪುರ: ಕೇರಳ ಕಾಂಗ್ರೆಸ್ ಗೆ ಮುಜುಗರ ತರುವ ಘಟನೆಯೊಂದು ರವಿವಾರ ನಡೆದಿದ್ದು, ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಸಿಗಲಿಲ್ಲ ಎಂಬ ನೋವಿನಲ್ಲಿ ಮಹಿಳಾ ವಿಭಾಗದ ಅಧ್ಯಕ್ಷೆ ಲಥಿಕಾ ಸುಭಾಶ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಲ್ಲದೆ, ಕಾಂಗ್ರೆಸ್ ಕಚೇರಿಯೆದುರೇ ತಲೆ ಬೋಳಿಸಿಕೊಂಡು ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.
ಹೊಸದಿಲ್ಲಿಯಲ್ಲಿ ಕಾಂಗ್ರೆಸ್ ಪಕ್ಷ ಎ.6ರಂದು ನಡೆಯಲಿರುವ ಕೇರಳ ವಿಧಾನಸಭೆ ಚುನಾವಣೆಗೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ ಬೆನ್ನಿಗೇ ಎಟ್ಟಮನೂರ್ ಕ್ಷೇತ್ರದಿಂದ ತನಗೆ ಟಿಕೆಟ್ ನಿರಾಕರಿಸಿದ್ದಕ್ಕೆ ಆಕ್ರೋಶಗೊಂಡ 56ರ ವಯಸ್ಸಿನ ಹಿರಿಯ ನಾಯಕಿ ಲಥಿಕಾ ತಿರುವನಂತಪುರದಲ್ಲಿರುವ ಕಾಂಗ್ರೆಸ್ ಕಚೇರಿ ಎದುರು ತಲೆ ಕೂದಲು ಬೋಳಿಸಿಕೊಂಡರು.
ಹೊಸದಿಲ್ಲಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಎಂ.ರಾಮಚಂದ್ರನ್ ಪಕ್ಷದ ಪಟ್ಟಿಯನ್ನು ಬಿಡುಗಡೆ ಮಾಡಿದ ಬೆನ್ನಿಗೇ ಪಕ್ಷದ ಮುಖ್ಯ ಕಚೇರಿ ಇಂದಿರಾ ಭವನದಲ್ಲಿ ಸುದ್ದಿಗಾರರನ್ನು ಲಥಿಕಾ ಭೇಟಿಯಾದರು. ಕಾಂಗ್ರೆಸ್ ಇಂದು ಬಿಡುಗಡೆ ಮಾಡಿರುವ 86 ಅಭ್ಯರ್ಥಿಗಳ ಪಟ್ಟಿಯಲ್ಲಿ 9 ಮಂದಿ ಮಹಿಳೆಯರಿಗೆ ಅವಕಾಶ ನೀಡಲಾಗಿದೆ.
ಪಕ್ಷದ ನಾಯಕತ್ವವು ಚುನಾವಣಾ ಟಿಕೆಟ್ ನೀಡದೇ ಇರುವುದನ್ನು ಪ್ರತಿಭಟಿಸಿ ಕೇರಳದಲ್ಲಿ ಇದೇ ಮೊದಲ ಬಾರಿ ರಾಜಕೀಯ ಪಕ್ಷದ ನಾಯಕಿಯೊಬ್ಬರು ಈ ರೀತಿ ಕಠಿಣ ಹೆಜ್ಜೆ ಇಟ್ಟಿದ್ದಾರೆ.
ಪಕ್ಷದ ನಾಯಕರು ಹಾಗೂ ಕಾರ್ಯಕರ್ತರೊಂದಿಗೆ ಚಿರಪರಿಚಿತರಾಗಿದ್ದ ಲಥಿಕಾ ಸುಭಾಶ್ 2018ರಲ್ಲಿ ಬಿಂಧು ಕೃಷ್ಣ ಅವರಿಂದ ಮಹಿಳಾ ಕಾಂಗ್ರೆಸ್ ಮುಖ್ಯಸ್ಥೆ ಸ್ಥಾನವನ್ನು ವಹಿಸಿಕೊಂಡಿದ್ದರು. ಬಿಂಧು ಅವರು ಕೊಲ್ಲಂನಲ್ಲಿ ಪಕ್ಷದ ಅಭ್ಯರ್ಥಿಯಾಗಿದ್ದರು.
ಇತರ ಅಭ್ಯರ್ಥಿ ಗಳ ಯಶಸ್ಸಿಗಾಗಿ ಶ್ರಮಿಸುತ್ತಿರುವ ಪಕ್ಷದ ಎಲ್ಲ ಮಹಿಳೆಯರ ಪರವಾಗಿ ಪ್ರತಿಭಟನೆಯ ಸಂಕೇತವಾಗಿ ನನ್ನ ತಲೆ ಬೋಳಿಸಿಕೊಂಡಿದ್ದೇನೆ. ಕಳೆದ ಕೆಲವು ವರ್ಷಗಳಿಂದ ನಾಯಕರು ನಮ್ಮನ್ನು ನಿರ್ಲಕ್ಷಿಸುತ್ತಿದ್ದಾರೆ. ತನಗೆ ಅರ್ಹವಿರುವ ಚುನಾವಣಾ ಟಿಕೆಟ್ ಪಡೆಯಲಾಗದೇ ಇರುವುದಕ್ಕೆ ಈ ಹುದ್ದೆಯಲ್ಲಿ ಮುಂದುವರಿಯಲಾರೆ. ಪಕ್ಷಕ್ಕಾಗಿ ಕೆಲಸ ಮಾಡುತ್ತಿರುವ ಹಿರಿಯ ಮಹಿಳೆಯರನ್ನು ಸಂಪೂರ್ಣ ಕಡೆಗಣಿಸಲಾಗುತ್ತಿದೆ. ನಾನು ಕಾಂಗ್ರೆಸ್ ಪಕ್ಷವನ್ನು ತ್ಯಜಿಸಲಾರೆ. ಇತರ ಯಾವುದೇ ಪಕ್ಷವನ್ನು ಸೇರಲಾರೆ. ಆದರೆ, ಇಂದಿನಿಂದ ಸಾಮಾನ್ಯ ಕಾರ್ಯಕರ್ತೆಯಾಗಿ ಇರುತ್ತೇನೆ ಎಂದು ಲಥಿಕಾ ಹೇಳಿದ್ದಾರೆ.